ಬೆಂಗಳೂರು: ಆಡಳಿತ ಸುಧಾರಣೆ, ದಕ್ಷತೆ, ಕ್ಷಮತೆ ಹೆಸರಿನಲ್ಲಿ ವಿಧಾನಸೌಧ, ವಿಧಾನಸಭೆ ಸಭಾಂಗಣ, ಶಾಸಕರ ಭವನದಲ್ಲಿ ಕೈಗೊಂಡ ಚಟುವಟಿಕೆಗಳಲ್ಲಿ ಭಾರಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದು, ಸ್ಪೀಕರ್ ಯು.ಟಿ.ಖಾದರ್ ಮೆತ್ತಿಕೊಂಡಿರುವ ಈ ಕಳಂಕದ ಸತ್ಯಾಸತ್ಯತೆ ಸ್ಪಷ್ಟವಾಗಲು ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಮಾಜಿ ಸ್ಪೀಕರ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅಧಿಕೃತ ಜಾಲತಾಣದಲ್ಲಿ ಲಭ್ಯ ದಾಖಲೆಗಳ ಪ್ರತಿಗಳನ್ನು ಮಂಡಿಸಿ, ಭ್ರಷ್ಟಾಚಾರ ಆರೋಪಗಳಿಗೆ ಕಾರಣದವಾದ ಪ್ರಮುಖಾಂಶಗಳನ್ನು ವಿವರಿಸಿ, ಕಳಂಕ ಮುಕ್ತರಾಗಲು ಸ್ಚತಃ ಸ್ಪೀಕರ್ ಯು.ಟಿ.ಖಾದರ್ ಅವರು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಹೇಳಿದರು.
ಆಡಳಿತ ಸುಧಾರಣೆ ಹೆಸರಿನಲ್ಲಿ ನಡೆದಿರುವ ಕೆಲಸಗಳ ಬಗ್ಗೆ ವಿಧಾನಸಭೆ ಸಚಿವಾಲಯದ ಅಧಿಕಾರಿಗಳ ಅಭಿಪ್ರಾಯ ಏನಿತ್ತು ಎಂಬುದು ಗೊತ್ತಾಗಬೇಕಿದೆ. ಲಭ್ಯ ಮಾಹಿತಿ ಪ್ರಕಾರ ಆರ್ಥಿಕ ಇಲಾಖೆಯು ಪ್ರಸ್ತಾವನೆಗಳು ಅಪ್ರಸ್ತುತ, ಅನಗತ್ಯವೆಂದು ಕಡತ ಹಿಂತಿರುಗಿಸಿದ್ದು, ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಮೌಖಿಕ ಸೂಚನೆ ನೀಡಿ ಅನುಮೋದನೆ ಕೊಡಿಸಿದ ದೂರುಗಳಿವೆ.
ಸ್ಪೀಕರ್ ಜತೆಗೆ ಸಿಎಂ ಸಿಧ್ದರಾಮಯ್ಯ ಅವರನ್ನು ಭ್ರಷ್ಟಾಚಾರದ ಆಪಾದನೆ ಸುತ್ತಿಕೊಂಡಿದೆ. ಇನ್ನೂ ಒಂದು ಅಚ್ಚರಿ ಸಂಗತಿಯೆಂದರೆ ಪ್ರತಿಯೊಂದು ಕೆಲಸಕ್ಕೂ ಕೆಟಿಪಿಪಿ ಕಾಯ್ದೆಯಡಿ 4ಜಿ ವಿನಾಯಿತಿ ಪಡೆದಿದ್ದು, ಅಂಥ ತುರ್ತು ಅಗತ್ಯವೇನಿತ್ತು. ಗುತ್ತಿಗೆ ಆದೇಶ, ಯಾರಿಗೆ ಗುತ್ತಿಗೆ ಕೊಟ್ಟರು, ಆಯ್ದ ಏಜನ್ಸಿಗಳಿಗೆ ಈ ಕೆಲಸದ ಒಪ್ಪಿಸಿದ್ಹೇಗೆ ಇತ್ಯಾದಿ ವಿಚಾರಗಳು ಪ್ರತ್ಯೇಕವಾಗಿವೆ. ಬಹು ಮಾಧ್ಯಮ, ಸಾರ್ವಜನಿಕವಾಗಿ ಭ್ರಷ್ಟಾಚಾರದ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ನ್ಯಾಯಾಂಗ ತನಿಖೆಯೇ ಸೂಕ್ತವೆಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪುನರುಚ್ಚರಿಸಿದರು.
ವಿಧಾನಸಭೆ ಸಭಾಂಗಣ ಪ್ರವೇಶದ ಮುಖ್ಯದ್ವಾರಕ್ಕೆ ಕಟ್ಟಿಗೆ ಚೌಕಟ್ಟು ಅಳವಡಿಕೆಯೊಂದಿಗೆ ಭ್ರಷ್ಟಾಚಾರ ಸಂಶಯಕ್ಕೆ ಬುನಾದಿ ಬಿದ್ದಿದೆ. ಶಾಸಕರ ಭವನದ ಕೊಠಡಿಗಳಿಗೆ ಅಳವಡಿಸಿದ ಸ್ಮಾರ್ಟ್ ಕೀಲಿಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ 16 ಸಾವಿರ ರೂ.ಗಳಿದ್ದರೆ, 49 ಸಾವಿರ ರೂ.ಗಳಿಗೆ ಖರೀದಿಸಲಾಗಿದೆ. ಸೇಫ್ಟಿ ಲಾಕರ್ 30 ಸಾವಿರ ರೂ.ಗಳಿದ್ದರೆ 90,500 ರೂ.ಗೆ ಖರೀದಿಸಲಾಗಿದೆ. ನೀರು ಶುದ್ಧೀಕರಣ ಉಪಕರಣ, ಪುಸ್ತಕ ಮೇಳಕ್ಕೆ 4.50 ಕೋಟಿ ರೂ ವೆಚ್ಚ, ಕಾರ್ಪೆಟ್, ವಿಧಾನಸಭೆ ಸಭಾಂಗದಣಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ಸೌಲಭ್ಯ, ಶಾಸಕರಿಗೆ ಉಪಾಹಾರ, ಊಟ ಹೀಗೆ ಪ್ರತಿಯೊಂದು ಹಂತದಲ್ಲಿ ಅವ್ಯವಹಾರ ನುಸುಳಿದೆ ಎಂದು ವಿವರಿಸಿದರು.
ಸ್ಪೀಕರ್ ವಿದೇಶ ಪ್ರವಾಸ, ಸದನದ ಒಳಗೆ-ಹೊರಗೆ ಪಕ್ಷಪಾತಿ ನಿಲುವು, ಆಡಳಿತ ಪಕ್ಷದ ಕೈಗೊಂಬೆಯಂತೆ ವರ್ತನೆ ಆರೋಪಗಳಿವೆ. ಖಾದರ್ ಗೆ ಮಾತ್ರವಲ್ಲ ಪವಿತ್ರವಾದ ಸ್ಪೀಕರ್ ಪೀಠ, ಪ್ರಮುಖ ಜವಾಬ್ದಾರಿ ಸ್ಥಾನದಲ್ಲಿರುವ ಮುಖ್ಯಮಂತ್ರಿಗೂ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ. ಹೈಕೋರ್ಟದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಪಕ್ಷಾತೀತವಾಗಿ ಶಾಸಕರು ಧ್ವನಿ ಎತ್ತಬೇಕು. ಈ ವಿವರಗಳನ್ನು ರಾಜ್ಯಪಾಲರ ಗಮನಕ್ಕೆ ತರುವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.