ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿ ಇಂದಿಗೆ ಒಂದು ವರ್ಷ. ಕಳೆದ ವರ್ಷದ ಆಗಸ್ಟ್ನಲ್ಲಿ ಕರೊನಾಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದ ಅವರು, ಒಂದು ತಿಂಗಳ ಹೋರಾಟದ ನಂತರ ಸೆ.25ಕ್ಕೆ ಕೊನೆಯುಸಿರೆಳೆದರು. ಎಸ್ಪಿಬಿ ನಿಧನರಾದರೂ ಅವರ ಹಾಡುಗಳ ಮೂಲಕ ಮತ್ತೆಮತ್ತೆ ನೆನಪಾಗುತ್ತಾರೆ. ಎಸ್ಪಿಬಿ ಇಲ್ಲದ ಈ ಒಂದು ವರ್ಷ ಹೇಗಿತ್ತು ಎಂಬುದನ್ನು ಅವರಿಂದ ಹಾಡಿಸಿದ ಮೂವರು ಜನಪ್ರಿಯ ಸಂಗೀತ ನಿರ್ದೇಶಕರು "ವಿಜಯವಾಣಿ' ಜತೆಗೆ ಹಂಚಿಕೊಂಡಿದ್ದಾರೆ.
ಅವರಿಲ್ಲದೆ ಅದು ಸಾಧ್ಯವಿಲ್ಲ
ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗುವುದಕ್ಕೆ ಎಂಟು ತಿಂಗಳ ಮುನ್ನ ಏರ್ಪೋರ್ಟ್ ಬಳಿ ಇಳಯರಾಜ ಅವರ ಸಂಗೀತ ಸಂಜೆ ನಡೆಯಿತು. ಈ ಸಂಗೀತ ಸಂಜೆಯಲ್ಲಿ ನಾನು ಅವರನ್ನು ಕೊನೆಯದಾಗಿ ನೋಡಿದ್ದು. ಈ ಕಾರ್ಯಕ್ರಮದಲ್ಲಿ ತಮಾಷೆ ಮಾಡಿಕೊಂಡು 20ರ ಹುಡುಗನ ತರಹ ಓಡಾಡಿಕೊಂಡಿದ್ದರು. ಅದೇ ಧ್ವನಿ, ಯಾವುದೇ ಬದಲಾವಣೆಯಿಲ್ಲ. ಆ ಧ್ವನಿಗೆ ಇನ್ನೂ 20 ವರ್ಷ ಯಾವುದೇ ತೊಂದರೆ ಇಲ್ಲ ಎಂದನಿಸುವಂತಿತ್ತು. ಆದರೆ, ಅನ್ಯಾಯ ಆಯಿತು. ಅವರು ಇಲ್ಲ ಅಂತ ಒಪ್ಪಿಕೊಳ್ಳೋಕೆ ಆಗುತ್ತಿಲ್ಲ. ಅವರೊಂದಿಗೆ ಭಕ್ತೀಗಿತೆಗಳ ಪ್ರಾಜೆಕ್ಟ್ ಮಾಡಬೇಕಿತ್ತು. ಅವರು ಸಹ ಒಪ್ಪಿದ್ದರು. ಆದರೆ, ಅವರಿಲ್ಲದೆ ಅದು ಈಗ ಸಾಧ್ಯವಿಲ್ಲ.
| ವಿ. ಮನೋಹರ್
ಪುಣ್ಯದಿನವಲ್ಲ ಜನ್ಮದಿನ
ಎಸ್ಪಿಬಿ ನಮ್ಮ ಜತೆಗೆ ದೈಹಿಕವಾಗಿ ಇರದಿರಬಹುದು. ಆದರೆ, ಮಾನಸಿಕವಾಗಿ ಜತೆಗಿದ್ದಾರೆ. ಅವರ ಸ್ಮರಣೆ ಇಲ್ಲದೆ ಬೆಳಗಾಗುವುದಿಲ್ಲ. ಜನ ಒಬ್ಬ ಸಾಧಕನನ್ನು ಮರೆಯಬಹುದು. ಆದರೆ, ಆ ಸಾಧಕ ಹೃದಯವಂತನಾಗಿದ್ದರೆ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಎಸ್ಪಿಬಿ ಒಬ್ಬ ಹೃದಯವಂತ ಸಾಧಕರಾಗಿದ್ದರು. ಹಾಗಾಗಿ, ಎಸ್ಪಿಬಿ ನಮ್ಮ ಜತೆಗೆ ಸದಾ ಇರುತ್ತಾರೆ. ಇಂದು ಅವರ ಪುಣ್ಯದಿನ ಎನ್ನುವುದಕ್ಕಿಂತ ಜನ್ಮದಿನ ಎನ್ನುವುದು ಹೆಚ್ಚು ಸರಿ. ಯಾರೇ ಗಾಯಕರಿರಲಿ, ಏರಿಳಿತ, ಮನಸ್ಥಿತಿ, ಎನಜಿರ್ ವಿಷಯಕ್ಕೆ ಬಂದಾಗ ಖಂಡಿತ ಎಸ್ಪಿಬಿ ಅವರನ್ನು ನೋಡಿ ಕಲಿತಿರುತ್ತಾರೆ. ಪ್ರತಿಯೊಬ್ಬ ಗಾಯಕನಿಗೂ ಅವರೊಂಥರ ಶಾಲೆ ಇದ್ದಂತೆ. ಅವರನ್ನು ಸಂಗೀತದ ವಿಶ್ವೇಶ್ವರಯ್ಯ ಅಂತ ಕರೆದರೆ ಅದು ಉತೆೆ ಇಲ್ಲ.
|ಕೆ.ಕಲ್ಯಾಣ್
ಅದ್ಭುತ ಶಕ್ತಿ
ರಿಯಾಲಿಟಿ ಶೋಗಳಿರಬಹುದು, ರೆಕಾಡಿರ್ಂಗ್ ಆಗಿರಬಹುದು, ಊಟದ ಸಮಯದಲ್ಲಿ ಅವರೊಂದಿಗೆ ಸಾಕಷ್ಟು ಸಮಯ ಕಳೆಯುವ ಅವಕಾಶ ನಮಗೆಲ್ಲ ಸಿಕ್ಕಿತು. ಅದೇ ನಮಗೆ ಆಸ್ತಿ. ಆದರೆ, ಹೊಸಬರು ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತಾರೆ. ಏಕೆಂದರೆ, ಒಂದು ಸಾಧಾರಣ ಹಾಡನ್ನು ಚೆನ್ನಾಗಿ ಕೇಳುವ ಹಾಗೆ ಹಾಡುವ ಶಕ್ತಿ ಅವರಿಗಿತ್ತು. ಅವರು ಹಾಡಿದರೆ, ಆ ಹಾಡಿನ ಕಲರ್ ಬೇರೆಯಾಗುತ್ತಿತ್ತು. ಒಂದು ಹಾಡು ಹೇಗೆ ಹಾಡಬೇಕು, ಪಾತ್ರಕ್ಕೆ ಹೇಗೆ ಸೂಟ್ ಆಗಬೇಕು ಎನ್ನುವುದರಲ್ಲಿ ಅವರು ಮಾಸ್ಟರ್. ನವರಸಗಳನ್ನು ಧ್ವನಿ ಮೂಲಕ ಕೊಡುವುದು ಬಹಳ ಕಷ್ಟ. ಅದನ್ನವರು ಮಾಡುತ್ತಿದ್ದರು. ಆ ಅನುಭವ ಮತ್ತು ಪರಿಣತಿ ಹೊಸಬರಿಗೆ ಸಿಗುವುದಿಲ್ಲ ಎಂಬುದು ಬೇಸರದ ಸಂಗತಿ.
|ಗುರುಕಿರಣ್