ನ್ಯೂಸ್

ಬಾಹ್ಯಾಕಾಶದಲ್ಲಿ ಇತಿಹಾಸ ಬರೆದ ಸ್ಪೇಸ್ ಎಕ್ಸ್: ಮಾನವಸಹಿತ ರಾಕೆಟ್ ಉಡಾವಣೆ ಯಶಸ್ವಿ

ವಾಷಿಂಗ್ಟನ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕದ ಖಾಸಗಿ ಕಂಪನಿ ಸ್ಪೇಸ್ ಎಕ್ಸ್ ದಾಖಲೆ ನಿರ್ಮಾಣ ಮಾಡಿದೆ. ಇಬ್ಬರು ಗಗನಯಾತ್ರಿಗಳನ್ನು ಒಳಗೊಂಡ ಫಾಲ್ಕನ್-9 ರಾಕೆಟ್​ಅನ್ನು ಶನಿವಾರ ಮಧ್ಯಾಹ್ನ ( ಸ್ಥಳೀಯ ಕಾಲಮಾನ) ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇದೇ ಮೊದಲ ಬಾರಿಗೆ ಖಾಸಗಿ ಕಂಪನಿಯೊಂದು ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಕಳುಹಿಸಿದೆ. ಅಮೆರಿಕ ಬರೋಬ್ಬರಿ 11 ವರ್ಷಗಳ ಬಳಿಕ ತನ್ನದೇ ನೆಲದಿಂದ ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ರವಾನಿಸಿದೆ. ಇಷ್ಟು ವರ್ಷ ಅಮೆರಿಕ ಗಗನಯಾತ್ರಿಗಳ ಉಡಾವಣೆಗಾಗಿ ರಷ್ಯಾವನ್ನು ಅವಲಂಬಿಸಿತ್ತು.

ನಾಸಾದ ಪೈಲಟ್​ಗಳಾದ ಡಗ್ ಹರ್ಲಿ ಮತ್ತು ಬಾಬ್ ಬೆಂಕನ್​ರನ್ನು ಒಳಗೊಂಡಿದ್ದ ಸ್ಪೇಸ್​ಎಕ್ಸ್ ಸಂಸ್ಥೆಯ ಫಾಲ್ಕನ್-9 ರಾಕೆಟ್ ಫ್ಲಾರಿಡಾದಲ್ಲಿನ ಕೆನಡಿ ಸ್ಪೇಸ್ ಸೆಂಟರ್​ನಿಂದ ಉಡಾವಣೆಯಾಗಿದೆ. ಗಗನಯಾತ್ರಿಗಳಿಗಾಗಿಯೇ ಸ್ಪೇಸ್​ಎಕ್ಸ್ ಕ್ಯೂ ಡ್ರಾ್ಯಗನ್ ಸ್ಪೇಸ್​ಕ್ರಾಫ್ಟ್ ನಿರ್ವಿುಸಿತ್ತು. ಇಬ್ಬರೂ ಗಗನಯಾತ್ರಿಗಳು ಭೂಮಿಯಿಂದ ಸುಮಾರು 402 ಕಿ.ಮೀ ಎತ್ತರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸುರಕ್ಷಿತವಾಗಿ ತೆರಳಿದ್ದು, ಅಲ್ಲಿ ಸುಮಾರು 4 ತಿಂಗಳು ವಿವಿಧ ಅಧ್ಯಯನಗಳನ್ನು ನಡೆಸಲಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಪಾಧ್ಯಕ್ಷ ಮೈಕ್ ಪೆನ್ಸ್ ಸೇರಿ ಸರ್ಕಾರದ ಪ್ರಮುಖರು ಈ ಐತಿಹಾಸಿಕ ಕ್ಷಣಕ್ಕೆ ಕೆನಡಿ ಸ್ಪೇಸ್ ಸೆಂಟರ್​ನಲ್ಲಿ ಸಾಕ್ಷಿಯಾಗಿದ್ದರು. ಈ ಯೋಜನೆ ಜತೆಗೆ ಸ್ಪೇಸ್​ಎಕ್ಸ್ ಸಂಸ್ಥೆ ಇನ್ನು ಮುಂದೆ ನಿಯಮಿತವಾಗಿ ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವ ಕೆಲಸ ನಿರ್ವಹಿಸಲಿದೆ ಎಂದು ತಿಳಿದುಬಂದಿದೆ. ಫಾಲ್ಕನ್-9 ಉಡಾವಣೆಗೂ ಮೊದಲು ಕರೊನಾ ಭೀತಿ ಹಿನ್ನೆಲೆಯಲ್ಲಿ ಡಗ್ ಹರ್ಲಿ ಮತ್ತು ಬಾಬ್ ಬೆಂಕನ್​ರನ್ನು ಕಳೆದ ಎರಡು ವಾರಗಳಿಂದ ಕ್ವಾರಂಟೈನ್​ನಲ್ಲಿಟ್ಟು, ಪ್ರತಿದಿನ ಕರೊನಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬುಧವಾರ ಸಂಜೆಯೇ ರಾಕೆಟ್ ಉಡಾವಣೆಯಾಗಬೇಕಿತ್ತು. ಹವಾಮಾನ ವೈಪರೀತ್ಯ ಕಾರಣದಿಂದಾಗಿ ಕೊನೆ ಕ್ಷಣದಲ್ಲಿ ಯೋಜನೆಗೆ ತಡೆ ನೀಡಲಾಗಿತ್ತು.

  • ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ರವಾನಿಸಿದ ಮೊದಲ ಖಾಸಗಿ ಸಂಸ್ಥೆ ಸ್ಪೇಸ್​ಎಕ್ಸ್. ಈ ಹಿಂದೆ ಅಮೆರಿಕ, ರಷ್ಯಾ ಹಾಗೂ ಚೀನಾದ ಸರ್ಕಾರಿ ಸಂಸ್ಥೆಗಳು ಮಾತ್ರ ಗಗನಯಾತ್ರಿಗಳನ್ನು ಅಂತರಿಕ್ಷಕ್ಕೆ ರವಾನಿಸಿದ್ದವು.
  • ನಾಸಾ ಸುಮಾರು 40 ವರ್ಷಗಳ ಹಿಂದೆ ಕೊನೆಯ ಬಾರಿ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ರವಾನಿಸಿತ್ತು. ನಂತರ ಈ ಕೆಲಸಕ್ಕೆ ರಷ್ಯಾದ ಮೇಲೆ ಅವಲಂಬಿತವಾಗಿತ್ತು.
  • ಸುಮಾರು 4 ತಿಂಗಳ ಬಳಿಕ ಡಗ್ ಹರ್ಲಿ ಮತ್ತು ಬಾಬ್ ಬೆಂಕನ್ ಸಮುದ್ರದಲ್ಲಿ ರೈಟ್ ಸ್ಟಫ್-ಸ್ಟೈಲ್ ಸ್ಪಲ್ಯಾಶ್​ಡೌನ್​ನೊಂದಿಗೆ ಭೂಮಿಗೆ ಇಳಿಯಲಿದ್ದಾರೆ. 1970ರ ದಶಕದಿಂದ ಬಳಿಕ ಜಗತ್ತು ಈ ವಿದ್ಯಮಾನಕ್ಕೆ ಸಾಕ್ಷಿಯಾಗಿಲ್ಲ.
  • ಫಾಲ್ಕನ್-9 ಉಡಾಹಕ ನಾಸಾಗೆ ಕಳೆದ 9 ವರ್ಷ ಗಳಿಂದ ಉಂಟಾಗಿದ್ದ ಉಡಾಹಕದ ಕೊರತೆ ನೀಗಿಸಿದೆ.
  • ಫಾಲ್ಕನ್-9 ಉಡಾಹಕದ ತಯಾರಕ ಕಂಪನಿ ಸ್ಪೇಸ್​ಎಕ್ಸ್ ಭವಿಷ್ಯದಲ್ಲಿ ರಾಕೆಟ್ ಉಡಾವಣೆ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದೆ.