ನ್ಯೂಸ್

ಐಎಸ್​ಎಸ್ ಸೇರಿದ ಸ್ಪೇಸ್​ಎಕ್ಸ್ ನೌಕೆ; ಫೆಬ್ರವರಿಯಲ್ಲಿ ಸುನಿತಾ, ವಿಲ್ಮೋರ್ ಭೂಮಿಗೆ ವಾಪಸ್ ಸಾಧ್ಯತೆ

ವಾಷಿಂಗ್ಟನ್: ಶನಿವಾರ ನಭೋಮಂಡಲಕ್ಕೆ ಜಿಗಿದಿರುವ ಉದ್ಯಮಿ ಎಲನ್ ಮಸ್ಕ್ ಮಾಲೀಕತ್ವದ ಸ್ಪೇಸ್​ಎಕ್ಸ್​ನ ಬಾಹ್ಯಾಕಾಶ ನೌಕೆ ‘ಸ್ಪೇಸ್​ಎಕ್ಸ್ ಫಾಲ್ಕನ್ 9’ ಭಾನುವಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು (ಐಎಸ್​ಎಸ್) ಸೇರಿಕೊಂಡ ಕ್ಷಣವನ್ನು ಲೈವ್​ಸ್ಟ್ರೀಮ್ಲ್ಲಿ ತೋರಿಸಲಾಗಿದೆ. ಐಎಸ್​ಎಸ್​ನಲ್ಲಿ ಆಶ್ರಯ ಪಡೆದಿರುವ ಗಗನಯಾನಿ ಸುನಿತಾ ವಿಲಿಯಮ್್ಸ ಮತ್ತು ಬುಚ್ ವಿಲ್ಮೋರ್​ರನ್ನು ಈ ನೌಕೆ ಫೆಬ್ರವರಿಯಲ್ಲಿ ವಾಪಸ್ ಭೂಮಿಗೆ ಕರೆ ತರಲಿದೆ.

ಫ್ಲಾರಿಡಾದ ಕೇಪ್ ಕೆನವರಾಲ್​ನಿಂದ ಶನಿವಾರ ಮಧ್ಯಾಹ್ನ 1.17ಕ್ಕೆ ಹೊರಟ ನೌಕೆ ಭಾನುವಾರ ಸಂಜೆ 5.30ಕ್ಕೆ ಐಎಸ್​ಎಸ್ ತಲುಪಿತು. ಐಎಸ್​ಎಸ್​ಎಸ್​ನೊಂದಿಗೆ ಜೋಡಣೆಯಾದ ಮೇಲೆ, ಭೂಮಿಯಿಂದ ತೆರಳಿದ ನೌಕೆಯಲ್ಲಿದ್ದ ನಾಸಾ ಗಗನಯಾನಿ ನಿಕ್ ಹೇಗ್ ಮತ್ತು ರಷ್ಯಾ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್ ಸಂಜೆ 7 ಗಂಟೆ ನಂತರ ನಿಲ್ದಾಣದಲ್ಲಿ ಇಳಿದು ಅಲ್ಲಿನ ಸಹೋದ್ಯೋಗಿಗಳನ್ನು ಅಪ್ಪಿಕೊಂಡರು. ‘ಇದೊಂದು ಅದ್ಭುತವಾದ ದಿನ’ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಉಪ ಆಡಳಿತಗಾರ ಪಾಮ್ ಮೆಲರಿ ಉದ್ಗರಿಸಿದ್ದಾರೆ.

ದೀರ್ಘ ವಾಸ್ತವ್ಯ: ಜೂನ್​ನಲ್ಲಿ ಬೋಯಿಂಗ್ ಸ್ಟಾರ್​ಲೈನರ್​ನಲ್ಲಿ 8 ದಿನ ವಾಸ್ತವ್ಯಕ್ಕಾಗಿ ಐಎಸ್​ಎಸ್​ಗೆ ತೆರಳಿದ್ದ ಸುನಿತಾ ಮತ್ತು ವಿಲ್ಮೋರ್, ಸ್ಟಾರ್​ಲೈನರ್​ನಲ್ಲಿನ ತಾಂತ್ರಿಕ ದೋಷದಿಂದಾಗಿ ಭೂಮಿಗೆ ಮರಳಲಾಗದೆ ಅಲ್ಲೇ ಉಳಿದುಕೊಂಡಿದ್ದಾರೆ. ಇದೀಗ ಸ್ಪೇಸ್​ಎಕ್ಸ್ ವಾಹನದಲ್ಲಿ ತೆರಳಿರುವ ಹೇಗ್ ಮತ್ತು ಗೊರ್ಬುನೊವ್ ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಮರಳುವ ಯೋಜನೆಯಿದ್ದು ಅವರೊಂದಿಗೆ ಸುನಿತಾ ಹಾಗೂ ವಿಲ್ಮೋರ್ ಕೂಡ ಬರಲಿದ್ದಾರೆ.