ನ್ಯೂಸ್

ಆಂಧ್ರ ಪುಣ್ಯಕ್ಷೇತ್ರಗಳಲ್ಲಿ ಜಾಗದ ಸಮಸ್ಯೆ: ಚರ್ಚೆ | AP Governor assurance

ಬೆಂಗಳೂರು: ಪ್ರಸಿದ್ಧ ಪುಣ್ಯ ಕ್ಷೇತ್ರಗಳಾದ ತಿರುಪತಿ ತಿರುಮಲ, ಶ್ರೀಶೈಲ ಹಾಗೂ ಮಂತ್ರಾಲಯದಲ್ಲಿನ ಕರ್ನಾಟಕ ಸರ್ಕಾರದ ಜಾಗದ ಸಮಸ್ಯೆ ಪರಿಹಾರದ ಕುರಿತು ಆಂಧ್ರಪ್ರದೇಶ ರಾಜ್ಯಪಾಲ ನ್ಯಾ.ಎಸ್.ಅಬ್ದುಲ್ ನಜೀರ್ ಜತೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚರ್ಚಿಸಿದರು.

ಕುಮಾರಕೃಪಾ ಅತಿಥಿಗೃಹದಲ್ಲಿ ತಂಗಿದ್ದ ರಾಜ್ಯಪಾಲರನ್ನು ಸೋಮವಾರ ಭೇಟಿ ಮಾಡಿದ ಸಚಿವರು, ಮೂರು ವಿಷಯಗಳನ್ನು ಪ್ರಸ್ತಾಪಿಸಿದರು. ಆಂಧ್ರ ಸರ್ಕಾರದ ಜತೆಗೆ ಚರ್ಚಿಸುವುದಾಗಿ ನ್ಯಾ.ಅಬ್ದುಲ್ ನಜೀರ್ ಭರವಸೆ ನೀಡಿದರು.

ನಂತರ ಸುದ್ದಿಗಾರರಿಗೆ ಸಚಿವ ರಾಮಲಿಂಗಾರೆಡ್ಡಿ ಈ ವಿಷಯ ತಿಳಿಸಿ, ಆಂಧ್ರಪ್ರದೇಶ ರಾಜ್ಯಪಾಲರು ಕರ್ನಾಟಕದ ಮೂಲದವರಾಗಿದ್ದಾರೆ. ತಿರುಪತಿ ತಿರುಮಲ ಜಾಗವನ್ನು ರಾಜರು ಕೊಟ್ಟಿದ್ದರೆ, ಶ್ರೀಶೈಲ 10 ಎಕರೆ ಜಮೀನಿನಲ್ಲಿ 85 ಕೋಟಿ ರೂ. ಖರ್ಚು ಮಾಡಿ ಭವನ ಕಟ್ಟಿಸಿದ್ದಾರೆ.

ಆಂಧ್ರ ಸರ್ಕಾರ ವಾಪಸ್ ಮಾಡಬೇಕು ಎಂದು ಕೇಳುತ್ತಿದೆ. ಮಂತ್ರಾಲಯದಲ್ಲೂ ಜಾಗದ ಸಮಸ್ಯೆ ಇರುವುದನ್ನು ರಾಜ್ಯಪಾಲರ ಗಮನಸೆಳೆದು, ಸಂಬಂಧಿಸಿದವರಿಗೆ ಸೂಚಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಬಿಜೆಪಿ ಷಡ್ಯಂತ್ರ

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟಿದ್ದೇನೆ ಎಂಬ ಮುಸುಕುಧಾರಿ ದೂರಿನ ಮೇರೆಗೆ ಎಸ್‌ಐಟಿ ತನಿಖೆ ನಡೆಸಿದ್ದು, 15 ಸ್ಥಳಗಳ ಶೋಧಿಸಿದ ನಂತರ ಏನೂ ಸಿಕ್ಕಿಲ್ಲವೆಂದ ಮೇಲೆ ಬಿಜೆಪಿ ಧ್ವನಿ ಎತ್ತಿ ಎನ್‌ಐಎ ತನಿಖೆಗೆ ಒತ್ತಾಯಿಸುತ್ತಿರುವುದೇ ಷಡ್ಯಂತ್ರವೆಂದು ದೂರಿದರು.

ಎಸ್‌ಐಟಿ ತನ್ನ ಕೆಲಸ ಚುರುಕುಗೊಳಿಸಿದ್ದು, ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದೆ. ಆದಷ್ಟು ಬೇಗ ವರದಿ ಸಲ್ಲಿಸಬೇಕು ಎಂದು ಗೃಹ ಸಚಿವರು ಸೂಚಿಸಿಯಾಗಿದೆ. ಈ ಹಂತದಲ್ಲಿ ಎನ್‌ಐಎ ತನಿಖೆಗೆ ಒತ್ತಾಯದ ಮರ್ಮವೇನು ? ಎಂದು ಕೇಳಿದರು.

ಮೇಲಿನವರಿಂದ ಸೂಚನೆ ಬಂತೆಂದು ಬಿಜೆಪಿಯವರು ಈಗ ಮಾತನಾಡಲಾರಂಭಿಸಿದ್ದು, ಎಸ್‌ಐಟಿ ತನಿಖೆಯಾಗಲಿ ಎನ್ನುತ್ತಿರುವವರೇ ಎನ್‌ಐಎಗೆ ಕೇಳುತ್ತಿದ್ದಾರೆ. ಎಲುಬಿಲ್ಲದ ನಾಲಿಗೆ ಎಂಬುದನ್ನು ಬಿಜೆಪಿ ನಾಯಕರು ರುಜುವಾತುಪಡಿಸುತ್ತಿದ್ದಾರೆ ಎಂದು ಕುಟುಕಿದರು.

ಪ್ರಕರಣದಲ್ಲಿ ಷಡ್ಯಂತ್ರ, ಸತ್ಯ ಎಲ್ಲವೂ ಹೊರಬರಬೇಕಾಗಿದೆ. ಬಿಜೆಪಿಯಲ್ಲೇ ಎರಡು ಟೀಮ್‌ಗಳಿವೆ. ಎಸ್‌ಐಟಿ ತುಂಬ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಯಾರ ಪಾತ್ರ ಏನಿದೆ, ಸತ್ಯಾಸತ್ಯತೆ ಹೊರಗೆ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಸ್ಥಳದಲ್ಲಿ ಎರಡರಿಂದ ಮೂರು ಸಾವಿರ ವಸತಿ ಗೃಹ ಕೊಠಡಿಗಳು ಧರ್ಮಸ್ಥಳ ದೇವಸ್ಥಾನದ ಆಡಳಿತ ಮಂಡಳಿಗೆ ಸೇರಿದ್ದಾಗಿದ್ದು, ಬಹಳ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅನಗತ್ಯ ವಿವಾದ

ಚಾಮುಂಡೇಶ್ವರಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದಾಗಿದೆ. ದೇವಸ್ಥಾನದ 37.38 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮೈಸೂರು ಮಹಾರಾಜರು ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಇನ್ನೂ ವಿಚಾರಣೆ ನಡೆಯುತ್ತಿದೆ.

ಮೈಸೂರು ದಸರಾ ಮಹೋತ್ಸವ ನಾಡಹಬ್ಬ, ಅಂದರೆ ನಾಡಿನ ಏಳು ಕೋಟಿ ಕನ್ನಡಿಗರಿಗೆ ಸೇರಿದ್ದಾಗಿದ್ದು, ಸಾಹಿತಿ ಬಾನು ಮುಷ್ತಾಕ್ ಅವರನ್ನು ಉದ್ಘಾಟನೆಗೆ ಆಹ್ವಾನಿಸಿದ್ದಕ್ಕೆ ಬಿಜೆಪಿಯವರು ಅನಗತ್ಯ ವಿವಾದ ಹುಟ್ಟಿಹಾಕಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಆಕ್ಷೇಪಿಸಿದರು.