ಆಟೋದಲ್ಲಿ ಮೀಟರ್ ಪರಿಶೀಲನೆ ನಡೆಸಿದ ಎಸ್ಪಿ ಮಿಥುನ್‌ಕುಮಾರ್  
ನ್ಯೂಸ್

ಮೀಟರ್ ಹಾಕದವರಿಗೆ ಎಸ್ಪಿ ಶಾಕ್!

ಶಿವಮೊಗ್ಗ: ಆಟೋಗಳಲ್ಲಿ ಕಡ್ಡಾಯವಾಗಿ ಮೀಟರ್ ಹಾಕುವಂತೆ ಹಲವು ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ ಅದನ್ನು ಪಾಲಿಸದ ಚಾಲಕರಿಗೆ ಪೊಲೀಸರು ಮಂಗಳವಾರ ಶಾಕ್ ನೀಡಿದ್ದರು. ಖುದ್ದು ರಸ್ತೆಗಿಳಿದ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ತಪಾಸಣೆ ನಡೆಸಿದರು. ಇನ್ನೊಂದೆಡೆ ಟ್ರಾಫಿಕ್ ಇನ್ಸ್‌ಪೆಕ್ಟರ್ ಸಂತೋಷ್ ಸಹ ಮೀಟರ್ ಹಾಕದ ಆಟೋಗಳನ್ನು ವಶಕ್ಕೆ ಪಡೆದರು.

ಆಟೋಗಳಲ್ಲಿ ಮೀಟರ್ ಹಾಕದಿರುವ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಗಮನಸೆಳೆದ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದರು. ಕಾರ್ಯಾಚರಣೆ ಸಂದರ್ಭ ಆಟೋ ಚಾಲಕರು ಸಲ್ಲದ ಕಾರಣ ನೀಡಿ ಪಾರಾಗಲು ಯತ್ನಿಸಿದರು. ಆದರೂ ಪೊಲೀಸರು ದಂಡ ವಿಧಿಸಿದರು.
ಮೀಟರ್ ಹಾಕದ ಅನೇಕ ಆಟೋಗಳನ್ನು ನಾವು ಜಪ್ತಿ ಮಾಡಿದ್ದೇವೆ. ದಂಡವನ್ನೂ ವಿಧಿಸಿದ್ದೇವೆ. ಆಟೋ ಚಾಲಕರ ಸಭೆ ನಡೆಸಿ ಸ್ಪಷ್ಟ ಸೂಚನೆಯನ್ನೂ ನೀಡಿದ್ದೇವೆ. ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ತಿಳಿಸಿದರು. ಆಟೋಗಳಲ್ಲಿ ಮೀಟರ್ ಹಾಕುವಂತೆ ಸಾರ್ವಜನಿಕರೂ ಒತ್ತಾಯ ಮಾಡಬೇಕು. ಅದಕ್ಕೆ ಸ್ಪಂದಿಸದ ಚಾಲಕರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಆಟೋ ಚಾಲಕರ ಬಹುತೇಕ ಬೇಡಿಕೆಗಳಿಗೆ ಜಿಲ್ಲಾಡಳಿತ ಸ್ಪಂದಿಸಿದೆ. ಮೀಟರ್ ಹಾಕದೇ ಇರುವುದು ಸರಿಯಲ್ಲ ಎಂದು ಎಚ್ಚರಿಸಿದರು.