ನ್ಯೂಸ್

ಡಬ್ಬಲ್​ ಡೆಕ್ಕರ್​ ರಸ್ತೆಯಲ್ಲಿ ಸಂಚಾರ ಆರಂಭ; 3.36 ಕಿ.ಮೀ. ಉದ್ದದ ಮಾರ್ಗಕ್ಕೆ ಪ್ರಾಯೋಗಿಕ ಚಾಲನೆ

ಬೆಂಗಳೂರು: ಜಯನಗರದ ರಾಗಿಗುಡ್ಡ ಬಳಿ ನಿರ್ಮಾಣವಾಗಿರುವ ಡಬಲ್​ ಡೆಕ್ಕರ್​ ಫ್ಲೈಓವರ್​​ನಲ್ಲಿ ಪ್ರಾಯೋಗಿಕ ವಾಹನ ಸಂಚಾರಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಬುಧವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರಕ್ಕೆ ಇಂದು ಐತಿಹಾಸಿಕ ದಿನವಾಗಿದ್ದು ವಿಶ್ವದರ್ಜೆ ಮಟ್ಟದಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಡಬ್ಬಲ್​ ಡೆಕ್ಕರ್​ ಮೇಲ್ಸೇತುವೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೊಸದಾಗಿ ನಿರ್ಮಾಣವಾಗುವ ಮೆಟ್ರೋ ಮಾರ್ಗಗಳಲ್ಲಿ ಅಧ್ಯಯನ ನಡೆಸಿ ಸಾಧ್ಯವಾದಲ್ಲೆಲ್ಲ ಡಬ್ಬಲ್​ ಡೆಕ್ಕರ್​ ಮೇಲ್ಸೇತುವೆ ಅನುಷ್ಠಾನಗೊಳಿಸಲಾಗುತ್ತದೆ. ನಿರ್ಮಾಣದ ಒಟ್ಟು ವೆಚ್ಚವನ್ನು ಬಿಎಂಆರ್​ಸಿಎಲ್​ ಹಾಗೂ ಬಿಬಿಎಂಪಿ ಸಮಾನವಾಗಿ ಹಂಚಿಕೊಳ್ಳಲಿದೆ ಎಂದು ವಿವರಿಸಿದರು.

3.36 ಕಿಮೀ ಉದ್ದದ ಮಾರ್ಗ

ಆರ್​.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್​ ಸಿಲ್ಕ್​ಬೋರ್ಡ್​ ಜಂನ್​ವರೆಗೆ 449 ಕೋಟಿ ರೂ. ವೆಚ್ಚದಲ್ಲಿ 3.3 ಕಿ.ಮೀ. ಡಬ್ಬಲ್​ ಡೆಕ್ಕರ್​ ಮೇಲ್ಸೇತುವೆ ನಿರ್ಮಿಸಲಾಗಿದೆ. ಇದರಿಂದ ಸೆಂಟ್ರಲ್​ ಸಿಲ್ಕ್​ ಬೋರ್ಡ್​ ಜಂಕ್ಷನ್​ನಲ್ಲಿ ಉಂಟಾಗುತ್ತಿದ್ದ ಸಂಚಾರದಟ್ಟಣೆ ಸಮಸ್ಯೆಗೆ ಕೊಂಚ ಪರಿಹಾರ ಸಿಕ್ಕಂತಾಗಿದೆ. 2019ರಲ್ಲಿ ಆರಂಭವಾಗಿದ್ದ ಮೇಲ್ಸೇತುವೆ ಕಾಮಗಾರಿ, 2021ರಲ್ಲಿ ಪೂರ್ಣಗೊಳ್ಳಬೇಕಿತ್ತು. ಕರೊನಾ, ಚುನಾವಣೆ, ಕಾರ್ಮಿಕರ ಅಲಭ್ಯತೆ ಸೇರಿ ಇತರೆ ಕಾರಣಗಳಿಂದ ಮೂರು ವರ್ಷ ತಡವಾಗಿ ಉದ್ಘಾಟನೆಯಾಗುತ್ತಿದೆ.

ನೆಲಮಟ್ಟದಿಂದ 8 ಮೀ. ಎತ್ತರದಲ್ಲಿ ವಾಹನ ಓಡಾಟಕ್ಕೆ ಮೇಲ್ಸೇತುವೆ ನಿರ್ಮಿಸಲಾಗಿದ್ದು, ಒಮ್ಮೆ ವಾಹನ ಪ್ರವೇಶವಾದರೆ ಮಧ್ಯದಲ್ಲಿ ಇಳಿಯಲು ಸಾಧ್ಯವಿಲ್ಲ. ಬಸ್​, ಕಾರು ಸೇರಿ ಎಲ್ಲ ಮಾದರಿಯ ವಾಹನಗಳು ಇದರಲ್ಲಿ ಸಂಚರಿಸಬಹುದು. ಮೇಲ್ಸೇತುವೆಯ ಎರಡನೇ ಅಂತಸ್ತು 16 ಮೀ. ಎತ್ತರದಲ್ಲಿದ್ದು, ನಮ್ಮ ಮೆಟ್ರೋ ಹಳದಿ ಮಾರ್ಗ ನಿರ್ಮಾಣವಾಗಿದೆ. ವರ್ಷಾಂತ್ಯದಿಂದ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗುವ ಸಾಧ್ಯತೆಯಿದೆ. ನೆಲ ಅಂತಸ್ತಿನಲ್ಲಿ ತ್ರಿಪಥ ಮಾರ್ಗವಿದ್ದು, ಎಂದಿನಂತೆ ವಾಹನ ಸಂಚಾರ ಇರಲಿದೆ.

ಕಾಮಗಾರಿ ಪ್ರಗತಿಯಲ್ಲಿ

ಸದ್ಯ ರಾಗಿಗುಡ್ಡದಿಂದ ಸೆಂಟ್ರಲ್​ ಸಿಲ್ಕ್​ ಬೋರ್ಡ್​ ಕಡೆಗೆ ಬರುವ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಸೆಂಟ್ರಲ್​ ಸಿಲ್ಕ್​ ಬೋರ್ಡ್​ನಿಂದ ರಾಗಿಗುಡ್ಡ ಕಡೆಗೆ ತೆರಳುವ ಮೇಲ್ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷ ಜೂನ್​ ವೇಳೆಗೆ ಈ ರಸ್ತೆಯಲ್ಲಿ ವಾಹನ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ. ಜತೆಗೆ ಫ್ಲೈ ಓವರ್​ ಒಳಗೊಂಡ ಐದು ರ್ಯಾಂಪ್​ಗಳ ಪೈಕಿ ಎರಡರ (ಡಿಇ) ಕಾಮಗಾರಿ ನಡೆಯುತ್ತಿದೆ.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಸತೀಶ್​ ರೆಡ್ಡಿ, ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್​ ರಾವ್​, ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್​, ಬಿಎಂಆರ್​ಡಿಎ ಆಯುಕ್ತ ರಾಜೇಂದ್ರ ಚೋಳನ್​ ಇನ್ನಿತರರಿದ್ದರು.

5 ಸಾವಿರ ಕೋಟಿ ವೆಚ್ಚದಲ್ಲಿ ಪೇಸ್​ 2 ಯೋಜನೆ

ಹೊಸೂರು ರಸ್ತೆ ಕಡೆ ತೆರಳುವ ಶೇ.30 ನಾಗರಿಕರಿಗೆ ಡಬಲ್​ ಡೆಕ್ಕರ್​ ಮೇಲ್ಸೇತುವೆಯಿಂದ ಅನುಕೂಲವಾಗಲಿದೆ. ಎಲೆಕ್ಟ್ರಾನಿಕ್​ ಸಿಟಿ, ಎಚ್​ಎಸ್​ಆರ್​ ಬಡಾವಣೆ, ಮಹದೇವಪುರ ನಿವಾಸಿಗಳಿಗೆ ಹೆಚ್ಚು ಸಹಾಯಕ. 5 ಪಥಗಳುಳ್ಳ ಸುಮಾರು 9.5 ಕಿಮೀ ಉದ್ದವಿರುವ ಮಾರ್ಗ 5,745 ಕೋಟಿ ರೂ. ವೆಚ್ಚದಲ್ಲಿ ಆರ್​.ವಿ. ನಗರ ಮಹದೇವಪುರ ಎಲಿವೇಟೆಟ್​ ಪೇಸ್​&2 ಯೋಜನೆ ಜಾರಿಗೆ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

ಕಾರು ಚಲಾಯಿಸಿದ ಡಿಸಿಎಂ

ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಬಳಿಕ ಡಬ್ಬಲ್​ ಡೆಕ್ಕರ್​ ಮೇಲ್ಸೇತುವೆಯಲ್ಲಿ ಡಿ.ಕೆ.ಶಿವಕುಮಾರ್​ ಕಾರು ಚಲಾಯಿಸಿದರು. ಇವರಿಗೆ ರಾಮಲಿಂಗಾ ರೆಡ್ಡಿ ಮುಂದಿನ ಸೀಟ್​ನಲ್ಲಿ ಕುಳಿತು ಸಾಥ್​ ನೀಡಿದರು. ಹಿಂಭಾಗದಲ್ಲಿ ಸತೀಶ್​ ರೆಡ್ಡಿ ಇದ್ದರು.