ಕೇಪ್ಟೌನ್: ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದನ್ನು ಎಲ್ಲ ರಾಷ್ಟ್ರಗಳಲ್ಲೂ ಕಡ್ಡಾಯ ಮಾಡಲಾಗುತ್ತಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುವಾಗಲೆಲ್ಲ ಮಾಸ್ಕ್ ಧರಿಸಿಕೊಂಡು ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರಂತೆ ತಮ್ಮ ರಾಷ್ಟ್ರದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಮಾಸ್ಕ್ ಧರಿಸುವ ಬಗೆ ತಿಳಿಸಲು ಹೋಗಿ ಭಾರಿ ಫಜೀತಿಗೆ ಒಳಗಾದರು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿ ಸಿರಿಲ್ ರಾಮಫೋಸಾ ಅವರು ಮಾಸ್ಕ್ ಅನ್ನು ಬಲಗಿವಿಗೆ ಸಿಕ್ಕಿಸಿಕೊಳ್ಳಲು ಪರದಾಡುತ್ತಾ, ತಮ್ಮ ಕಣ್ಣನ್ನೇ ಮುಚ್ಚಿಕೊಂಡು ಭಾರಿ ಮುಜುಗರಕ್ಕೆ ಒಳಗಾಗಿದ್ದಾರೆ.
ಈ ವಿಡಿಯೋ ತುಣುಕಿನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮೀಮ್ಗಳನ್ನು ಹಾಕಿರುವ ಕೆಲವರು, ಇದುವರೆಗೂ ನಾವು ತಪ್ಪುತಪ್ಪಾಗಿ ಮಾಸ್ಕ್ ಧರಿಸುತ್ತಿದ್ದೆವು ಎಂಬುದು ಈಗ ಸ್ಪಷ್ಟವಾಯಿತು. ಇದನ್ನು ತಿಳಿಸಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು ಅಧ್ಯಕ್ಷರೇ ಎಂಬ ಸಂದೇಶಗಳನ್ನು ಹಾಕಲಾರಂಭಿಸಿದ್ದಾರೆ.
ಇಂಥ ಟೀಕೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ಸಿರಿಲ್ ರಾಮಫೋಸಾ, ನನ್ನ ಪರದಾಟವನ್ನು ನೋಡಿ ಅಪಹಾಸ್ಯ ಮಾಡಿ ನಕ್ಕ ಎಲ್ಲರಿಗೂ ಒಂದು ವಿಷಯ ತಿಳಿಸಲು ಬಯಸುತ್ತೇನೆ. ಮಾಸ್ಕ್ ಧರಿಸುವ ಬಗೆಯನ್ನು ತಿಳಿಸಿಕೊಡಲು ನಾನು ಪ್ರತ್ಯೇಕ ಟಿವಿ ಚಾನಲ್ ಆರಂಭಿಸುತ್ತಿದ್ದೇನೆ. ನೀವೆಲ್ಲರೂ ಅದರ ಸದಸ್ಯತ್ವ ಪಡೆದುಕೊಳ್ಳಿ ಎಂದು ತಮಾಷೆ ಮಾಡಿದ್ದಾರೆ.
ಮುಂದಿನ ತಿಂಗಳಿಂದ ಸಡಿಲ: ಮಾ.26ರಿಂದ ದಕ್ಷಿಣ ಆಫ್ರಿಕಾದಲ್ಲಿ ಜಾರಿಯಲ್ಲಿರುವ ಲಾಕ್ಡೌನ್ ಅನ್ನು ಮೇ ತಿಂಗಳಿನಿಂದ ಸಡಿಲಗೊಳಿಸುವುದಾಗಿ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೂ 4,200 ಜನರಿಗೆ ಮಾತ್ರವೇ ಕರೊನಾ ಸೋಂಕು ತಗುಲಿದ್ದು, ಅವರೆಲ್ಲರೂ ಚೇತರಿಕೆಯ ಹಾದಿಯಲ್ಲಿದ್ದಾರೆ ಎನ್ನಲಾಗಿದೆ.