ನ್ಯೂಸ್

ಲಾಕ್‌ಡೌನ್‌ ನಡುವೆ ನಡೆಯಿತು ವಿವಾಹ: ನವ ದಂಪತಿಗೆ ಕಾದಿತ್ತು ಶಾಕ್‌, ಈಗ ಠಾಣೆಯಲ್ಲಿ ಲಾಕ್‌!

ರಿಚರ್ಡ್‌ ಬೇ (ದಕ್ಷಿಣ ಆಫ್ರಿಕಾ): ಲಾಕ್‌ಡೌನ್‌ನಿಂದಾಗಿ ಇಡೀ ವಿಶ್ವದಲ್ಲಿ ಅವೆಷ್ಟೋ ಮದುವೆಗಳು ಮುಂದೂಡಲ್ಪಟ್ಟಿವೆ, ತಂತ್ರಜ್ಞಾನ ಬಳಸಿಕೊಂಡು ದೂರ ದೂರದಿಂದಲೇ ಮದುವೆಯಾಗುತ್ತಿರುವುದು ಅಲ್ಲಲ್ಲಿ ವರದಿಯಾಗುತ್ತಿರುವ ನಡುವೆಯೇ, ಪೊಲೀಸರಿಗೆ ತಿಳಿಯದಂತೆ ಗುಟ್ಟಾಗಿ ಮದುವೆಯಾಗಿಬಿಡೋಣ ಎಂದುಕೊಂಡು ಸಾಹಸಕ್ಕೆ ಕೈ ಹಾಕುತ್ತಿರುವವರು ಕೆಲವರು.

ಅಂಥ ಸಾಹಸ ಮಾಡಲು ಹೋಗಿ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ದಕ್ಷಿಣ ಆಫ್ರಿಕಾದ ನವ ಜೋಡಿ. ರಿಚರ್ಡ್‌ ಬೇ ಪ್ರಾಂತ್ಯದ ಕ್ವಾಜುಲು ನಾತಾಲ್‌ ಎಂಬ ಪ್ರದೇಶದಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಹೊರಗಿನವರಿಗೆ ವಿಷಯ ಗೊತ್ತಾಗಬಾರದು ಎಂದು ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕುಟುಂಬಸ್ಥರ ಪೈಕಿ ಸುಮಾರು 50 ಮಂದಿಯನ್ನು ಕರೆಯಲಾಗಿತ್ತು. ಮದುವೆ ನೆರವೇರಿಸಲು ಪಾದ್ರಿ ಕೂಡ ಬಂದಿದ್ದರು.

ಗುಟ್ಟುಗುಟ್ಟಾಗಿ ಮದುವೆಯೂ ನಡೆದೇ ಹೋಯಿತು. ಅಂತೂ ಅಂದುಕೊಂಡದ್ದು ಸಕ್ಸಸ್‌ ಆಯಿತು ಎಂದುಕೊಂಡು ಸಂತೋಷಪಟ್ಟರು ಎಲ್ಲರೂ. ನವ ಜೋಡಿಯಂತೂ ಮದುವೆಯಾದ ಖುಷಿಯಲ್ಲಿ ಬೀಗಿ ಹೋಗಿತ್ತು. ಅದೇ ಖುಷಿಯಲ್ಲಿ ಹೊರಗೆ ಬರುತ್ತಿದ್ದಂತೆಯೇ ಕಾದಿತ್ತು ಶಾಕ್‌. ಎದುರಿಗೆ ಪೊಲೀಸರು ನಿಂತಿದ್ದರು! ಹೌಹಾರಿ ಹೋದರು ದಂಪತಿ. ವಿಷಯ ಒಳಗಿದ್ದ ಜನರಿಗೂ, ಪಾದ್ರಿಯ ಕಿವಿಗೂ ಬಿತ್ತು.

ಎಲ್ಲರೂ ಅಲ್ಲಿಂದ ತಪ್ಪಿಸಿಕೊಂಡು ಹೋಗಲು ಯತ್ನಿಸಿದರು. ನವಜೋಡಿಯೂ ಕೈ ಕೈ ಹಿಡಿದು ಓಡಲು ಯತ್ನಿಸತೊಡಗಿದರು. ಆದರೆ ಪೊಲೀಸರು ಬಿಟ್ಟಾರೆಯೇ? ಎಲ್ಲರನ್ನೂ ಅರೆಸ್ಟ್‌ ಮಾಡಿಯೇ ಬಿಟ್ಟರು! ಪಾದ್ರಿಯೂ ಸೇರಿದಂತೆ ಎಲ್ಲರೂ ಈಗ ಪೊಲೀಸ್‌ ಠಾಣೆಯಲ್ಲಿ ಲಾಕ್‌ ಆಗಿದ್ದಾರೆ.

ಕೊನೆಯ ಪಕ್ಷ ಮದುಮಕ್ಕಳನ್ನಾದರೂ ಬಿಟ್ಟುಬಿಡಿ ಎಂದು ಹಿರಿಯರು ಮಾಡಿಕೊಂಡ ಮನವಿಗಳೆಲ್ಲಾ ವೇಸ್ಟ್‌ ಆಗಿವೆ. ರೂಲ್ಸ್‌ ಅಂದ್ರೆ ರೂಲ್ಸ್‌. ನಿಯಮ ಉಲ್ಲಂಘಿಸಿದ್ದಕ್ಕೆ ಶಿಕ್ಷೆ ಆಗುವುದೇ ಎಂದ ಪೊಲೀಸರು ಮದುಮಕ್ಕಳನ್ನೂ ಅರೆಸ್ಟ್‌ ಮಾಡಿದ್ದಾರೆ. ಎಲ್ಲರ ವಿರುದ್ಧ ಸಂಬಂಧಿತ ಸೆಕ್ಷನ್‌ ಅಡಿಗಳಲ್ಲಿ ಕೇಸು ದಾಖಲು ಮಾಡಲಾಗಿದೆ.

ಬಿಳಿ ದಿರಿಸಿನಲ್ಲಿ ಇರುವ ಮದುಮಗಳು ಪೊಲೀಸ್‌ ಜೀಪ್‌ ಹತ್ತುದ್ದಿದ್ದು, ಮದುಮಗ ನಿಸ್ಸಾಯಕನಾಗಿ ನೋಡುತ್ತಿರುವ ಫೋಟೋ ಈಗ ಎಲ್ಲೆಡೆ ವೈರಲ್‌ ಆಗಿದೆ.

ಮದುಮಕ್ಕಳ ಮೇಲೆ ಸ್ವಲ್ಪ ಕನಿಕರ ತೋರಿರುವ ಪೊಲೀಸರು, ಲಾಕ್‌ಡೌನ್‌ ಮುಗಿದ ಮೇಲೆ ಮದುಮಕ್ಕಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ಹನಿಮೂನ್‌ಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ.(ಏಜನ್ಸೀಸ್‌)