ನ್ಯೂಸ್

ಸೌಮ್ಯ ರೆಡ್ಡಿ ನಾಮಪತ್ರ ಸಲ್ಲಿಕೆ, ರೋಡ್ ಶೋ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಸೋಮವಾರ ನಾಮಪತ್ರ ಸಲ್ಲಿಸಿದರು.

ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜಯನಗರ ಬಿಬಿಎಂಪಿ ಕಚೇರಿವರೆಗೂ ಪಕ್ಷದ ನಾಯಕರೊಂದಿಗೆ ರೋಡ್ ಶೋ ನಡೆಸಿದ ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಕೃಷ್ಣಪ್ಪ, ಪ್ರಿಯ ಕಷ್ಣ, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಪರಿಷತ್ ಸದಸ್ಯ ಯು.ಬಿ ವೆಂಕಟೇಶ್ ಸಾಥ್ ನೀಡಿದರು.

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಕುಮಾರ್ ಕೂಡ ನಡುವೆ ಪಾಲ್ಗೊಂಡು ಅಭ್ಯರ್ಥಿಗೆ ಹರಸಿದರು. ಸೌಮ್ಯರೆಡ್ಡಿ ನಮ್ಮ ಮನೆ ಮಗಳು, ಅವರನ್ನು 1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಕರೆನೀಡಿದರು.

ನನ್ನ ಮಗಳು ಐಶ್ವರ್ಯ ಬೇರೆಯಲ್ಲ, ಸೌಮ್ಯ ರೆಡ್ಡಿ ಬೇರೆಯಲ್ಲ. ಸೌಮ್ಯ ನನ್ನ ಮನೆ ಮಗಳು, ಅತ್ಯಂತ ಕ್ರಿಯಾಶೀಲ ಹೆಣ್ಣುಮಗಳು. ಬೊಮ್ಮನಹಳ್ಳಿ, ಬಸವನಗುಡಿ ಸೇರಿದಂತೆ ಈ ಕ್ಷೇತ್ರದ ಎಲ್ಲಾ ಕಡೆಯೂ ಹೆಚ್ಚು ಮತಗಳು ಸೌಮ್ಯ ಅವರಿಗೆ ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಬಂಟ, ರೆಡ್ಡಿ, ಸೇರಿ ಒಟ್ಟು ಎಂಟು ಮಂದಿ ಒಕ್ಕಲಿಗರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದೆ. ಒಕ್ಕಲಿಗರನ್ನು ಸಿಎಂ ಮಾಡಲಿಲ್ಲವಲ್ಲ ಎನ್ನುವ ಟೀಕೆಗೆ ನಾವು ಈ ರೀತಿ ಉತ್ತರಿಸಿದ್ದೇವೆ. ಇದರ ಜತೆಗೆ ಆರು ಮಹಿಳೆಯರಿಗೆ ಟಿಕೆಟ್ ನೀಡಿದ್ದೇವೆ ಎಂದು ಹೇಳಿದರು.

ಸೌಮ್ಯ ರೆಡ್ಡಿ ಮಾತನಾಡಿ, ನಾವು ಈಗಾಗಲೇ ಕ್ಷೇತ್ರದಲ್ಲಿ ಒಂದು ಸುತ್ತು ಹಾಕಿದ್ದೇವೆ. ಜನರ ನಾಡಿಮಿಡಿತ ಚೆನ್ನಾಗಿ ಅರ್ಥವಾಗಿದೆ. ಎಲ್ಲರೂ ಕಾಂಗ್ರೆಸ್ ಬೇಕು ಅಂತಿದ್ದಾರೆ. ನಮ್ಮ ಪಕ್ಷ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ನಮ್ಮ ಸರ್ಕಾರ ನೀಡಿದೆ ಎಂದರು.

ರಾಜ್ಯಕ್ಕೆ ಕೇಂದ್ರದಿಂದ ತೆರಿಗೆ ಪಾಲು ಬಾರದೆ ತಾರತಮ್ಯ ಮಾಡಲಾಗಿದೆ, ಈ ಹಿಂದೆ ಬಿಜೆಪಿಯಿಂದ 25 ಸಂಸದರು ಇದ್ದರೂ ರಾಜ್ಯದ ವಿಚಾರವಾಗಿ ಧ್ವನಿಯನ್ನೇ ಎತ್ತಿಲ್ಲ. ರಾಜ್ಯದ ವಿಚಾರವಾಗಿ ದ್ರೋಹ ಮಾಡಿದ್ದಾರೆ. ನಾನು ಈ ಬಾರಿ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.

ಕಳೆದ ಎಲ್ಲಾ ಕಡೆ ಮೂರ್ನಾಲ್ಕು ವಾರದಿಂದ ಕ್ಷೇತ್ರದಲ್ಲಿ ಸುತ್ತಾಡಿದ್ದೇವೆ, ಮತ್ತೆ ಕಾಂಗ್ರೆಸ್ ಬರಬೇಕು ಅನ್ನುವುದು ಜನರ ಆಶಯವಾಗಿದೆ. ಹತ್ತು ವರ್ಷದಿಂದ ಅಚ್ಚೇ ದಿನ ಬರುತ್ತೆ ಎಂದು ಬಿಜೆಪಿ ಹೇಳುತ್ತಲೇ ಇದೆ. ಆದರೆ ಒಳ್ಳೇ ದಿನ ಬರಲೇ ಇಲ್ಲ. ಇದರಿಂದ ಜನರಿಗೆ ತುಂಬಾ ಬೇಸರವಾಗಿದೆ ಎಂದರು.