ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಾನ್ನಿಧ್ಯ
ಮೈಸೂರು : ವೇದಾಂತ, ಶಾಸ್ತ್ರದ ಸಮಗ್ರ ಅಧ್ಯಯನದಿಂದ ಜೀವನ ಸಾರ್ಥಕವಾಗಲಿದೆ ಎಂದು ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು. ಕೃಷ್ಣಮೂರ್ತಿಪುರಂನಲ್ಲಿರುವ ಶ್ರೀವ್ಯಾಸತೀರ್ಥ ವಿದ್ಯಾಪೀಠದಲ್ಲಿ ಶನಿವಾರ ಆಯೋಜಿಸಿದ್ದ 8ನೇ ವಾರ್ಷಿಕೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ನಾಲ್ಕು ವಿದ್ಯಾರ್ಥಿಗಳು ಮತ್ತು ಒಬ್ಬ ಅಧ್ಯಾಪಕರಿಂದ ಪ್ರಾರಂಭವಾದ ಗುರುಕುಲ ಮಾದರಿ ಶಿಕ್ಷಣದ ವಿದ್ಯಾಪೀಠ ಇಂದು 8 ಪೂರ್ಣಕಾಲಿಕ ಅಧ್ಯಾಪಕರು ಮತ್ತು 50 ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದೆ. ರಾಮಾಯಣ- ಮಹಾಭಾರತ, ಭಾಗವತ ಮತ್ತು ಶ್ರೀವ್ಯಾಸರಾಜರ ಮಹೋನ್ನತ ಗ್ರಂಥಗಳ ಕುರಿತಾದ ಅನೇಕ ಉಪನ್ಯಾಸ, ಪ್ರವಚನ, ವಿಚಾರಸಂಕಿರಣ, ಮಧ್ವ ಸಿದ್ಧಾಂತ ಪ್ರತಿಪಾದನೆ ಮಹತ್ವ ನೀಡಿದೆ. ನೂರಾರು ಪಂಡಿತರಿಗೆ ವೇದಿಕೆ ಕಲ್ಪಿಸಿ ಕೊಡುವುದರೊಂದಿಗೆ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಪ್ರೋತ್ಸಾಹ ನೀಡಿ 8 ವರ್ಷದ ಮೈಲಿಗಲ್ಲನ್ನು ಸಮರ್ಥವಾಗಿ ಕ್ರಮಿಸಿದೆ ಎಂದರು. ಗುರುಕುಲ ಪದ್ಧತಿಗೆ ಮಹತ್ವ: ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಗುರುಕುಲ ಪದ್ಧತಿ ಶಿಕ್ಷಣದಿಂದ ಮಾತ್ರ ನಮ್ಮ ದೇಶದ ಸಂಸ್ಕೃತ -ಸಂಸ್ಕೃತಿ ಉಳಿಯಲು ಸಾಧ್ಯ ಎಂದರು. ಭಾರತೀಯ ಸಂಸ್ಕೃತಿಗೆ ಮಾರಕವಾಗುವ ಅನೇಕ ಘಟನೆಗಳು ಇಂದು ನಮ್ಮ ಸುತ್ತಮುತ್ತಲು ನಡೆಯುತ್ತಿವೆ. ಈ ಬಗ್ಗೆ ನಾವು ಜಾಗೃತರಾಗಿರಬೇಕು. ನಮ್ಮತನ, ನಮ್ಮ ನೆಲದ ಅಧ್ಯಾತ್ಮಿಕ ಮಹತ್ವ ಉಳಿಯಬೇಕು ಎಂದರೆ ಅದು ಇಂಥ ವಿದ್ಯಾಪೀಠಗಳಿಂದ ಮಾತ್ರ ಸಾಧ್ಯ ಎಂದರು.
ದೇಶದ ಅಗ್ರಪಂಕ್ತಿಯ ತರ್ಕ ಮತ್ತು ನ್ಯಾಯಶಾಸ್ತ್ರ ಜ್ಞಾನಿ ಶ್ರೀವಿದ್ಯಾಶ್ರೀಶ ತೀರ್ಥರೇ ವಿದ್ಯಾಪೀಠದ ಸಾರಥ್ಯ ವಹಿಸಿರುವ ಕಾರಣ 8 ವರ್ಷದ ಸಂಸ್ಥೆ 80 ವರ್ಷ ಮಾಡಬಹುದಾದ ಸಾಧನೆಗಳನ್ನು ಮಾಡಿದೆ. ಈ ವಿದ್ಯಾಪೀಠಕ್ಕೆ ಉಜ್ವಲ ಭವಿಷ್ಯವಿದೆ ಎಂದು ಪ್ರಶಂಸಿಸಿದರು. ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ನಿರ್ದೇಶಕರಾದ ಹಿರಿಯ ವಿದ್ವಾಂಸ ಡಾ. ಆನಂದತೀರ್ಥಾಚಾರ್ಯ ನಾಗಸಂಪಿಗೆ, ಮಹಾರಾಜ ಸಂಸ್ಕೃತ ಪಾಠಶಾಲೆ ಪ್ರಾಂಶುಪಾಲ ವಿದ್ವಾನ್ ಡಾ. ಪಿ. ಸತ್ಯನಾರಾಯಣ, ವಿದ್ಯಾಪೀಠ ಶೈಕ್ಷಣಿಕ ಮಾರ್ಗದರ್ಶಕರಾದ ಶೇಷಗಿರಿ ಆಚಾರ್ಯ, ಶ್ರೀನಿವಾಸಮೂರ್ತಿ, ಗೌರವ ಕಾರ್ಯದರ್ಶಿ ಮಧುಸೂದನಾಚಾರ್ಯ, ಪ್ರಾಚಾರ್ಯ ಡಾ. ಶ್ರೀನಿಧಿ ಪ್ಯಾಟಿ ಇತರರು ಇದ್ದರು.