ಚಾಮುಂಡಿಬೆಟ್ಟ 
ನ್ಯೂಸ್

ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತಡೆಗೆ ಎಸ್‌ಒಪಿ

ಪ್ರಮುಖ ಮುಖ್ಯಾಂಶಗಳು

  • ಸಂಪೂರ್ಣ ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ವಲಯವನ್ನಾಗಿಸಲು ಮುಂದು
  • ಕಸ ತೆಗೆಯುವ ಜವಾಬ್ದಾರಿ ಹಂಚಿಕೆಯಿಂದ ಯಾರು ನುಣಚಿಕೊಳ್ಳುವಂತಿಲ್ಲ
ಮೈಸೂರು:ಚಾಮುಂಡಿಬೆಟ್ಟದಲ್ಲಿ ಭಕ್ತರಿಗೆ ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುತ್ತಿರುವ ಕಿರಿಕಿರಿ ತಪ್ಪಿಸಲು ಮುಂದಾಗಿರುವ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಹೊಸದಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ರೂಪಿಸಲು ಮುಂದಾಗಿದೆ.
ಚಾಮುಂಡಿಬೆಟ್ಟದಲ್ಲಿ ಕಟ್ಟುನಿಟ್ಟಿನ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ (ಎಸ್‌ಒಪಿ) ಜಾರಿಗೆ ತರುವ ಬಗ್ಗೆ ಚಿಂತನೆ ನಡೆಯುತ್ತಿದ್ದು, ಅದರ ಭಾಗವಾಗಿ ಸಂಪೂರ್ಣ ಬೆಟ್ಟವನ್ನು ಪ್ಲಾಸ್ಟಿಕ್‌ಮುಕ್ತ ವಲಯವನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕಸ ತೆಗೆಯುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ನಡುವೆ ಶೀತಲ ಸಮರನಡೆಯುತ್ತಿತ್ತು. ಇದಕ್ಕೆ ಎಸ್‌ಒಪಿಯಿಂದ ಕಡಿವಾಣ ಬೀಳಲಿದ್ದು, ಯಾರು, ಎಲ್ಲಿ, ಯಾವ ಜವಾಬ್ದಾರಿ ನಿರ್ವಹಿಸಬೇಕು ಎನ್ನುವ ಹೊಣೆಗಾರಿಕೆೆ ವಹಿಸಲಾಗುತ್ತದೆ.
ಇದರ ಅನ್ವಯ ಪ್ರಾಧಿಕಾರ, ಅರಣ್ಯ ಇಲಾಖೆ ಎಲ್ಲಿ ಕಸ ತೆಗೆಯಬೇಕು, ಅದರ ಜವಾಬ್ದಾರಿ ಯಾರು, ಅದರ ಮೇಲುಸ್ತುವಾರಿ ಯಾರಿಗಿದೆ, ಜನರು ಯಾವ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು, ಯಾವ ಮಾನದಂಡ ಅನುಸರಿಬೇಕು ಇತ್ಯಾದಿ ವಿಷಯವನ್ನು ನಿಖರವಾಗಿ ಕಾರ್ಯರೂಪಕ್ಕೆ ತರಲಾಗುತ್ತದೆ.
ಇದಕ್ಕೆ ಪೂರಕವಾಗಿ ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಕುಡಿಯುವ ನೀರಿನ ಮಾರಾಟಕ್ಕೆ ನಿರ್ಬಂಧ, ಆರ್‌ಒ ಘಟಕಗಳ ಮೂಲಕ ಉಚಿತ ಕುಡಿಯುವ ನೀರಿನ ವ್ಯವಸ್ಥೆ, ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ, ಕಸ ವಿಲೇವಾರಿ ಹಾಗೂ ಪರಿಸರ ಸಂರಕ್ಷಣೆಗೆ ವಿಶೇಷ ಕ್ರಮ ವಹಿಸಲಾಗುತ್ತದೆ.
ಈ ವ್ಯವಸ್ಥೆ ಕಟ್ಟ್ಟುನಿಟ್ಟಾಗಿ ಜಾರಿಗೊಂಡರೆ ಚಾಮುಂಡಿಬೆಟ್ಟದ ಪರಿಸರವನ್ನು ಕಸ ಹಾಗೂ ಪ್ಲಾಸ್ಟಿಕ್‌ಮುಕ್ತಗೊಳಿಸಲು ಸಹಾಯಕವಾಗುತ್ತದೆ.
ಈಗ ಮೈಸೂರು ನಗರ ಸೇರಿದಂತೆ ಚಾಮಂಡಿಬೆಟ್ಟದಲ್ಲಿಯೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದರೂ ಅದು ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಇದರಿಂದ ಪ್ಲಾಸ್ಟಿಕ್ ಬಾಟಲಿಗಳ ರಾಶಿಯೇ ಅಲ್ಲಲ್ಲಿ ಕಂಡುಬರುತ್ತಿದೆ.
ಇದರಿಂದ ಜೀವ ವೈವಿಧ್ಯದ ಆಗರವಾಗಿರುವ ಬೆಟ್ಟದ ಮಾರ್ಗ ಹಾಗೂ ಮೆಟ್ಟಿಲುಗಳ ಹಾದಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದು ಕಂಡುಬರುತ್ತಿದೆ. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ, ರಾಜ್ಯದ ವಿವಿಧ ಜಿಲ್ಲೆಗಳು, ಹೊರ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಇಲ್ಲಿಗೆ ನಿತ್ಯವೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಹೀಗೆ ಬರುವವರಿಗೆ ತ್ಯಾಜ್ಯದ ಕಳಪೆ ನಿರ್ವಹಣೆಯ ಕಾರಣದಿಂದ ಇರಿಸುಮುರಿಸು ಉಂಟಾಗುತ್ತಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಲಾಗಿದೆ.
ಬೆಟ್ಟದ ಮೇಲಿರುವ ಅಂಡಿಗಳಿಂದಲೂ ಸಾಕಷ್ಟು ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ವ್ಯಾಪಾರ ಮುಗಿಸಿ ಹೋದ ನಂತರ ಸ್ವಚ್ಛತೆ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಮುಂಜಾನೆಯೇ ದೇವಿಯ ದರ್ಶನಕ್ಕೆಂದು ಬರುವ ಅಸಂಖ್ಯಾತ ಭಕ್ತರಿಗೆ ತ್ಯಾಜ್ಯದ ದರ್ಶನವೇ ಮೊದಲಿಗೆ ಆಗುತ್ತಿದೆ. ಈ ಬಗ್ಗೆ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.
ಈ ಹಿಂದೆ ಬೆಟ್ಟಕ್ಕೆ ಹೋಗುವ ಮುಖ್ಯದ್ವಾರದ ಬಳಿ ಅರಣ್ಯ ಇಲಾಖೆಯಿಂದ ವಾಹನಗಳನ್ನು ತಡೆದ ಪ್ಲಾಸ್ಟಿಕ್ ವಸ್ತುಗಳು ಇದೆಯೇ ಇಲ್ಲವೇ ಎನ್ನುವುದನ್ನು ಪರಿಶೀಲನೆ ಮಾಡಲಾಗುತ್ತಿತ್ತು.
ಈ ಕಾರ್ಯಕ್ಕೆ ಪೊಲೀಸ್, ಹೋಂಗಾರ್ಡ್‌ನ ಸಹಕಾರವನ್ನು ಪಡೆದುಕೊಳ್ಳಲಾಗುತ್ತಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಬದಲಾದಂತೆ ಇಚ್ಛಾಶಕ್ತಿ ಕೊರತೆಯಿಂದ ಬೆಟ್ಟಕ್ಕೆ ಹೋಗುವ ವಾಹನಗಳ ಪ್ಲಾಸ್ಟಿಕ್ ತಪಾಸಣೆ ನಿಂತು ಹೋಯಿತು. ಇದರಿಂದ ಜನರು, ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್ ಬಿಸಾಡುವುದು ನಡೆಯುತ್ತಿದೆ.
ಪರಿಸರದ ಮೇಲೆ ಅಗುತ್ತಿರುವ ಪರಿಣಾಮವನ್ನು ಗಮನಿಸಿರುವ ನಗರಪಾಲಿಕೆ ಆಡಳಿತಾಧಿಕಾರಿಯೂ ಅದ ಪ್ರಾದೇಶಿಕ ಆಯುಕ್ತ ನಿತೇಶ್‌ಪಾಟೀಲ್ ಅವರು, ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಅವರಿಗೆ, ಸ್ವಚ್ಛತೆಗೆ ಹೆಚ್ಚಿನ ಗಮನ ನೀಡುವಂತೆ ತಿಳಿಸಿದ್ದಾರೆ. ಹೀಗಾಗಿ ಹೆಚ್ಚಿನ ಸ್ವಚ್ಛತಾ ಸಿಬ್ಬಂದಿ ನಿಯೋಜಿಸಿ ದೇವಾಲಯ ಆವರಣ, ಮೆಟ್ಟಿಲುಗಳ ಮಾರ್ಗ, ವಾಹನಗಳನ್ನು ನಿಲುಗಡೆ ಮಾಡಿ ಭಕ್ತರು ದೇವಾಲಯಕ್ಕೆ ಬರುವ ರಸ್ತೆಯುದ್ದಕ್ಕೂ ಸ್ವಚ್ಛತೆ ಮಾಡಿಸಲಾಗುತ್ತಿದೆ.
ಭಕ್ತರದೂ ಜವಾಬ್ದಾರಿ:
ಸ್ವಚ್ಛ ಚಾಮುಂಡಿ ಬೆಟ್ಟ ನಿರ್ಮಾಣ ಕೇವಲ ಅಧಿಕಾರಿಗಳ ಜವಾಬ್ದಾರಿಯಲ್ಲ, ಭಕ್ತರು ಹಾಗೂ ಪ್ರವಾಸಿಗರ ಸಹಕಾರವೂ ಅಗತ್ಯವಾಗಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದಂತೆ, ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಭಾಗಿಯಾಗುವಂತೆ ಪ್ರಾಧಿಕಾರ ಮನವಿ ಮಾಡಿದೆ.
ಎಸ್‌ಒಪಿ ಸಿದ್ಧಗೊಳ್ಳುತ್ತಿದೆ
ಚಾಮುಂಡಿಬೆಟ್ಟದ ಪರಿಸರವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ. ಅಧಿಕಾರಿಗಳೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಎಸ್‌ಒಪಿ ಸಿದ್ಧಗೊಳ್ಳುತ್ತಿದ್ದು, ಅದಕ್ಕೆ ಸಹಕಾರಿಯಾಗಿ ಹೆಚ್ಚುವರಿಯಾಗಿ 25 ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಪ್ರಾಧಿಕಾರದ ಕಾರ್ಯದರ್ಶಿಗೆ ತಿಳಿಸಲಾಗಿದೆ. ದೇವಸ್ಥಾನದ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ರಸ್ತೆ, ಮೆಟ್ಟಿಲು ಪ್ರದೇಶ ಸ್ವಚ್ಛಗೊಳಿಸಲು ಸೂಚನೆ ನೀಡಲಾಗಿದೆ.
ನಿತೇಶ್‌ಪಾಟೀಲ್
ಪ್ರಾದೇಶಿಕ ಆಯುಕ್ತರು, ಮೈಸೂರು