ನ್ಯೂಸ್

ಸಾವರ್ಕರ್ ಪೋಟೋಗೆ ಮಸಿ; ಕಾಂಗ್ರೆಸ್‌ನ ಮೂವರ ಬಂಧನ

ಬೆಂಗಳೂರು: ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕ ಮತ್ತು ವೀರ ಸಾವರ್ಕರ್ ಚಿತ್ರಕ್ಕೆ ಕಪ್ಪು ಬಣ್ಣ ಬಳಿದ ಆರೋಪದಡಿ ಎನ್‌ಎಸ್‌ಯುಐ ನ ಮೂವರು ಕಾರ್ಯಕರ್ತರನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ. ಎನ್‌ಎಸ್‌ಯುಐ ಕಾರ್ಯಕರ್ತರಾದ ನಿಶ್ಚಲ್‌ಗೌಡ, ಪ್ರವೀಣ್ ಮತ್ತು ಲಕ್ಷ ರಾಜ್ ಬಂಧಿತರು.

ಮಂಗಳವಾರ ಮಧ್ಯಾಹ್ನ 1.30ಕ್ಕೆ ಸಂದೀಪ್ ಉನ್ನೀಕೃಷ್ಣನ್ ರಸ್ತೆಯ ಡೈರಿ ಸರ್ಕಲ್‌ನಲ್ಲಿರುವ ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕ ಮತ್ತು ಅದರ ಮೇಲಿನ ಸಾವರ್ಕರ್ ಛಾಯಾಚಿತ್ರಕ್ಕೆ ಕಪ್ಪು ಬಣ ಬಳಿದು ವಿರೂಪಗೊಳಿಸಿದ್ದರು. ಸಾವರ್ಕರ್‌ಗೆ ಸಿಗುತ್ತಿರುವ ಗೌರವ ಭಗತ್ ಸಿಂಗ್‌ಗೆ ಸಿಗುತ್ತಿಲ್ಲ. ಈ ಸೇತುವೆಗೆ ಭಗತ್ ಸಿಂಗ್ ಹೆಸರಿಡುವಂತೆ ಆಗ್ರಹಿಸಿದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್‌ಎಸ್‌ಯುಐ ಕಾರ್ಯಕರ್ತರ ಪುಂಡಾಟದ ವಿರುದ್ಧ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ‘ಕಾಂಗ್ರೆಸ್ ನಾಯಕರ ಫೋಟೋಗಳು ಯಲಹಂಕದಲ್ಲಿವೆ. ಯಾವುದೇ ಪೋಟೋಗಳಿಗೂ ಮಸಿ ಬಳಿದಿಲ್ಲ. ವೀರ ಸಾವರ್ಕರ್ ಇತಿಹಾಸವನ್ನು ಕಾಂಗ್ರೆಸ್ ತಿಳಿದುಕೊಳ್ಳಲಿ’ ಎಂದು ಎಸ್.ಆರ್. ವಿಶ್ವನಾಥ್ ಕಿಡಿಕಾರಿದರು. ಈಗ ಮೂವರನ್ನು ಬಂಧಿಸಿದ್ದು, ಉಳಿದವರನ್ನು ಶೀಘ್ರವಾಗಿ ಬಂಧನ ಮಾಡಬೇಕು. ಇಲ್ಲದೆ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ವಿಶ್ವನಾಥ್ ಎಚ್ಚರಿಕೆ ನೀಡಿದರು.