ನವದೆಹಲಿ: ದೆಹಲಿಯ ಸೋನುಪಂಜಾಬ್ ಎಂಬ ಸೆಕ್ಸ್ ಕ್ವೀನ್ ಕೈಯಲ್ಲಿ ಸಿಕ್ಕಿ ನಲುಗಿದ್ದ 12 ವರ್ಷದ ಬಾಲಕಿಗೆ (ಈಗ 17 ವರ್ಷ) ಏಳು ಲಕ್ಷ ರೂಪಾಯಿ ಪರಿಹಾರವನ್ನು ಒದಗಿಸುವಲ್ಲಿ ದೆಹಲಿ ಮಹಿಳಾ ಆಯೋಗ ಸಹಾಯ ಮಾಡಿದೆ.
ಕೆಲವು ದಶಕಗಳಿಂದ ಮಕ್ಕಳು ಹಾಗೂ ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿ, ಇದೀಗ ಜೈಲು ಶಿಕ್ಷೆಗೆ ಗುರಿಯಾಗಿರುವ ಸೋನು ಪಂಜಾಬನ್‌ಗೆ 24 ವರ್ಷಗಳ ಕಠಿಣ ಶಿಕ್ಷೆ ನೀಡಿದ್ದ ಕೋರ್ಟ್, ಏಳು ಲಕ್ಷ ರೂಪಾಯಿಗಳ ದಂಡ ವಿಧಿಸಿತ್ತು.
2009ರಲ್ಲಿ 12 ವರ್ಷದ ಬಾಲಕಿಯನ್ನು ಅಪಹರಿಸಿದ ವ್ಯಕ್ತಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಸೀಮಾ ಎಂಬಾಕೆಗೆ ಆಕೆಯನ್ನು ಮಾರಿದ್ದ. ಸೀಮಾ ಆಕೆಯನ್ನು ಸೋನು ಪಂಜಾಬನ್‌ಗೆ ಮಾರಿದ್ದಳು. ಬಾಲಕಿಯನ್ನು ಗ್ರಾಹಕರ ಬಳಿ ಕಳುಹಿಸುವ ಮುನ್ನ ಆಕೆಗೆ ಡ್ರಗ್ಸ್ ನೀಡಲಾಗುತ್ತಿತ್ತು. ವಯಸ್ಕಳಂತೆ ಕಾಣುವಂತಾಗಲು ಆಕೆ ಮೇಲೆ ಉದ್ದೀಪನ ಮದ್ದು ಪ್ರಯೋಗಿಸಲಾಗಿತ್ತು. ಸತತ ಐದು ವರ್ಷಗಳ ಕಾಲ ಈ ನರಕಯಾತನೆ ಅನುಭವಿಸಿದ್ದ ಬಾಲಕಿ, 2014ರಲ್ಲಿ ಆಕೆಯ ಜಾಲದಿಂದ ತಪ್ಪಿಸಿಕೊಂಡು ನಜಾಫ್ಗಢ್ ಪೊಲೀಸರಿಗೆ ದೂರು ನೀಡಿದ್ದಳು.
ಇದರ ಅನ್ವಯ ದೂರು ದಾಖಲಾಗಿದ್ದು, 24 ವರ್ಷಗಳ ಶಿಕ್ಷೆಯಾಗಿದೆ ಸೋನುಗೆ. ಇದೀಗ ಪರಿಹಾರದ ರೂಪದಲ್ಲಿ ಏಳು ಲಕ್ಷ ರೂಪಾಯಿಗಳನ್ನು ಆಕೆಗೆ ತಲುಪಿಸುವಲ್ಲಿ ಆಯೋಗವು ಸಹಾಯ ಮಾಡಿರುವುದಾಗಿ ವರದಿಯಾಗಿದೆ.