ನ್ಯೂಸ್

ನಾನಂತೂ ದರ್ಶನ್​ ಪರ ನಿಲ್ಲುತ್ತೇನೆ; ಹತ್ಯೆ ಪ್ರಕರಣದ ಕುರಿತು ಸೋನು ಗೌಡ ಹೇಳಿಕೆ ವೈರಲ್​

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ A2 ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್​ ಹಾಗೂ ಸಹಚರರ ವಿರುದ್ಧ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದು, ನಟನೊಬ್ಬ ಎಸಗಿರುವ ಈ ಹೀನ ಕೃತ್ಯ ಹಲವರ ಕಣ್ಣು ಕೆಂಪಗಾಗಿಸಿದೆ. ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಭಾಗಿಯಾಗಿರುವ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ಪ್ರಕರಣದ ಕುರಿತಾಗಿ ಬಿಗ್​ಬಾಸ್​ ಒಟಿಟಿ ಮಾಜಿ ಸ್ಪರ್ಧಿ ಸೋನು ಶ್ರೀನಿವಾಸ್​ ಗೌಡ ಪ್ರತಿಕ್ರಿಯಿಸಿದ್ದಾರೆ. ತಮ್ಮ ಯುಟ್ಯೂಬ್​ ಚಾನೆಲ್​ನಲ್ಲಿ ಈ ಕುರಿತು ವಿಡಿಯೋ ಒಂದನ್ನು ಪೋಸ್ಟ್​ ಮಾಡಿರುವ ಸೋನು ದರ್ಶನ್​ಗೆ ಅನೇಕರು ಮೋಸ ಮಾಡಿದ್ದಾರೆ. ಆದರೆ, ಅವರು ಯಾರಿಗೂ ಮೋಸ ಮಾಡಿಲ್ಲ ಎಂದು ಹೇಳಿದ್ದಾರೆ.

ತುಂಬಾ ಜನ ನನಗೂ ಕೆಟ್ಟ ಕೆಟ್ಟದಾಗಿ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಾರೆ, ಕಮೆಂಟ್‌ ಮಾಡುತ್ತಾರೆ. ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಈ ರೀತಿ ಅಶ್ಲೀಲವಾಗಿ ಕಾಮೆಂಟ್ ಮಾಡಿದರೆ ಸುಮ್ಮನೆ ಇರುತ್ತೀರಾ. ಒಂದು ಬಾರಿ ಅಭಿಮಾನಿಯಾದರೆ ಸಾಯುವವರೆಗೂ ಆ ಅಭಿಮಾನ ಇದ್ದೇ ಇರುತ್ತದೆ. ನಾನು ಕೂಡ ದರ್ಶನ್ ಅಭಿಮಾನಿ. ದರ್ಶನ್ ಮಾಡಿದ್ದು ತಪ್ಪು ಅಂತಾ ಅನೇಕರು ಹೇಳುತ್ತಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು.

ನಟ ದರ್ಶನ್ ಅವರಿಂದ ತುಂಬಾ ಜನರು ಬೆಳೆದಿದ್ದಾರೆ. ದರ್ಶನ್ ಅವರನ್ನು ಬಳಸಿಕೊಂಡವರು ಇದೀಗ ಯಾರೂ ಕೂಡ ಅವರ ಬಗ್ಗೆ ಮಾತನಾಡಲು ಮುಂದೆ ಬರುತ್ತಿಲ್ಲ. ದರ್ಶನ್ ಅವರಿಗೆ ಬಹಳಷ್ಟು ಜನರು ಮೋಸ ಮಾಡಿದ್ದಾರೆ, ಆದರೆ ಅವರು ಯಾರಿಗೂ ಮೋಸ ಮಾಡಿಲ್ಲ. ನಾನು ಕೂಡ ತಪ್ಪು ಮಾಡದೆ ಜೈಲಿಗೆ ಹೋಗಿ ಬಂದಿದ್ದೇನೆ. ಆದ್ದರಿಂದ ಧ್ವನಿ ಎತ್ತಬೇಕು ಅಂತಾ ಮಾತನಾಡುತ್ತಿದ್ದೇನೆ. ನನ್ನ ಬಗ್ಗೆ ನಾಳೆ ಯಾರೇ ಏನೆ ಮಾತನಾಡಿದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ತಪ್ಪು ಮಾಡದೆ ಇದ್ದವರೆಲ್ಲ ಜೈಲಿಗೆ ಬಂದಿದ್ದನ್ನು ನಾನು ನೋಡಿದ್ದೇನೆ.

ಕೆಟ್ಟದ್ದನ್ನು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆ ಆಗತ್ತದೆ. ಅಂದು ಅಣ್ಣ, ತಮ್ಮ, ಮಗ ಅಂತಾ ಹೇಳುವವರು ಇಂದು ಬಾಸ್ ಬಗ್ಗೆ ಏನೂ ಮಾತನಾಡುತ್ತಿಲ್ಲ. ಇದು ತುಂಬಾ ಬೇಸರ ತಂದಿದೆ. ನಾನಂತೂ ದರ್ಶನ್ ಪರ ನಿಂತುಕೊಳ್ಳುತ್ತೇನೆ. ಮತ್ತೊಂದೆಡೆ ರೇಣುಕಾಸ್ವಾಮಿ ಕುಟುಂಬಕ್ಕೆ ಒಳ್ಳೆಯದಾಗಲಿ, ಕಾನೂನಿನ ಪ್ರಕಾರ ಅವರಿಗೆ ಏನು ಸಿಗಬೇಕೋ ಅದು ಸಿಗತ್ತದೆ. ದರ್ಶನ್ ಅವರ ಒಳ್ಳೆಯತನವೇ ಅವರನ್ನು ಕಾಪಾಡತ್ತದೆ ಎಂದು ಸೋನು ಗೌಡ ಹೇಳಿದ್ದಾರೆ.