ನವದೆಹಲಿ: ಹನಿಮೂನ್ ವೇಳೆ ಪತಿ ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಸೋನಂ ರಘುವಂಶಿ ಮದುವೆಗೂ ಮುನ್ನ ಮತ್ತು ಆ ಬಳಿಕ ಒಬ್ಬ ವ್ಯಕ್ತಿಯೊಂದಿಗೆ 119 ಬಾರಿ ಫೋನ್ ಮಾಡಿ ಮಾತನಾಡಿರುವ ವಿಷಯ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಸೋನಂ ಫೋನ್ ನಂಬರ್ನ ಕರೆ ವಿವರಗಳನ್ನು ಕಲೆ ಹಾಕಿದಾಗ ಮಾರ್ಚ್ 1ರಿಂದ ಮಾರ್ಚ್ 25 ರವರೆಗೆ ಸಂಜಯ್ ವರ್ವ ಎಂಬ ವ್ಯಕ್ತಿಯೊಂದಿಗೆ ನೂರಕ್ಕೂ ಹೆಚ್ಚು ಬಾರಿ ಫೋನ್ನಲ್ಲಿ ಮಾತನಾಡಿರುವುದು ಕಂಡು ಬಂದಿದೆ. ಆದರೆ ಪ್ರಸ್ತುತ ಸಂಜಯ್ ಫೋನ್ ನಂಬರ್ ಸ್ವಿಚ್ ಆಪ್ ಆಗಿದ್ದು, ಈ ವ್ಯಕ್ತಿ ಯಾರು, ಸೋನಂಗೂ ಈತನಿಗೂ ಏನು ಸಂಬಂಧ, ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಈತನ ಪಾತ್ರ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
3 ಫೋನ್ ಬಳಕೆ: ಸೋನಂ ತನ್ನ ಪತಿ ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ ಬಳಿಕ ಅತನ ಫೋನ್ ಒಡೆದು ಪ್ರಪಾತಕ್ಕೆ ಎಸೆದಿದ್ದಳು. ಆ ಬಳಿಕ ಆಕೆ ತನ್ನ ಬಳಿ ಇದ್ದ 3 ಫೋನ್ಗಳನ್ನು ಸ್ವಿಚ್ ಆಫ್ ಮಾಡಿ ಸ್ಥಳದಿಂದ ಪರಾರಿಯಾಗಿ ಇಂದೋರ್ಗೆ ಬಂದಿದ್ದಳು. ಇಂದೋರ್ನಲ್ಲಿ ಆಕೆ ತನ್ನ ಒಂದು ಫೋನ್ ಆನ್ ಮಾಡಿ ವಾಟ್ಸ್ಆಪ್ ಮೆಸೇಜ್ಗಳನ್ನು ಪರಿಶೀಲಿಸಿದ್ದಳು. ಸೋನಂ ಫೋನ್ ಸ್ವಿಚ್ ಆನ್ ಮಾಡುತ್ತಿದ್ದಂತೆ ಪೊಲೀಸರಿಗೆ ಅದರ ಮಾಹಿತಿ ಲಭ್ಯವಾಗಿ, ಸೋನಂಳ ಹುಡುಕಾಟ ತೀವ್ರಗೊಳಿಸಿ ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು. ಆದರೆ ಇದುವರೆಗೆ ಆಕೆಯ ಫೋನ್ಗಳು ಪತ್ತೆಯಾಗಿಲ್ಲ, ಪೊಲೀಸರು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ಸ್ಥಳಗಳಲ್ಲಿ ಫೋನ್ಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.