ನ್ಯೂಸ್

BBC ಕಾರಣದಿಂದಾಗಿ ಎಕೆ ಆ್ಯಂಟೊನಿ ಪುತ್ರ ಬಿಜೆಪಿಗೆ! ಯಾಕೆ, ಹೇಗೆ?

ನವದೆಹಲಿ: ಎಕೆ ಆ್ಯಂಟೊನಿ ಪುತ್ರ ಅನಿಲ್ ಆಂಟೋನಿ ಜನವರಿಯಲ್ಲಿ ಕಾಂಗ್ರೆಸ್​ ತೊರೆದಿದ್ದರು. ಇದೀಗ ಅವರು ಬಿಜೆಪಿ ಸೇರಿದ್ದಾರೆ. ಪ್ರಧಾನಿ ಮೋದಿ ಕುರಿತು ಬಿಬಿಸಿ ಬಿಡುಗಡೆ ಮಾಡಿರುವ ವಿವಾದಾತ್ಮಕ ಸಾಕ್ಷ್ಯಚಿತ್ರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಮಾಜಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಇತರರ ಸಮ್ಮುಖದಲ್ಲಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಇಂದು (ಏ.6) ಬಿಜೆಪಿಗೆ ಸೇರ್ಪಡೆಗೊಂಡರು.

ಪಕ್ಷದ ಸಂಸ್ಥಾಪನಾ ದಿನದಂದು ಆಂಟನಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕಾಗಿ ಹರ್ಷವನ್ನು ವ್ಯಕ್ತಪಡಿಸಿದ ಗೋಯಲ್ "ಅವರೊಬ್ಬ ಬಹುಮುಖ ವ್ಯಕ್ತಿತ್ವ. ಶ್ರೀ ಅನಿಲ್ ಆಂಟೋನಿ ಜಿ ಅವರ ಅರ್ಹತೆಗಳನ್ನು ನೋಡಿ ನಾನು ತುಂಬಾ ಪ್ರಭಾವಿತನಾಗಿದ್ದೆ" ಎಂದು ಹೇಳಿದರು. ಅನಿಲ್​ ಆ್ಯಂಟನಿ ಮುಂದಿನ ವರ್ಷಗಳಲ್ಲಿ ಪಕ್ಷದ ಬೆಳವಣಿಗೆಗೆ ಪೂರಕವಾಗಲಿದ್ದಾರೆ ಎಂದು ಆಶಿಸಿ ಹಾರೈಸಿದರು.

ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾತನಾಡಿದ ಅನಿಲ್​ ಆ್ಯಂಟನಿ, "ಕಾಂಗ್ರೆಸ್‌ನ ಕೆಲವರು ತಮ್ಮ ಧರ್ಮ ಕುಟುಂಬಕ್ಕಾಗಿ ದುಡಿಯುತ್ತಾರೆ ಎಂದು ಭಾವಿಸುತ್ತಾರೆ. ನನ್ನ ಧರ್ಮ ರಾಷ್ಟ್ರಕ್ಕಾಗಿ ಕೆಲಸ ಮಾಡುವುದು ಎಂದು ನಾನು ಭಾವಿಸುತ್ತೇನೆ. "ಬಹು ನಾಯಕತ್ವ ಹೊಂದಿರುವ ಜಗತ್ತಿನಲ್ಲಿ ಭಾರತವನ್ನು ಪ್ರಮುಖ ಶಕ್ತಿಯಾಗಿ ಇರಿಸಲು ಪ್ರಧಾನಿಯ ದೂರಾಲೋಚನೆಗಾಗಿ ಅವರು ಪ್ರಧಾನಿ ಮೋದಿಯನ್ನು ಶ್ಲಾಘಿಸಿದರು. ಇದೇ ಸಮದರ್ಭದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡುವ ಬಿಜೆಪಿ ಸದಸ್ಯರನ್ನು ಶ್ಲಾಘಿಸಿದರು. ಅವರು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದು ಅವರೊಂದಿಗೆ ಸೇರಲು ಇತರರಿಗೆ ಕರೆ ನೀಡಿದರು. (ಏಜೆನ್ಸೀಸ್)