ಭುವನೇಶ್ವರ: ಮದ್ಯಪಾನ ಮಾಡಲಿಕ್ಕೆ ನೂರು ರೂಪಾಯಿ ಸಿಗಲಿಲ್ಲ ಅಂತ ಅಮ್ಮನನ್ನೇ ಬಡಿದು ಕೊಂದ ಪ್ರಕರಣವೊಂದು ನಡೆದಿದೆ. ಘಟನೆ ಬಳಿಕ ಮಗ ಪರಾರಿಯಾಗಿ, ತಲೆಮರೆಸಿಕೊಂಡಿದ್ದು, ಆತನ ಅಣ್ಣ ಪೊಲೀಸರಿಗೆ ದೂರು ನೀಡಿದ್ದಾನೆ.
ಒಡಿಶಾದ ಭುವನೇಶ್ವರದಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಇಲ್ಲಿನ ಮಯೂರ್ಭಂಜ್ ಜಿಲ್ಲೆಯ ಜಶಿಪುರ್ನಲ್ಲಿ ನಿನ್ನೆ ರಾತ್ರಿ 21 ವರ್ಷದ ಸರೋಜ್ ನಾಯಕ್ ಎಂಬಾತ ಮದ್ಯ ಖರೀದಿಸುವ ಸಲುವಾಗಿ ಅಮ್ಮ ಸಲಂದಿ ನಾಯಕ್ ಬಳಿ ನೂರು ರೂಪಾಯಿ ಕೇಳಿದ್ದಾನೆ. ಆದರೆ ತಾಯಿ ಬಳಿ ನೂರು ರೂಪಾಯಿ ಇರದ ಕಾರಣ ಸಿಟ್ಟಿಗೆದ್ದು ಗಲಾಟೆ ಮಾಡಿದ ಮಗ, ತಾಯಿಯನ್ನು ಥಳಿಸಿದ್ದಾನೆ.
ಗಂಭೀರವಾದ ಗಾಯಕ್ಕೊಳಗಾದ ಸಲಂದಿ ನಾಯಕ್ ಬಳಿಕ ಸಾವಿಗೀಡಾಗಿದ್ದು, ಆ ನಂತರ ಮಗ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಸಲಂದಿ ನಾಯಕ್ ಹಿರಿಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾನೆ. ನಿನ್ನೆ ರಾತ್ರಿ ನಾನಿರದ ಸಮಯದಲ್ಲಿ ತಮ್ಮ ತಾಯಿಗೆ ಥಳಿಸಿದ ಬಗ್ಗೆ ಫೋನ್ ಕರೆ ಬಂತು, ಕೂಡಲೇ ಮನೆ ಬಳಿಗೆ ಹೋಗಿ ನೋಡಿದರೆ ಅಮ್ಮ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆ, ಆದರೆ ತಾಯಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದರು ಎಂದು ಆರೋಪಿಯ ಅಣ್ಣ ದೂರಿನಲ್ಲಿ ತಿಳಿಸಿದ್ದಾನೆ.