ನ್ಯೂಸ್

ಅತ್ತೆಗೆ ಚಾಕುವಿನಿಂದ ಇರಿದು ಹತ್ಯೆಗೈದ ಅಳಿಯ

ಅರಕಲಗೂಡು: ತಾಲೂಕಿನ ರಾಮನಾಥಪುರದಲ್ಲಿ ಪತ್ನಿಯ ಶೀಲ ಶಂಕಿಸಿ ಅಳಿಯ ಅತ್ತೆಗೆ ಚಾಕುವಿನಿಂದ ಇರಿದು ಗುರುವಾರ ರಾತ್ರಿ ಹತ್ಯೆ ಮಾಡಿದ್ದಾನೆ.

ಜಹೀರ್ ಅಹಮದ್ ಅವರ ಪತ್ನಿ ಫೈರೋಜಾ ಬಾನು (55) ಕೊಲೆಯಾದ ಮಹಿಳೆ. ಈಕೆಯ ಮಗಳು ಸಮೀನಾ ಬಾನು ಎಂಬಾಕೆಯನ್ನು ಬೆಟ್ಟದಪುರ ಗ್ರಾಮದ ರಸೂಲ್ ಷರೀಫ್ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ರಸೂಲ್ ತನ್ನ ಹೆಂಡತಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಆಗಾಗ ಜಗಳ ತೆಯುತ್ತಿದ್ದ. ಇದರಿಂದಾಗಿ ಗುರವಾರ ಬೆಳಗ್ಗೆ ಫೈರೊಜಾ ಬಾನು ತನ್ನ ಮಗಳನ್ನು ರಾಮನಾಥಪುರದ ಮನೆಗೆ ಕರೆತಂದಿದ್ದಳು. ಸಂಜೆ ಮನೆಗೆ ಬಂದ ಅಳಿಯನನ್ನು ತಡೆಯಲು ಬಾಗಿಲ ಬಳಿ ಬಂದ ಅತ್ತೆಯ ಎದೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಹೆಂಡತಿ ಸಮೀನಾ ಬಾನು ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದು ಹಾಸನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅತ್ತಿಗೆ ಸುಮಯಾ ಬಾನು ಅವರ ಬೆರಳಿಗೆ ಪೆಟ್ಟಾಗಿದೆ.

ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕೊಣನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.