ಬೆಂಗಳೂರು: ತಂದೆಯ ಕೊಲೆಗೆ ಮಗನೇ 1 ಕೋಟಿ ರೂ. ಸುಪಾರಿ ಕೊಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಸುಪಾರಿ ಪಡೆದು ಕೊಚ್ಚಿ ಕೊಂದಿದ್ದ ಆರೋಪಿಗಳು ಇದೀಗ ಜೈಲು ಸೇರಿದ್ದಾರೆ. ಈಗ ಸುಪಾರಿ ಕೊಟ್ಟ ಮಗ ಸೇರಿದಂತೆ ಒಟ್ಟು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಪುತ್ರ ಮಣಿಕಂಠ, ಶಿವಕುಮಾರ್ ಅಲಿಯಾಸ್ ಶಿವ್, ನವೀನ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಸಂಪೂರ್ಣ ವಿವರ:
ಈ ಪಾಪಿ ಪುತ್ರ, ತನ್ನ ತಂದೆ ನಾರಾಯಣಸ್ವಾಮಿಯ (70) ಕೊಲೆ ಮಾಡಿಸಲು 1 ಕೋಟಿ ರೂ. ಸುಪಾರಿ ನೀಡಿದ್ದ. ಆದರೆ ಅದರಲ್ಲಿ ವಿಚಿತ್ರ ವಿಚಾರ ಏನೆಂದರೆ ಕೇವಲ ಒಂದು ಲಕ್ಷ ಅಡ್ವಾನ್ಸ್ ಪಡೆದ ಹಂತಕರು ಅಪಾರ್ಟ್ಮೆಂಟ್ನ ಪಾರ್ಕಿಂಗ್ ಲಾಟ್ನಲ್ಲಿ ಕೊಲೆ ಮಾಡಿದ್ದರು. ಈ ಘಟನೆ ಫೆಬ್ರವರಿ 13 ರ ಬೆಳಗ್ಗೆ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದು 'ಈ ಘಟನೆ ಇಂದ್ರಪ್ರಸ್ಥ ಅಪಾರ್ಟ್ಮೆಂಟ್ನಲ್ಲಿ ನಡೆದಿದ್ದು ಆರೋಪಿಗಳು ಮೃತ ವ್ಯಕ್ತಿಯ ತಲೆಗೆ ಮಚ್ಚಿನಿಂದ ಹೊಡೆದಿದ್ದಾರೆ. ತನಿಖೆ ಮಾಡುವಾಗ ಮಗನ ಮೇಲೆಯೇ ಅನುಮಾನ ಬಂದಿತ್ತು.
ಇದನ್ನೂ ಓದಿ: ಕುಡುಕ ಮಗನ ಕೊಲೆಗೆ ಸುಪಾರಿ ಕೊಟ್ಟ ತಾಯಿ!
ಸುಪುತ್ರ ಮಣಿಕಂಠ 2013ರಲ್ಲಿ ತನ್ನ ಪತ್ನಿಯನ್ನ ಕೊಲೆ ಮಾಡಿದ್ದ. ಕಳೆದ ಐದು ತಿಂಗಳ ಹಿಂದೆ ಈತನ ವಿರುದ್ಧ ಮಾರತ್ ಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಈ ರೀತಿಯ ಟೆಕ್ನಿಕಲ್ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.
ಫೆ. 13 ರಿಂದ ಇಲ್ಲಿಯವರೆಗೂ ಪೊಲೀಸರು ಸಾಕ್ಷ್ಯಾಧಾರವನ್ನು ಕಲೆ ಹಾಕಿದ್ದಾರೆ. ಈ ಸಂದರ್ಭ ಆದರ್ಶ್ ಅನ್ನುವವನ ಮೇಲೆ ಡೌಟ್ ಬಂದಿದೆ. ಆದರ್ಶ್ ಮೂಲತಃ ಹೊಸಕೋಟೆಯವನು. ಆತನನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದ ಪೊಲೀಸರಿಗೆ ಆತನ ಮೇಲೂ ಬೆಂಗಳೂರು ಹೊರವಲಯದಲ್ಲಿ ಕೊಲೆ ಯತ್ನ ಕೇಸ್ ಇರುವ ಬಗ್ಗೆ ತಿಳಿಯುತ್ತದೆ. ಈತನ ವಿಚಾರಣೆ ವೇಳೆ ಮತ್ತೋರ್ವನ ಮಾಹಿತಿ ಸಿಗುತ್ತದೆ. ನಡವತ್ತಿ ಶಿವ ಎಂಬಾತನ ಮೇಲೆ 9 ಕೇಸ್ಗಳಿವೆ. ರಾಮಮೂರ್ತಿನಗರ, ಹನುಮಂತನಗರ ಸೇರಿ ಹಲವು ಠಾಣೆಯಲ್ಲಿ ಕೇಸ್ ಇದೆ. ಮಣಿಕಂಠನ ವಿಚಾರಣೆ ವೇಳೆ ಕೊಲೆ ಕೇಸ್ ಬಯಲಾಗಿದೆ.
ಈ ನಡವತ್ತಿ ಶಿವನೇ ಈ ಕೇಸ್ನ ಮುಖ್ಯ ಆರೋಪಿಯಾಗಿದ್ದಾನೆ. ಈತನಿಗಗೆ ಕೊಲೆ ಬಳಿಕ 15 ಲಕ್ಷ ಕೊಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಅಷ್ಟೇ ಅಲ್ಲದೇ 28 ಫ್ಲ್ಯಾಟ್ಗಳಲ್ಲಿ 1 ಫ್ಲ್ಯಾಟ್ ಕೊಟ್ಟು ಜತೆಗೆ ಒಂದು ಕಾರನ್ನೂ ಕೊಡುವುದಾಗಿ ಆರೋಪಿಗಳಿಗೆ ಮಗ ಹೇಳಿದ್ದ. ಮೃತ ನಾರಾಯಣಸ್ವಾಮಿಗೆ ನಾಲ್ಕು ಜನ ಹೆಣ್ಣು ಮಕ್ಕಳಿದ್ದು, ಮಣಿಕಂಠ ಕೊನೆಯ ಒಬ್ಬನೇ ಮಗ. ಈತ ಬಿಬಿಎಂ ವ್ಯಾಸಾಂಗ ಮುಗಿಸಿದ್ದ. ಮಗನ ನಡವಳಿಕೆ ಬಗ್ಗೆ ತಂದೆಗೆ ಅಸಮಾಧಾನ ಇತ್ತು. ಈ ಮಣಿಕಂಠ ಹಾಗೂ ಇತರ ಆರೋಪಿಗಳು, ಸುಮಾರು ಎರಡು ತಿಂಗಳಿನಿಂದ ಪ್ಲ್ಯಾನ್ ಮಾಡಿದ್ರು. ಮಣಿಕಂಠ, ತನ್ನ ತಂದೆಯ ಕೊಲೆಯನ್ನ ನೋಡಿಕೊಂಡು ಸುಮ್ಮನಿದ್ದ ಎನ್ನಲಾಗಿದೆ.