ನ್ಯೂಸ್

ಅಪರೂಪದ ಡೂಮ್ಸ್​ಡೇ ಮೀನು ಸಾವು! ಸಮುದ್ರ ದೇವರ ಸಂದೇಶ, ಜಗತ್ತಿಗೆ ಕಾದಿದೆ ಗಂಡಾಂತರ?

ಡೂಮ್ಸ್​ಡೇ ಮೀನು ಎಂದು ಕರೆಯಲ್ಪಡುವ ಅಪರೂಪದ ಓರ್ಫಿಶ್ ಕಳೇಬರ ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಆಗಸ್ಟ್ 10 ರಂದು ಪತ್ತೆಯಾಗಿದೆ. ಸ್ಯಾನ್ ಡಿಯಾಗೋದ ಲಾ ಜೊಲ್ಲಾ ಕೋವ್ ಬಳಿ ಕಳೇಬರ ತೇಲುತ್ತಿರುವುದನ್ನು ಸ್ಥಳೀಯರು ನೋಡಿದ ಈ ಘಟನೆ ಬೆಳಕಿಗೆ ಬಂದಿದೆ.

ಕ್ಯಾಲಿಫೋರ್ನಿಯಾದಲ್ಲಿ ಸುಮಾರು 125 ವರ್ಷಗಳಲ್ಲಿ ಕಂಡು ಬಂದ 20ನೇ ಡೂಮ್ಸ್​ಡೇ ಮೀನು ಇದಾಗಿದೆ. ಈ ಸತ್ತ ಮೀನನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ. ಏಕೆಂದರೆ, ಯಾವುದಾದರೂ ದುರಂತದ ಸಮಯದಲ್ಲಿ ಸಾಮಾನ್ಯವಾಗಿ ಈ ಡೂಮ್ಸ್​ಡೇ ಮೀನುಗಳು ಕಾಣಿಸಿಕೊಳ್ಳತ್ತವೆ ಎಂದು ಹೇಳಲಾಗುತ್ತದೆ.

ಜಪಾನಿಗರ ನಂಬಿಕೆಯ ಪ್ರಕಾರ, ಡೂಮ್ಸ್​ಡೇ ಮೀನು ಕಾಣಿಸಿಕೊಳ್ಳುವುದು ಸಮೀಪಿಸುತ್ತಿರುವ ವಿಪತ್ತಿನ ಮುನ್ಸೂಚನೆಯಾಗಿದೆ. ಈ ಮೀನನ್ನು "ಸಮುದ್ರ ದೇವರ ಅರಮನೆಯ ಸಂದೇಶವಾಹಕ" ಎಂದು ಕರೆಯಲಾಗುತ್ತದೆ. ಸುನಾಮಿ ಮತ್ತು ಭೂಕಂಪಗಳ ಬಗ್ಗೆ ಎಚ್ಚರಿಕೆ ನೀಡುವಾಗ ಈ ಮೀನುಗಳು ಕಾಣಿಸಿಕೊಳ್ಳುತ್ತದೆ ಎಂಬುದು ಜನರ ನಂಬಿಕೆಯಾಗಿದೆ.

ಈ ಅಸಾಮಾನ್ಯ ಜೀವಿ ಪತ್ತೆಯಾಗಿರುವುದನ್ನು ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸ್ಕ್ರಿಪ್ಸ್ ಇನ್‌ಸ್ಟಿಟ್ಯೂಷನ್ ಆಫ್ ಓಷಿಯಾನೋಗ್ರಫಿಯ ವಕ್ತಾರರಾದ ಲಾರೆನ್ ಫಿಂಬ್ರೆಸ್ ವುಡ್ ವರದಿ ಮಾಡಿದ್ದಾರೆ. ವಿಜ್ಞಾನಿಗಳು ಮತ್ತು ಜೀವರಕ್ಷಕರು ಓರ್ಫಿಶ್ ಅನ್ನು ಪರೀಕ್ಷೆಗಾಗಿ ನ್ಯಾಷನಲ್​ ಒಷಿಯಾನಿಕ್​ ಅಂಡ್​ ಅಟ್ಮಾಸ್ಫಿಯರಿಕ್​ ಅಡ್ಮಿನಿಸ್ಟ್ರೇಷನ್ (NOAA) ಗೆ ಕೊಂಡೊಯ್ದಿದ್ದಾರೆ.

ಡೂಮ್ಸ್​ಡೇ ಎಂದು ಕರೆಯಲ್ಪಡುವ ಈ ಓರ್ಫಿಶ್ ಸಾಮಾನ್ಯವಾಗಿ ಸಮುದ್ರದ ಕೆಳಭಾಗದಲ್ಲಿ ವಾಸಿಸುತ್ತದೆ. ಮೇಲ್ಮೈಯಿಂದ ಸುಮಾರು 700 ರಿಂದ 3,280 ಅಡಿ ಕೆಳಗೆ ಜೀವಿಸುತ್ತವೆ. ಆದ್ದರಿಂದ, ಮೇಲ್ಮೈನಲ್ಲಿ ಈ ಜೀವಿ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಈ ಮೀನುಗಳ ಆರೋಗ್ಯ ಸ್ಥಿತಿ ಹದಗೆಟ್ಟಾಗ ಅಥವಾ ಏನಾದರೂ ಆದಾಗ ಮಾತ್ರ ಹೊರಗಡೆ ಬರುತ್ತವೆ ಹೊರತು, ಇದು ಸನ್ನಿಹಿತವಾಗುತ್ತಿರುವ ವಿಪತ್ತಿನ ಸಂಕೇತವಲ್ಲ ಎಂದು ಸಂಶೋಧಕರು ಹೇಳಿದ್ದಾರೆ. (ಏಜೆನ್ಸೀಸ್​)