ನ್ಯೂಸ್

ಕೆಲವರಿಂದ ಸರ್ಕಾರ, ಸಿಎಂ ಗೌರವಕ್ಕೆ ಧಕ್ಕೆ


ಮೈಸೂರು:
ಸಚಿವ ಭೈರತಿ ಸುರೇಶ್, ಮುಡಾ ಅಧ್ಯಕ್ಷ ಕೆ. ಮರೀಗೌಡ, ರಾಕೇಶ್ ಪಾಪಣ್ಣನಂಥವರು ಸರ್ಕಾರದ ಗೌರವ ಹಾಳು ಮಾಡುತ್ತಿದ್ದಾರೆ. ಎರಡನೇ ಬಾರಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಇಂತಹವರೇ ಅವರ ಸುತ್ತ ಇದ್ದಾರೆ. ಇಂತಹವರಿಂದಲೇ ಸಿದ್ದರಾಮಯ್ಯರ ಹೆಸರು ಹಾಳಾಗುತ್ತಿದೆ ಎಂದು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ದೂರಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹೆಸರಲ್ಲಿ ಏನೆಲ್ಲಾ ಆಗುತ್ತಿದೆ ಎಂದು ಸಿದ್ದರಾಮಯ್ಯರಿಗೆ ಗೊತ್ತಿಲ್ಲ. ಇಂಟಲಿಜೆನ್ಸ್‌ನವರು ಧೈರ್ಯವಾಗಿ ಅವರಿಗೆ ಏನೂ ಹೇಳಲ್ಲ. ಸಿದ್ದರಾಮಯ್ಯ ಅವರ ಸುತ್ತ ಇರುವವರಿಂದಲೇ ಅವರ ಹೆಸರು ಹಾಳಾಗುತ್ತಿದೆ ಎಂದರು.
ಸಚಿವ ಭೈರತಿ ಸುರೇಶ್ ಅವರ ಲಾಯರ್ ಮೂಲಕ ನನಗೆ ನೋಟಿಸ್ ಬಂದಿದೆ. ‘ನೀವು ಪದೇ ಪದೆ ನನ್ನ ಬಗ್ಗೆ ಟೀಕೆ ಮಾಡ್ತಿದ್ದೀರ, ಮುಂದೆ ಟೀಕೆ ಮಾಡಬಾರದು. ಮತ್ತೆ ಟೀಕೆ ಮಾಡಿದರೆ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕುತ್ತೇನೆ’ ಎಂದು ನೋಟಿಸ್ ಕಳುಹಿಸಿದ್ದಾರೆ. ಅದಕ್ಕೆ ನಾನು ಮೊಕದ್ದಮೆ ಹಾಕಪ್ಪ ಅದೇನು ನೋಡಣ ಅನ್ಕೊಂಡಿದ್ದಿನಿ ಎಂದು ಜರಿದರು.
ಯಾರೂ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಭೈರತಿ ಸುರೇಶ್ ಒಬ್ಬ ರಿಯಲ್ ಎಸ್ಟೇಟ್ ಗಿರಾಕಿ. ಮಂತ್ರಿ ರೀತಿ ನಡೆದುಕೊಳ್ಳಬೇಕೆ ಹೊರತು, ರಿಯಲ್ ಎಸ್ಟೇಟ್ ಏಜೆಂಟ್ ರೀತಿ ನಡೆದುಕೊಳ್ಳಬೇಡ ಎಂದು ಹೇಳಿದ್ದೆ. ಅದು ಮಾನನಷ್ಟ ಮೊಕದ್ದಮೆನಾ? ಇದಕ್ಕೆಲ್ಲ ಯಾರು ಹೆದರುತ್ತಾರೆ. ನಾನು 50 ವರ್ಷದಿಂದ ರಾಜಕೀಯದಲ್ಲಿದ್ದೀನಿ. ಇವರೆಲ್ಲ ಈವಾಗ ಬಂದವರು ಎಂದು ಕಿಡಿಕಾರಿದರು.
ನಾನು ಭೈರತಿ ಸುರೇಶ್ ಬಳಿ ಮುಡಾ ನಿವೇಶನ ಕೇಳಲು ಹೋಗಿಲ್ಲ. ಸ್ನೇಹಿತರೊಬ್ಬರು ಅವರ ಬಳಿ ನಿವೇಶನ ತೆಗೆದುಕೊಳ್ಳುವವರಿದ್ದರು. ಹಾಗಾಗಿ ಅದರ ದರ ಕಡಿಮೆ ಆಗುತ್ತೆ ಅಂತಾ ನನ್ನನ್ನು ಕರೆದುಕೊಂಡು ಹೋಗಿದ್ದರು ಅಷ್ಟೆ. ಮುಂದೆ ಯಾವ ಮೊಕದ್ದಮೆ ಹಾಕುತ್ತಾರೆ ನೋಡೋಣ ಎಂದರು.
ಬಸನಗೌಡ ಪಾಟೀಲ್ ಯತ್ನಾಳ್ ಪಾದಯಾತ್ರೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಪಾದಯಾತ್ರೆ ಯಾವಾಗಲೂ ಇರುತ್ತೆ. ಯಾರು ಕರೆಯಲಿ ಬಿಡಲಿ ನಮ್ಮ ಪಾದಯಾತ್ರೆ ಇರುತ್ತೆ. ಮುಂದೆ ನೋಡೋಣ ಎಂದು ವ್ಯಂಗ್ಯವಾಡಿದರು.
ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಗೆದ್ದು ಬರಲಿ ಎಂಬ ಬಿಜೆಪಿ ಶಾಸಕ ಹರೀಶ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರೀಶ್ ಹೇಳಿಕೆಯಲ್ಲಿ ಏನೂ ತಪ್ಪಿಲ್ಲ. ಎಲ್ಲ ಅಡ್ಜೆಸ್ಟ್‌ಮೆಂಟ್ ಮಾಡಿಕೊಂಡು ಜನರನ್ನು ಫೂಲ್ ಮಾಡುತ್ತಿದ್ದಾರೆ. ಈಗಿನ ಸರ್ಕಾರ ಜನರಿಂದ ಆಯ್ಕೆಯಾಗಿ ಬಂದಿದೆ. ಸರ್ಕಾರ ವಿಸರ್ಜನೆ ಮಾಡಿ ಅನ್ನೋಕೆ ಒಂದು ರೀತಿ, ನೀತಿ ಬೇಕು. ಸರ್ಕಾರದ ತಪ್ಪು ಕಾನೂನು ಪ್ರಕಾರ ಪ್ರೂವ್ ಆಗಿರಬೇಕು. ಕುಮಾರಸ್ವಾಮಿ, ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದವರು. ಇಷ್ಟೆಲ್ಲಾ ಬೆಳವಣಿಗೆ ಆಗಿದ್ದರೂ ಯಾವ ಪಾರ್ಟಿಯನಾದರು ನ್ಯಾಯಾಲಯಕ್ಕೆ ಪಿಐಎಲ್ ಹಾಕಿದ್ದಾರಾ? ಇದೆಲ್ಲಾ ಏನ್ ಹೇಳುತ್ತದೆ ?ಅಡ್ಜಸ್ಟ್‌ಮೆಂಟ್ ಅನ್ನೋದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ನಾಳೆ ಪುಸ್ತಕ ಬಿಡುಗಡೆ
ನಾನು ‘ಪ್ರಾಚೀನ ಪಾರ್ಲಿಮೆಂಟ್‌ಗಳ ಪ್ರದಕ್ಷಿಣೆ’ ಎಂಬ ಪುಸ್ತಕವನ್ನು ಬರೆದಿದ್ದು, ಆ.17 ರಂದು ಬಿಡುಗಡೆ ಆಗಲಿದೆ. ಸಂಸದ ಯದುವೀರ್ ಒಡೆಯರ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಪುಸ್ತಕದಲ್ಲಿ ಹಿಂದಿನ ರಾಜಕೀಯ ಚಿತ್ರಣ ಇರಲಿದೆ ಎಂದು ವಿಶ್ವನಾಥ್ ತಿಳಿಸಿದರು.