ನ್ಯೂಸ್

ಹಿಂದಿಗಿಂತಲೂ ಭವ್ಯ, ಎತ್ತರ, ವಿಶಾಲ; ಹೇಗಿದೆ ಗೊತ್ತೆ ರಾಮ ಮಂದಿರದ ನೂತನ ವಿನ್ಯಾಸ..!

ನವದೆಹಲಿ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್​ 5ರಂದು ಭೂಮಿ ಪೂಜೆ ನಡೆಯಲಿದೆ. ಆದರೆ, ಹಳೆಯ ರಾಮಮಂದಿರ ವಿನ್ಯಾಸಕ್ಕೆ ಹೋಲಿಸಿದಲ್ಲಿ ಹಲವು ಮಾರ್ಪಾಡುಗಳನ್ನು ಮಾಡಲಾಗಿದೆ.

ವಿಶ್ವ ಹಿಂದು ಪರಿಷದ್​ ಅಧ್ಯಕ್ಷ ಅಶೋಕ್​ ಸಿಂಘಾಲ್​ 30 ವರ್ಷಗಳ ಹಿಂದೆ ರಾಮ ಮಂದಿರದ ವಿನ್ಯಾಸವನ್ನು ಖ್ಯಾತ ಶಿಲ್ಪಿ ಚಂದ್ರಕಾಂತ್​ ಸೋಂಪುರ ಅವರಿಂದ ಸಿದ್ಧಪಡಿಸಿದ್ದರು. ಈ ಮಂದಿರ ನಿರ್ಮಾಣಕ್ಕೆ ಕನಿಷ್ಠ ಮೂರುವರೆ ವರ್ಷ ಬೇಕಾಗಲಿದೆ ಎಂದು ಅಂದಾಜಿಸಲಾಗಿದೆ.

ರಾಮ ಮಂದಿರ ವಿನ್ಯಾಸದಲ್ಲಿ ಮಾಡಲಾಗಿರುವ ಬದಲಾವಣೆ ಬಗ್ಗೆ ಚಂದ್ರಕಾಂತ್​ ಸೋಂಪುರ ಪುತ್ರ ಆಶೀಷ್​ ಸೋಂಪುರ ಮಾಹಿತಿ ನೀಡಿದ್ದಾರೆ.

ಇಡೀ ದೇಗುಲವನ್ನು ನಾಗ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ನಮ್ಮ ತಂದೆ ರೂಪಿಸಿದ್ದನ್ನು ಕೊಂಚ ಮಟ್ಟಿಗೆ ನಾವು ವಿಸ್ತರಿಸಿದ್ದೇವೆ. ದೇಗುಲದ ಉದ್ದ ಹೆಚ್ಚಾಗಿದೆ. ಇಕ್ಕೆಲಗಳಲ್ಲಿ ಹೊಸದಾಗಿ ನೃತ್ಯ ಮಂಟಪ ರೂಪಿಸಲಾಗಿದೆ ಎಂದು ಹೇಳಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ದೇಗುಲದ ಗೋಪುರದ ಎತ್ತರವನ್ನು ಹೆಚ್ಚು ಮಾಡಲಾಗಿದೆ. ಹಿಂದಿನ ವಿನ್ಯಾಸದಲ್ಲಿ ಗೋಪುರದ ಎತ್ತರ 141 ಅಡಿ ಇತ್ತು. ಹೊಸ ವಿನ್ಯಾಸದಲ್ಲಿ 161 ಅಡಿಗೆ ಎತ್ತರಿಸಲಾಗಿದೆ.

ಸಮಯ ಕಳೆದಂತೆ ಹಾಗೂ ಜನಸಂಖ್ಯೆ ಹೆಚ್ಚಿದಂತೆ ಹೆಚ್ಚು ಭಕ್ತರು ಭೇಟಿ ನೀಡಲು ಅನುಕೂಲವಾಗುವಂತೆ ದೇಗುಲದ ವಿಸ್ತೀರ್ಣವನ್ನು ಹೆಚ್ಚಿಸಿದ್ದೇವೆ. ನೆಲ ಅಂತಸ್ತಿನಲ್ಲಿಯೇ ರಾಮಲಲ್ಲಾ ವಿಗ್ರಹ ಇರಲಿದೆ. ಎರಡನೇ ಅಂತಸ್ತಿನಲ್ಲಿ ರಾಮ ದರ್ಬಾರ್​ ಇರಲಿದೆ. ಮತ್ತೊಂದು ಅಂತಸ್ತನ್ನು ಸೇರಿಸಲಾಗುತ್ತಿದ್ದು, ಇದು ದೇಗುಲವನ್ನು ಇನ್ನಷ್ಟು ವಿಶಾಲಗೊಳಿಸಲಿದೆ ಎಮದು ಆಶೀಷ್​ ಮಾಹಿತಿ ನೀಡುತ್ತಾರೆ.

ದೇಗುಲದಲ್ಲಿ ಹೆಚ್ಚುವರಿಯಾಗಿ ಮೂರು ಮಂಟಪಗಳನ್ನು ರೂಪಿಸಲಾಗುತ್ತಿದೆ. ರಂಗ ಮಂಟಪ, ನೃತ್ಯ ಮಂಟಪ ಹಾಗೂ ಗೂಡ್​ ಮಂಟಪ ನಿರ್ಮಿಸಲಾಗುತ್ತಿದೆ. ಇದಾದ ನಂತರ ಗರ್ಭ ಗುಡಿ ಇರಲಿದೆ.