ನ್ಯೂಸ್

ಆಪ್ತರನ್ನು ಕಾಂಗ್ರೆಸ್‌ಗೆ ಕಳಿಸಿ ಬಿಜೆಪಿಯಿಂದ ಕಾಲು ಹೊರಗಿಟ್ಟ ಸೋಮಶೇಖರ್

ಬೆಂಗಳೂರು: ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಆಪ್ತರು ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಈ ಮೂಲಕ ಬಿಜೆಪಿಯ ಮೊದಲ ವಿಕೆಟ್ ಪತನ ನಿಚ್ಚಳವಾಗಿದೆ.

ಕೆಪಿಸಿಸಿ ಕಚೇರಿಯಲ್ಲಿ ಹತ್ತಾರು ಮುಖಂಡರು, ನೂರಾರು ಕಾರ್ಯಕರ್ತರನ್ನು ಪಕ್ಷದ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಬರಮಾಡಿಕೊಂಡರು. ಜತೆಗೆ ಕ್ಷೇತ್ರದ ಇನ್ನಷ್ಟು ಕಾರ್ಯಕರ್ತರನ್ನು ಕರೆತರುವಂತೆ ಗುರಿಯನ್ನೂ ನೀಡಿದರು.

ಪಕ್ಷ ಸೇರ್ಪಡೆಗೊಂಡವರಲ್ಲಿ ಬಹುತೇಕರು ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದವರೇ. ಸೋಮಶೇಖರ್ ಕಾರಣಕ್ಕೆ ಮೂರು ವರ್ಷದ ಹಿಂದೆ ಬಿಜೆಪಿಗೆ ಸೇರಿದ್ದರು. ಇವರಲ್ಲಿ ಮಾಜಿ ಕಾರ್ಪೊರೇಟರ್‌ಗಳು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಸೇರಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ಬಹುತೇಕರು ತವರಿಗೆ ಮರಳಿದ್ದು ಖುಷಿಯಾಗಿದೆ, ಕೆಲವೊಂದು ಕಾರಣಕ್ಕೆ ಸೋಮಶೇಖರ್ ಬಿಜೆಪಿಗೆ ಹೋದರು, ನಾವೂ ಬಿಜೆಪಿ ಸೇರಿದ್ದೆವು ಎಂದು ಅಭಿಪ್ರಾಯ ನೀಡಿದರು. ನೆಲಮಂಗಲ ಶಾಸಕ ಶ್ರೀನಿವಾಸ್ ಅವರ ನಾಯಕತ್ವ, ಆಹ್ವಾನದ ಮೇರೆಗೆ ಪಕ್ಷಕ್ಕೆ ಮರಳಿದ್ದಾಗಿ ಹೇಳಿದರು. ಒಬ್ಬರು ಮಾತ್ರ, ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿತ್ತು, ಮಾತನಾಡಲು ಮೈಕ್ ಕೊಡಲಿಲ್ಲ, ವೇದಿಕೆ ಹತ್ತಿಸಲಿಲ್ಲ ಎಂದು ಟೀಕಿಸಿದರು. ಜತೆಗೆ ಶಾಸಕ ಸೋಮಶೇಖರ್ ಕೂಡ ಶೀಘ್ರವಾಗಿ ಕಾಂಗ್ರೆಸ್ ಸೇರಲಿ, ಬಿಜೆಪಿಯಲ್ಲಿ ಅವರಿಗೆ ಇಲ್ಲಸಲ್ಲದ ಕಾಟ ಕೊಡುತ್ತಿದ್ದಾರೆ ಎಂದರು.

ಸಭೆಯಲ್ಲಿ ಮಾತನಾಡುತ್ತಿದ್ದ ಆನೆಕಲ್ ಶಾಸಕ ಶಿವಣ್ಣ ಅವರು, ಸೋಮಶೇಖರ್ ಹೆಸರು ಪ್ರಸ್ತಾಪಿಸಿದ್ದಾರೆ. ಈ ವೇಳೆ ಸೋಮಶೇಖರ್ ಹೆಸರು ಹೇಳದಂತೆ ನೆಲಮಂಗಲ ಶಾಸಕ ಶ್ರೀನಿವಾಸ್ ಅವರು ತಡೆದರು. ಕೂಡಲೇ ಮಾತು ಬದಲಾಯಿಸಿದ ಅವರು ಸೋಮಶೇಖರ್ ನಾಣು ಒಟ್ಟಿಗೆ ಸ್ಪರ್ಧಿಸಿದ್ದೆವು ಎಂದು ರಾಜಕೀಯ ಬೆಳವಣಿಗೆ ಬಗ್ಗೆ ಹೇಳಿದರು. 2004 ರಲ್ಲಿ ನಮಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಎರಡು ಬಾರಿ ಸೋತರೂ ಮತ್ತೆ ಟಿಕೆಟ್ ನೀಡಿತ್ತು. ಇದರರ್ಥ ಕಾಂಗ್ರೆಸ್ ನಮ್ಮ ಕೈಬಿಡಲ್ಲ. ಕೆಲವೊಂದು ಕಾರಣಗಳಿಂದ ಸೋಮಶೇಖರ್ ಬಿಜೆಪಿ ಹೋಗಿದ್ದಾರೆ ಎಂದರು.

ಕಾಂಗ್ರೆಸ್ ಸೇರಿದವರು: ಯಶವಂತಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಮುಖಂಡರಾದ ರಾಜಣ್ಣ, ಆರ್ಯ ಶ್ರೀನಿವಾಸ್, ಶಿವಮಾದಯ್ಯ, ಹನುಮಂತಯ್ಯ, ಚಿಕ್ಕರಾಜು, ಜೆಡಿಎಸ್ ಮುಖಂಡರಾದ ಉಮಾಶಂಕರ್, ರಘು, ಸತೀಶ್ ಮತ್ತಿತರರು ಈ ಪಟ್ಟಿಯಲ್ಲಿರುವ ಪ್ರಮುಖರು.

ಡಿಕೆಶಿ ಅಭಯ: ನೀವು ಕಾರ್ಯಕರ್ತರು, ಮತದಾರರ ಮನ ಗೆಲ್ಲುವತ್ತ ಗಮನ ಹರಿಸಿ. ನಾಯಕರ ವಿಚಾರವನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷರೂ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಭೆಯಲ್ಲಿ ಕರೆ ನೀಡಿದರು.

ಈ ದೇಶದ ಬಡ ಜನರಿಗೆ ಅನುಕೂಲವಾಗುವಂತಹ ನೀತಿಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್‌ಗಳ ರಾಷ್ಟ್ರೀಕರಣ, ಪಡಿತರ ವ್ಯವಸ್ಥೆ, ಪಂಚಾಯತ್ ರಾಜ್ ಸೇರಿದಂತೆ ನಾವೆಲ್ಲಾ ಯಾವುದರ ಫಲಾನುಭವಿಗಳಾಗಿ ಬೆಳೆದಿದ್ದೇವೊ ಅದೆಲ್ಲ ಕಾಂಗ್ರೆಸ್ ಪಕ್ಷದ ಕೊಡುಗೆ ಎಂದರು.

ಜನ ನೆನಪು ಮಾಡಿಕೊಳ್ಳುವಂತಹ ಒಂದೇ ಒಂದು ಕಾರ್ಯಕ್ರಮ ಕೊಟ್ಟಿಲ್ಲ ಬಿಜೆಪಿ. ಬರೀ ಬೆಲೆ ಏರಿಕೆ ಭಾಗ್ಯ ಕೊಟ್ಟಿದೆ. ಬಡವರ ಬಗ್ಗೆ ಚಿಂತೆ ಇಲ್ಲ, ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ಮೋದಿಯವರು ಗ್ಯಾಸ್ ಕೊಡುತ್ತೇನೆ ಎಂದು ಬಡ ಹೆಣ್ಣು ಮಕ್ಕಳ ಫೋಟೊ ಹಾಕಿದ್ದಷ್ಟೇ ಸಾಧನೆ. ಇದೇ ಕಾರಣಕ್ಕೆ ನಾವು ಜನರಿಂದ ಮಾಡುತ್ತಿರುವ ಲೂಟಿಯನ್ನು ತಡೆಯಲು ಗ್ಯಾರಂಟಿ ಯೋಜನೆಗಳನ್ನು ತಂದಿರುವುದು. ನೀವು ಇದನ್ನು ಮನೆ, ಮನಗಳಿಗೆ ತಲುಪಿಸಿ, ಪಕ್ಷದ ಸದಸ್ಯತ್ವ ಮಾಡಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಸಭೆ ಸದಸ್ಯ, ನಾಸಿರ್ ಹುಸೆನ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ನೆಲಮಂಗಲ ಶಾಸಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.