ನ್ಯೂಸ್

ಯಾವ ತರಬೇತಿಯನ್ನೂ ಪಡೆಯದ 'ಕ್ರೀಡಾಪಟು'ವಿಗೆ ಅವಕಾಶ ಕೊಟ್ಟು ಕೆಟ್ಟಿತು ಈ ದೇಶ!

ನವದೆಹಲಿ: ಚೀನಾದ ಚೆಂಗ್ಡುವಿನಲ್ಲಿ ನಡೆಯುತ್ತಿರುವ 31ನೇ ಬೇಸಿಗೆ ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಓಟದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕ್ಲಿಪ್‌ನಲ್ಲಿ ಸೊಮಾಲಿಯಾದ ನಸ್ರಾ ಅಬುಕರ್ ಅಲಿ ಇದ್ದು, ಅವರು ಓಟದ ಸ್ಪರ್ಧೆ ಪೂರ್ಣಗೊಳಿಸಲು 21 ಸೆಕೆಂಡುಗಳನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದು ಟೀಕೆಗಳ ಅಲೆಯನ್ನು ಹುಟ್ಟುಹಾಕಿದ್ದು, "ತರಬೇತಿ ಪಡೆಯದ" ಕ್ರೀಡಾಪಟುವನ್ನು ಅಂತರರಾಷ್ಟ್ರೀಯ ಕಾರ್ಯಕ್ರಮಕ್ಕೆ ಕಳುಹಿಸಿದ್ದಕ್ಕಾಗಿ ಬಳಕೆದಾರರು ಸೊಮಾಲಿಯಾದ ಯುವ ಮತ್ತು ಕ್ರೀಡಾ ಸಚಿವಾಲಯವನ್ನು ತೆಗಳಿದ್ದಾರೆ.

ಎಲ್ಹಾಮ್ ಗರಾದ್ ಎಂಬುವವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಇತರ ಮಹಿಳಾ ಕ್ರೀಡಾಪಟುಗಳು ಓಟಕ್ಕೆ ತಯಾರಿ ನಡೆಸುತ್ತಿರುವುದನ್ನು ಕಾಣಬಹುದು. ಆದರೆ ಅಲಿಗೆ ಮಾತ್ರ ಹೇಗೆ ನಿಲ್ಲಬೇಕು ಎನ್ನುವುದೂ ತಿಳಿದಿಲ್ಲ. ಅದಲ್ಲದೇ ಓರ್ವ ಕ್ರೀಡಾ ಪಟುವಾಗಿ ಆಕೆಗೆ ಡೊಳ್ಳು ಹೊಟ್ಟೆ ಕೂಡ ಇದೆ. ಬಜರ್ ರಿಂಗಣಿಸಿದ ತಕ್ಷಣ, ಅಥ್ಲೀಟ್‌ಗಳು ಮುಂದೆ ಓಡಿ ಸೊಮಾಲಿಯಾದ ಅಲಿಯನ್ನು ದಾಟಿ ಸುಮಾರು ದೂರ ಹೋಗುತ್ತಾರೆ. ಇತರ ಅಥ್ಲೀಟ್‌ಗಳು ಓಟವನ್ನು ತಕ್ಷಣವೇ ಮುಗಿಸಿದರೆ, ಅಲಿ ಮಾತ್ರ ಓಟದ ಟ್ರ್ಯಾಕ್‌ನಲ್ಲಿ ಜಿಗಿಯುತ್ತಾ ಬರುತ್ತಿರುವುದು ಕಂಡುಬಂದಿದೆ.

“ಯುವ ಮತ್ತು ಕ್ರೀಡಾ ಸಚಿವ ಕೆಳಗಿಳಿಯಬೇಕು. ಇಂತಹ ಅಸಮರ್ಥ ಸರಕಾರವನ್ನು ನೋಡುವುದೂ ಬೇಸರ ತರುತ್ತಿದೆ. ಓಟದ ಸ್ಪರ್ಧೆಯಲ್ಲಿ ಸೊಮಾಲಿಯಾವನ್ನು ಪ್ರತಿನಿಧಿಸಲು ಅವರು ತರಬೇತಿ ಪಡೆಯದ ಮಹಿಳೆಯನ್ನು ಹೇಗೆ ಆಯ್ಕೆ ಮಾಡಬಹುದು? ಇದು ನಿಜಕ್ಕೂ ಆಘಾತಕಾರಿಯಾಗಿದ್ದು ಅಂತಾರಾಷ್ಟ್ರೀಯವಾಗಿ ನಮ್ಮ ದೇಶ ಕಳಪೆಯಾಗಿ ಕಾಣಿಸಿಕೊಳ್ಳುತ್ತದೆ” ಎಂದು ಶೀರ್ಷಿಕೆಯನ್ನು ಬರೆದು ಎಲ್ಹಾಮ್ ಗರಾದ್​ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್​ಗೆ ನಾನಾ ರೀತಿಯ ಪ್ರತಿಕ್ರಿಯೆಗಳು ಬಂದಿದ್ದು ನೆಟ್ಟಿಗರು ಸಿಟ್ಟಾಗಿದ್ದಾರೆ. ಆಯ್ಕೆ ಪ್ರಕ್ರಿಯೆಗೆ ಕ್ರೀಡಾ ಸಚಿವಾಲಯವನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಕರೆ ನೀಡುತ್ತಿದ್ದು ಈ ವಿಷಯವನ್ನು ನಿಭಾಯಿಸುವಲ್ಲಿ ಕ್ರೀಡಾ ಸಚಿವಾಲಯ ವಿಫಲವಾಗಿದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, "ಸೊಮಾಲಿಯಾ ಮ್ಯಾರಥಾನ್​ ಓಟಗಾರರಿಗೆ ಪ್ರಸಿದ್ಧವಾಗಿದೆ. ಅಲ್ಲವೇ?" ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಎಲ್ಹಾಮ್ ಗರಾದ್, "ಇದು ನಡೆದದ್ದು ಭ್ರಷ್ಟಾಚಾರದ ಕಾರಣ. ಅಲ್ಲಿ ಓಡುತ್ತಿರುವ ಮಹಿಳೆ, ಅಥ್ಲೆಟಿಕ್ ಫೆಡರೇಶನ್​ನ ನಿರ್ದೇಶಕರ ಸೋದರ ಸೊಸೆ" ಎಂದು ಆರೋಪಿಸಿದ್ದಾರೆ. ಇನ್ನೂ ಕೆಲವರಂತೂ "ಆ ಮಹಿಳೆ ಇಡೀ ಜೀವಮಾನದಲ್ಲಿ ಒಮ್ಮೆಯೂ ಓಡಿರಲಿಕ್ಕಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಭ್ರಷ್ಟಾಚಾರ ಇಡೀ ದೇಶದ ಮಾನ ಹರಾಜು ಹಾಕುವ ಮಟ್ಟಿಗೆ ಇರಬಾರದು ಎನ್ನುವುದು ಇದಕ್ಕೇ ಏನೋ...