ಆಯನೂರು: ರಾಜ್ಯದ ಅನೇಕ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇದ್ದು, ರಾಜ್ಯ ಸರ್ಕಾರ ಮೊದಲು ಶಿಕ್ಷಕರ ಕೊರತೆ ಸಮಸ್ಯೆ ಪರಿಹರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಆಯನೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ಯುವ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಜನಸಾಮಾನ್ಯರು ಸೇರಿ ವಿದ್ಯಾರ್ಥಿಗಳು ಸಹ ಕನ್ನಡ ಭಾಷೆ ಬಗ್ಗೆ ಜಡತ್ವದ ಭಾವನೆ ಬೆಳೆಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕಸಾಪದಿಂದ ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಸಮ್ಮೇಳನ ಆಯೋಜಿಸುತ್ತಿದ್ದು, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಸಮ್ಮೇಳನ ನಡೆಯುತ್ತಿವೆ. ರಾಜ್ಯದಲ್ಲಿ ಎಲ್ಲ ವ್ಯವಹಾರಗಳಲ್ಲಿ ಕನ್ನಡ ಭಾಷೆ ಬಳಸಬೇಕು. ವಿದ್ಯಾರ್ಥಿಗಳು ಸ್ಪಷ್ಟವಾಗಿ ಕನ್ನಡ ಓದುವುದು, ಬರೆಯುವುದನ್ನು ಅಭ್ಯಾಸ ಮಾಡಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದರು.
ಶಿವಮೊಗ್ಗದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕ ಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿ ಹಾಗೂ ಕನಸು ಹೊಂದಬೇಕು. ಜತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಆಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಪಾಲಕರ ಕನಸನ್ನು ನನಸು ಮಾಡುವ ಜತೆಗೆ ಗುರುಹಿರಿಯರಿಗೆ ಗೌರವ ಕೊಡಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಟ್ಟರು. ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಡಾ. ಎ.ಗಣೇಶ್ ಭಟ್, ಸಿಡಿಸಿ ಸದಸ್ಯ ಅನಂತನಾಯಕ್ ಚುಂಚಪ್ಪ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ. ನಿಜಾಮುದ್ದೀನ್, ಐಕ್ಯುಎಸಿ ಸಂಚಾಲಕ ಡಾ. ರೋಹನ್ ಡಿಕಾಸ್ಟ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಜಿ.ಎನ್.ಕೀರ್ತಿನಾಥ್, ವಿದ್ಯಾರ್ಥಿಗಳ ಕ್ಷೇಮಾಧಿಕಾರಿ ಪ್ರೊ. ಬಿ.ಪಿ.ಮಹದೇವ್, ಯುವ ರೆಡ್‌ಕ್ರಾಸ್ ಸಂಚಾಲಕ ಡಾ. ಹಿರಿಯಪ್ಪ, ಶಿಲ್ಪಾ ಪಾಟೀಲ್ ಇತರರಿದ್ದರು.