ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಶರಣ ಸಂಗಮ-298ನೇ ದತ್ತಿ ಕಾರ್ಯಕ್ರಮದಲ್ಲಿ ಬೆಂಗಳೂರು ಐಕ್ಯಾಟ್ ಫೌಂಡೇಶನ್ ಅಧ್ಯಕ್ಷೆ ಡಾ. ಶಾಲಿನಿ ನಲ್ವಾಡ್ ಅವರನ್ನು ಸನ್ಮಾನಿಸಲಾಯಿತು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ, ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ, ಜಿ.ಬೆನಕಪ್ಪ, ಎಚ್.ಎಂ.ಚಂದ್ರಶೇಖರಪ್ಪ, ಎಚ್.ಸಿ.ಯೋಗೇಶ್, ಜಿ.ಎಚ್.ವೆಂಕಟೇಶ್ ಇದ್ದರು.  
ನ್ಯೂಸ್

ಆಧುನಿಕ ಭಾರತದ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರ

ಶಿವಮೊಗ್ಗ: ಆಧುನಿಕ ಭಾರತದ ಎಲ್ಲ ಸಮಸ್ಯೆಗಳಿಗೂ ಬಸವಾದಿ ಶರಣರ ತತ್ತ್ವಗಳು, ವಚನಗಳಲ್ಲಿ ಪರಿಹಾರ ಅಡಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಣ್ಣಿಸಿದರು.

ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಹುಣಸಘಟ್ಟ ಎಚ್.ಎಂ.ಮಲ್ಲಿಕಾರ್ಜುನಪ್ಪ, ಲಿಂಗಮ್ಮ ಮಲ್ಲಿಕಾರ್ಜುನಪ್ಪ ಮತ್ತು ಶಾರದಾ ಎಚ್.ಎಂ.ಚಂದ್ರಶೇಖರಪ್ಪ ಅವರ ಕುಟುಂಬದಿಂದ ಶರಣ ಸಂಗಮ-298ನೇ ದತ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು.

ಜಗತ್ತಿನ ಸಮಸ್ಯೆಗಳು ನಿವಾರಣೆ ಆಗಬೇಕಾದರೆ ಅದಕ್ಕೆ ಬಸವಾದಿ ಶರಣರ ವಚನಗಳೇ ಮದ್ದು. ಮಹಿಳೆಯರಿಗೆ ಧಾರ್ಮಿಕವಾಗಿ ಸಮಾನತೆ ಕೊಟ್ಟ ಒಂದೇ ಕಾಲವಿದ್ದರೆ ಅದು 12ನೇ ಶತಮಾನವಾಗಿದ್ದು ಬಸವಾದಿ ಶರಣರ ತತ್ವಗಳು, ವಚನಗಳು ಮನುಷ್ಯನ ಬದುಕಿಗೆ ಸದಾ ಹಸನಾಗಿಸಿವೆ. ಬಸವಾದಿ ಶರಣರ ತತ್ವಗಳು ನಮ್ಮೆಲ್ಲರಿಗೂ ನಡೆ, ನುಡಿಯನ್ನು ಕಲಿಸಿವೆ ಎಂದರು.

ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಬಗ್ಗೆ ಅಪಾರ ಗೌರವವಿದೆ. ಅದರಂತೆ ನಾವೆಲ್ಲರೂ ನಡೆಯುತ್ತಿದ್ದೇವೆ. ಆದರೂ ಮಾನವೀಯ ಸಂವಿಧಾನವನ್ನು ಜಗತ್ತಿಗೆ ಕೊಟ್ಟಿದ್ದು ಬಸವಣ್ಣ. 12ನೇ ಶತಮಾನದಲ್ಲೇ ಬಸವಣ್ಣ ಅವರು ಅನುಭವ ಮಂಪಟದ ಮೂಲಕ ಸಂವಿಧಾನದಲ್ಲಿ ಅಡಕವಾಗಿರುವ ವಿಚಾರಧಾರೆಗಳನ್ನು ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಕೇಂದ್ರದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಪ್ರಸ್ತಾವಿಕ ಮಾತನಾಡಿದರು.

ಬೆಂಗಳೂರು ಐಕ್ಯಾಟ್ ಫೌಂಡೇಶನ್ ಅಧ್ಯಕ್ಷೆ ಡಾ. ಶಾಲಿನಿ ನಲ್ವಾಡ್ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತರ ಜಿ.ಎಚ್.ವೆಂಕಟೇಶ್ ಅವರನ್ನು ಅಭಿನಂದಿಸಲಾಯಿತು. ಶಿರಾಳಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್‌ಮ ಸಂಗೀತ ಶಿಕ್ಷಕ ಎಂ.ಜಿ.ಮಲ್ಲಿಕಾರ್ಜುನ ಅವರಿಂದ ವಚನ ಗಾಯನ ನಡೆಯಿತು. ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಉಪಸ್ಥಿತರಿದ್ದರು.