ಬೂದಿಕೋಟೆ : ರೈತರ ಹಲವು ವರ್ಷದ ಬೇಡಿಕೆಯನ್ನು ಮನ್ನಿಸಿದ ಅರಣ್ಯ ಇಲಾಖೆ ಅರಣ್ಯ ಪ್ರದೇಶದ ಸುತ್ತ ಸೋಲಾರ್ ಪೆನ್ಸಿಂಗ್ ಅಳವಡಿಕೆ ಮಾಡುವ ಮೂಲಕ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಮುಂದಾಗಿರುವುದು ರೈತರಲ್ಲಿ ಸ್ವಲ್ಪಮಟ್ಟಿಗೆ ನೆಮ್ಮದಿ ಮೂಡಿಸಿದೆ.
ಹತ್ತಾರು ವರ್ಷಗಳಿಂದ ತಮಿಳುನಾಡಿನ ಅರಣ್ಯ ಪ್ರದೇಶದಿಂದ ಆಹಾರ ಅರಸಿ ಬರುವ ಕಾಡಾನೆಗಳ ಹಿಂಡು ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹಾಗೂ ಕಾಮಸಮುದ್ರ ಹೋಬಳಿಯ ಗಡಿ ಗ್ರಾಮಗಳಿಗೆ ಲಗ್ಗೆ ಇಡುತ್ತವೆ. ತಿಂಗಳಾನುಗಟ್ಟಲೆ ಮೊಕ್ಕಾಂ ಹೂಡಿ ಬೆಳೆಗಳನ್ನು ನಾಶಗೊಳಿಸುತ್ತಿದ್ದವು. ಬೆಳೆಗಳನ್ನು ರಕ್ಷಿಸಿಕೊಳ್ಳುವ ಆತುರದಲ್ಲಿ ಆನೆಗಳನ್ನು ಹಿಮ್ಮೆಟ್ಟಿಸಲು ಹೋಗಿ ಸುಮಾರು 20 ರೈತರು ಪ್ರಾಣ ಕಳೆದುಕೊಂಡಿದ್ದಾರೆ.
ಆನೆಗಳನ್ನು ಶಾಶ್ವತವಾಗಿ ನಿಯಂತ್ರಿಸಲು ತಾಲೂಕಿನ ರೈತರು ಸರ್ಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ಆದರೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ. ಅಧಿಕಾರಿಗಳು ಆನೆ ನಿಯಂತ್ರಿಸಲು 79 ಕೋಟಿ ರೂ. ವೆಚ್ಚದಲ್ಲಿ 60 ಕಿಮೀ ವ್ಯಾಪ್ತಿಯ ಆನೆ ಕಾರಿಡಾರ್ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಹೇಳಿದ್ದರೂ ಕಾರ್ಯರೂಪಕ್ಕೆ ಬರಲೇ ಇಲ್ಲ.
ಕಾಡಾನೆ ಸಂಘರ್ಷದಿಂದ ಸಾವು-ನೋವು ಸಂಭವಿಸಿದಾಗ ಮಾತ್ರ ಜನಪ್ರತಿನಿಧಿಗಳು ಸ್ಥಳಕ್ಕೆ ಬಂದು ರೈತರ ಕಣ್ಣೊರೆಸುವ ಕೆಲಸ ಮಾಡಿದ್ದು ಬಿಟ್ಟರೆ ರೈತರಿಗೆ ಬೆಳೆ ನಷ್ಟಕ್ಕೆ ಪರಿಹಾರ ಹಾಗೂ ಆನೆಗಳಿಂದ ಶಾಶ್ವತ ಮುಕ್ತಿ ದೊರಕಿಸಲಿಲ್ಲ. ಇದರಿಂದ ಪ್ರತಿಬಾರಿ ಬೆಳೆ ರಕ್ಷಣೆಗೆ ರೈತರು ಹರಸಾಹಸ ಮಾಡುವಂತಾಗಿತ್ತು.
5.5 ಕಿಮೀ ದೂರದ ಸೋಲಾರ್ ಪೆನ್ಸಿಂಗ್: ಇತ್ತೀಚೆಗೆ ತಾಲೂಕಿನ ರೈತರು ಆನೆ ನಿಯಂತ್ರಣಕ್ಕೆ ಒತ್ತಾಯಿಸಿ ಕೋಲಾರದ ಡಿಸಿ ಕಚೇರಿವರೆಗೂ ಪಾದಯಾತ್ರೆ ಕೈಗೊಂಡು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದರು. ಆದರೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಕಾಮಸಮುದ್ರ ಹೋಬಳಿಯ ಹಲವು ರೈತರ ಜಮೀನಿಗೆೆ ಭೇಟಿ ನೀಡಿ ಕಾಡಾನೆಗಳ ನಿಯಂತ್ರಣಕ್ಕೆ ನೀಡಿದ್ದ ಭರವಸೆಯಂತೆ ಬುಧವಾರ ಮೊದಲ ಹಂತದಲ್ಲಿ ದೋಣಿಮಡಗು ಪಂಚಾಯಿತಿ ವ್ಯಾಪ್ತಿಯ ಕಾಳಮ್ಮನ ಗುಡಿ ಅರಣ್ಯ ಪ್ರದೇಶದೊಳಗೆ 25 ಲಕ್ಷ ರೂ. ವೆಚ್ಚದಲ್ಲಿ 5.5 ಕಿಮೀ ಉದ್ದದ ಸೋಲಾರ್ ಪೆನ್ಸಿಂಗ್ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಮಲ್ಲಪ್ಪ ಬೆಟ್ಟ ಹಾಗೂ ಮೂತನೂರು ಅರಣ್ಯ ವ್ಯಾಪ್ತಿಯಲ್ಲಿ ಅಳವಡಿಸಲಾಗುತ್ತದೆ.
ಶಾಕ್‌ನಿಂದ ಆನೆ ಓಡಿ ಹೋಗುತ್ತೆ: ಕರ್ನಾಟಕದ ವಿರಾಜಪೇಟೆ ಸೇರಿ ಹಲವು ಭಾಗಗಳಲ್ಲಿ ಕಡಿಮೆ ವೆಚ್ಚದ ಸೋಲಾರ್ ಪೆೆನ್ಸಿಂಗ್ ಯೋಜನೆ ಯಶಸ್ವಿಯಾಗಿದ್ದು, ಇಲ್ಲಿ 14 ಅಡಿ ಎತ್ತರದ ಡಬಲ್ ಸ್ಟ್ಯಾಂಡ್‌ನಲ್ಲಿ ಎರಡು ಅಡಿ ಅಂತರದಲ್ಲಿ ಸೋಲಾರ್ ತಂತಿ ಎಳೆಯಲಾಗಿದೆ. ಆನೆ ಸೊಂಡಿಲನ್ನು ಎತ್ತಿ ಗ್ರಾಮಗಳ ಕಡೆ ನುಸುಳಲು ಯತ್ನಿಸಿದರೆ ಸೋಲಾರ್ ವಿದ್ಯುತ್ ತಂತಿಗಳಿಂದ ಶಾಕ್ ಹೊಡೆದು ಭಯದಿಂದ ಅರಣ್ಯಕ್ಕೆ ವಾಪಸ್ ಹೋಗಲಿದೆ. ಆದರೆ ಇದರಿಂದ ಆನೆಗಳಿಗೂ ಹಾನಿ ಸಂಭವಿಸುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜನರಿಗೆ ಮನವಿ: ಸೋಲಾರ್ ಬೇಲಿಗೆ ಬ್ಯಾಟರಿ ಕನೆಕ್ಷನ್ ಕೊಡಲಾಗಿರುವ ಕಾರಣ ಸಂಜೆಯ ನಂತರ ಸಾರ್ವಜನಿಕರು ಹಾಗೂ ರೈತರು ಕಾಡಿನ ಒಳಗಡೆ ಹೋಗಬಾರದು ಮತ್ತು ದನ ಕರು ಹಾಗೂ ಕುರಿಗಳನ್ನು ಕಾಡಿನೊಳಗೆ ಇರಲು ಬಿಡಬಾರದು ಎಂದು ಅರಣ್ಯ ಇಲಾಖೆಯಿಂದ ಮನವಿ ಮಾಡಲಾಗಿದೆ.
ರೈತರ ಬೇಡಿಕೆಯಂತೆ ಕಾಡಾನೆಗಳ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ ಕಾಳಮ್ಮನ ಗುಡಿ ಅರಣ್ಯ ಪ್ರದೇಶದೊಳಗೆ 5.5 ಕಿಮೀ ಉದ್ದದ ಸೋಲಾರ್ ಪೆನ್ಸಿಂಗ್ ಅಳವಡಿಸಲಾಗಿದೆ. ಮುಂದಿನ ಹಂತದಲ್ಲಿ ಆಂಧ್ರ ಮತ್ತು ತಮಿಳುನಾಡು ಅರಣ್ಯ ಪ್ರದೇಶದಿಂದ ಆನೆಗಳು ಬರದಂತೆ ಮಲ್ಲಪ್ಪ ಬೆಟ್ಟ ಹಾಗೂ ಮೂತನೂರು ಅರಣ್ಯ ವ್ಯಾಪ್ತಿಯಲ್ಲಿ ಪೆನ್ಸಿಂಗ್ ಅಳವಡಿಕೆ ಮಾಡಲಾಗುವುದು. ಕೆ.ಎನ್.ರವಿಕೀರ್ತಿ, ವಲಯ ಅರಣ್ಯಾಧಿಕಾರಿ, ಬಂಗಾರಪೇಟೆ