ನವದೆಹಲಿ: ಸೂರ್ಯನಲ್ಲಿ ಉಂಟಾಗಿರುವ ಭಾರಿ ಸ್ಪೋಟಗಳಿಂದಾಗಿ ಪ್ರಬಲ ಸೌರ ಮಾರುತಗಳು ಭೂಮಿಯತ್ತ ಧಾವಿಸುತ್ತಿದ್ದು, ಮುಂಬರುವ ಕೆಲ ದಿನಗಳಲ್ಲಿ ತೀವ್ರ ಸ್ವರೂಪದ ‘ರೇಡಿಯೋ ಬ್ಲಾ್ಯಕ್ಔಟ್’ ಉಂಟಾಗುವ ಸಾಧ್ಯತೆ ಇದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಚ್ಚರಿಕೆ ನೀಡಿದೆ. ಭೂಮಿಯ ಮೇಲೆ ಇದರಿಂದಾಗುವ ಪರಿಣಾಮಗಳೇನು ಎನ್ನುವುದರ ಬಗ್ಗೆ ವಿವರ ಇಲ್ಲಿದೆ.
ಸೂರ್ಯನಲ್ಲಿ ತೀವ್ರ ಹಾಗೂ ಸಾಧಾರಣ ಸ್ವರೂಪದ ಸ್ಪೋಟಗಳು ಹಾಗೂ ಕಂಪನಗಳು ಕಾಲಕಾಲಕ್ಕೆ ಸಂಭವಿಸುತ್ತ ಇರುತ್ತವೆ. ಇವು ಭೂಮಿಯ ಮೇಲೆ ಹಲವು ರೀತಿಯ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ. ಈಗ ಮತ್ತೆ ಅಂತಹ ಸ್ಥಿತಿ ಉದ್ಭವಿಸಿದ್ದು, ಸೂರ್ಯನಲ್ಲಿ ಉಂಟಾಗಿರುವ ಭಾರಿ ಸ್ಪೋಟಗಳ ಪರಿಣಾಮ ಪ್ರಬಲವಾದ ಸರಣಿ ಸೌರ ಜ್ವಾಲೆಗಳು ಭೂಮಿಯತ್ತ ಬರುತ್ತಿವೆ. ಇವು ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಸೌರ ಚಟುವಟಿಕೆ ಹೆಚ್ಚಾಗಿರುವುದರಿಂದ ಬಾಹ್ಯಾಕಾಶದಲ್ಲಿರುವ ಭಾರತದ 50ಕ್ಕೂ ಹೆಚ್ಚು ಉಪಗ್ರಹಗಳಿಗೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಸೌರ ಜ್ವಾಲೆಗಳು ಟಿ.ವಿ. ಸಿಗ್ನಲ್ಸ್, ರೇಡಿಯೋ ತರಂಗಗಳು, ರಾಡಾರ್, ಜಿಪಿಎಸ್ ಮತ್ತು ವಿದ್ಯುತ್ ಗ್ರಿಡ್ಗಳ ಮೇಲೂ ಪರಿಣಾಮ ಬೀರಬಲ್ಲವು. ಈ ಹಿನ್ನೆಲೆಯಲ್ಲಿ ಇಸ್ರೋ ತನ್ನ ಎಲ್ಲ ಉಪಗ್ರಹಗಳ ಮೇಲೆ ತೀವ್ರ ನಿಗಾ ಇರಿಸಿದೆ ಎಂದು ಇಸ್ಟ್ರಾಕ್ (ಐಎಸ್ಟಿಆರ್ಎಸಿ) ನಿರ್ದೇಶಕ ಅನಿಲ್ ಕುಮಾರ್ ತಿಳಿಸಿದ್ದಾರೆ.
ಸೌರ ಚಟುವಟಿಕೆಗಳು ಸೂರ್ಯನ ಹೊರಗಿನ ವಾತಾವರಣದಲ್ಲಿ ಸಂಭವಿಸುವ ನೈಸರ್ಗಿಕ ವಿದ್ಯಮಾನಗಳಾಗಿವೆ. ಸೌರ ಚಟುವಟಿಕೆಗಳ ಅಧ್ಯಯನ ಇತ್ತೀಚಿನ ವರ್ಷಗಳಲ್ಲಿ ಬಹಳ ಪ್ರಾಮುಖ್ಯ ಪಡೆದುಕೊಂಡಿದೆ. ಏಕೆಂದರೆ ಇದು ಭೂಮಿಯ ಪರಿಸರ ಮತ್ತು ಅದರ ಹವಾಮಾನದೊಂದಿಗೆ ಸಂಬಂಧಿಸಿದೆ. ಭೂಮಿಯ ಕಾಂತೀಯ ಕ್ಷೇತ್ರವು ಈ ಕೆಲವು ಸೌರ ಚಟುವಟಿಕೆಗಳಿಂದ ಪ್ರಭಾವಿತವಾಗಿರುತ್ತದೆ. ಇದಲ್ಲದೆ, ಸೌರ ಜ್ವಾಲೆಗಳು ಹೆಚ್ಚಿನ ಶಕ್ತಿಯ ಕಣಗಳು ಮತ್ತು ವಿಕಿರಣವನ್ನು ಉತ್ಪಾದಿಸುತ್ತವೆ. ಇದು ಜೀವಿಗಳಿಗೆ ತುಂಬ ಅಪಾಯಕಾರಿ.
ಸೂರ್ಯನ ಮೇಲಿರುವ ಕಾಂತೀಯ ಸಂಕೀರ್ಣ ಸನ್ಸ್ಪಾಟ್ ಈ ಬಿರುಗಾಳಿಗೆ ಕಾರಣವಾಗಿದೆ. ಇದು ಕಳೆದ ಕೆಲವು ದಿನಗಳಲ್ಲಿ ನಾಲ್ಕು ಪ್ರಬಲ ಸೌರ ಜ್ವಾಲೆಗಳನ್ನು ಹೊರಹಾಕಿದ್ದು, ಅದರಲ್ಲಿರುವ ಜ್ವಾಲೆಯು 2026ರಲ್ಲೇ ಅತ್ಯಂತ ಶಕ್ತಿಯುತವಾದುದು ಎಂದು ಗುರುತಿಸಲಾಗಿದೆ. ಇದು 1996ರ ನಂತರ ದಾಖಲಾದ ಟಾಪ್ 20 ಪ್ರಬಲ ಜ್ವಾಲೆಗಳಲ್ಲಿ ಒಂದಾಗಿದೆ ಎಂದು ನಾಸಾ ದೃಢಪಡಿಸಿದೆ. ಸೂರ್ಯನು ಪ್ರತಿ 11 ವರ್ಷಕ್ಕೊಮ್ಮೆ ಈ ರೀತಿಯ ತೀವ್ರ ಪ್ರಕೋಪ ಹಂತವನ್ನು ತಲುಪುತ್ತಾನೆ. ಇದನ್ನು ‘ಸೋಲಾರ್ ಮ್ಯಾಕ್ಸಿಮಾ’ ಎಂದು ಕರೆಯಲಾಗುತ್ತದೆ. 1859ರಲ್ಲಿ ‘ಕ್ಯಾರಿಂಗ್ಟನ್ ಇವೆಂಟ್’ ಎಂಬ ಬಲವಾದ ಸೌರ ಜ್ವಾಲೆಯು ಆಗಿನ ಕಾಲದ ಟೆಲಿಗ್ರಾಫ್ ವ್ಯವಸ್ಥೆಯನ್ನೇ ಬುಡಮೇಲು ಮಾಡಿತ್ತು. ಇಂದಿನ ದಿನಗಳಲ್ಲಿ ಅಂತಹ ಘಟನೆ ಸಂಭವಿಸಿದರೆ ನಮ್ಮ ಇಂಟರ್ನೆಟ್ ಮತ್ತು ಸ್ಮಾರ್ಟ್ಫೋನ್ ಜಗತ್ತಿಗೆ ದೊಡ್ಡ ಸವಾಲಾಗಬಹುದು.
ಈ ಸೌರ ಜ್ವಾಲೆಗಳು ಮನುಷ್ಯರಿಗೆ ನೇರವಾಗಿ ಹಾನಿ ಮಾಡದಿದ್ದರೂ, ಭೂಮಿಯ ವಾತಾವರಣದ ಮೇಲ್ಪದರವಾದ ‘ಅಯನೋಸ್ಪಿಯರ್’ ಅನ್ನು ಅಸ್ತವ್ಯಸ್ತಗೊಳಿಸುತ್ತವೆ. ಇದರಿಂದ ಉನ್ನತ ಮಟ್ಟದ ರೇಡಿಯೋ ಸಂವಹನ ಕಡಿತಗೊಳ್ಳಬಹುದು, ಜಿಪಿಎಸ್ನಂತಹ ನ್ಯಾವಿಗೇಷನ್ ಸಿಗ್ನಲ್ಗಳಲ್ಲಿ ವ್ಯತ್ಯಯವಾಗಬಹುದು, ಧ್ರುವ ಪ್ರದೇಶಗಳಲ್ಲಿ ಹಾರಾಟ ನಡೆಸುವ ವಿಮಾನಗಳಿಗೆ ವಿಕಿರಣದ ಅಪಾಯವಿರುತ್ತದೆ. ಹಾಗಾಗಿ, ಇಂಥ ಸಂದರ್ಭ ಗಳಲ್ಲಿ ಕೆಲ ವಿಮಾನಗಳ ಸಂಚಾರ ರದ್ದಾಗುವ ಸಾಧ್ಯತೆಯೂ ಇರುತ್ತದೆ.
ವಿದ್ಯುತ್ ಜಾಲ: ಬಲವಾದ ಸೌರ ಜ್ವಾಲೆಗಳಿದ್ದರೆ, ಭಾರತದಂತಹ ರಾಷ್ಟ್ರೀಯ ವಿದ್ಯುತ್ ಜಾಲಗಳಲ್ಲಿ ಹೆಚ್ಚಿನ ವೋಲ್ಟೇಜ್ ಉಂಟಾಗಿ ಟ್ರಾನ್ಸ್ ಫಾರ್ಮರ್ಗಳು ಹಾನಿಗೊಳಗಾಗಬಹುದು ಅಥವಾ ಬ್ಲ್ಯಾಕ್ಔಟ್ ಸಂಭವಿಸಬಹುದು.
ಉಪಗ್ರಹ ಸೇವೆಗಳು: ಡಿಟಿಎಚ್ ಪ್ರಸಾರ ಮತ್ತು ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಗಳಲ್ಲಿ ಅಡಚಣೆ ಉಂಟಾಗಬಹುದು.
ಭಾರತದ ಮೊದಲ ಸೌರ ವೀಕ್ಷಣಾಲಯ ‘ಆದಿತ್ಯ-ಎಲ್1’ ಪ್ರಸ್ತುತ ಈ ಸೌರ ಜ್ವಾಲೆಗಳ ಮೇಲೆ ನಿಗಾವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ, ‘ಲಗ್ರಾಂಜಿಯನ್ ಪಾಯಿಂಟ್-1’ನಲ್ಲಿ ನೆಲೆಸಿದೆ. ಸೌರ ಸ್ಪೋಟದ ಪರಿಣಾಮಗಳು ಭೂಮಿಯನ್ನು ತಲುಪುವ ಮೊದಲೇ ನಮಗೆ ಆದಿತ್ಯ-ಎಲ್1 ಎಚ್ಚರಿಕೆ ನೀಡುತ್ತದೆ. ಸೂರ್ಯನಿಂದ ಹೊರಬರುವ ಕರೋನಲ್ ಮಾಸ್ ಎಜೆಕ್ಷನ್ (ಇMಉ) ಮತ್ತು ಸೌರ ಜ್ವಾಲೆಗಳನ್ನು ಭೂಮಿಗೆ ತಲುಪುವ ಮೊದಲೇ ಆದಿತ್ಯ ಎಲ್-1 ಪತ್ತೆಹಚ್ಚುತ್ತದೆ. ಈ ಮಾಹಿತಿಯು ಉಪಗ್ರಹ ನಿರ್ವಾಹಕರಿಗೆ ಮತ್ತು ವಿದ್ಯುತ್ ಗ್ರಿಡ್ ಕೇಂದ್ರಗಳಿಗೆ ಮುನ್ನೆಚ್ಚರಿಕೆ ವಹಿಸಲು ಸುಮಾರು 24ರಿಂದ 48 ಗಂಟೆಗಳ ಕಾಲಾವಕಾಶ ನೀಡುತ್ತದೆ.
ಸೌರ ವಿದ್ಯಮಾನಗಳನ್ನು ಭೂಮಿಯಿಂದಲೇ ನಿಖರವಾಗಿ ವೀಕ್ಷಿಸಲು ಲಡಾಖ್ನ ಪಾಂಗಾಂಗ್ ಸರೋವರದ ದಡದಲ್ಲಿ 1,000 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಸೌರ ದೂರದರ್ಶಕವನ್ನು ನಿರ್ವಿುಸಲು ಭಾರತ ನಿರ್ಧರಿಸಿದೆ. ಇದು ಮುಂದಿನ 5 ವರ್ಷಗಳಲ್ಲಿ ಸಿದ್ಧವಾಗಲಿದ್ದು, ಸೂರ್ಯನ ಕಾಂತೀಯ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ. ಸದ್ಯಕ್ಕೆ ಯಾವುದೇ ಭೀಕರ ಹಾನಿಯ ಮುನ್ಸೂಚನೆ ಇಲ್ಲದಿದ್ದರೂ, ಸೂರ್ಯನ ಈ ಕಿರಣಗಳು ಭೂಮಿಯ ಕಡೆಗೆ ಮುಖ ಮಾಡಿರುವುದರಿಂದ ವಿಜ್ಞಾನಿಗಳು ಮುಂದಿನ ಕೆಲವು ದಿನಗಳ ಕಾಲ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಸೂರ್ಯನ ಮೇಲ್ಮೈನಲ್ಲಿ ಸಂಭವಿಸುವ ಸ್ಪೋಟಗಳನ್ನು ‘ಸೌರ ಜ್ವಾಲೆಗಳು’ ಎನ್ನಲಾಗುತ್ತದೆ. ಈ ಜ್ವಾಲೆಗಳು ಕ್ಷ-ಕಿರಣ ಮತ್ತು ನೇರಳಾತೀತ ವಿಕಿರಣಗಳನ್ನು ಹೊರಸೂಸುತ್ತವೆ. ಈ ಕಿರಣಗಳು ಭೂಮಿಯ ವಾತಾವರಣದ ಮೇಲ್ಪದರವನ್ನು ತಲುಪಿದಾಗ, ಅಲ್ಲಿನ ಅನಿಲಗಳನ್ನು ಪ್ರಭಾವಿಸುತ್ತದೆ. ಇದರಿಂದಾಗಿ ರೇಡಿಯೋ ತರಂಗಗಳು ಚದುರಿಹೋಗುತ್ತವೆ.
ಸೌರ ಜ್ವಾಲೆಗಳಿಂದ ಉಂಟಾಗುವ ತೀವ್ರ ರೇಡಿಯೋ ಬ್ಲಾ್ಯಕ್ಔಟ್ಗಳ ಬಗ್ಗೆ ಇಸ್ರೋ ಎಚ್ಚರಿಕೆ ನೀಡಿದ್ದು, 50ಕ್ಕೂ ಹೆಚ್ಚು ಭಾರತೀಯ ಉಪಗ್ರಹಗಳ ಮೇಲೆ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ.
ಸೌರ ಜ್ವಾಲೆಗಳ ವಿಕಿರಣಗಳು ರೇಡಾರ್ ಸಿಸ್ಟಮ್ಳು, ಪವರ್ ಗ್ರಿಡ್ಗಳು, ಟಿವಿ ಸಿಗ್ನಲ್ಗಳು ಮತ್ತು ಸ್ಯಾಟಲೈಟ್ ಆಧಾರಿತ ನ್ಯಾವಿಗೇಷನ್ಗಳಲ್ಲಿ ಅಡಚಣೆ ಉಂಟುಮಾಡಬಹುದು.
ರೇಡಿಯೋ ಬ್ಲಾ್ಯಕ್ಔಟ್ಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ಕಷ್ಟವಾದರೂ, ಕೆಲವು ಕ್ರಮಗಳ ಮೂಲಕ ಅದರ ಪರಿಣಾಮವನ್ನು ಕಡಿಮೆ ಮಾಡ ಬಹುದು. ಬಾಹ್ಯಾಕಾಶ ಹವಾಮಾನದ ಮೇಲೆ ನಿಗಾ ಇರಿಸಿ ಮತ್ತು ಮುನ್ಸೂಚನೆಗಳ ಮುಖಾಂತರ ಸೌರ ಜ್ವಾಲೆಗಳನ್ನು ಮುಂಚಿತವಾಗಿ ಗುರುತಿಸಿ ಎಚ್ಚರಿಕೆ ನೀಡಬಹುದು. ಉಪಗ್ರಹಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ರಕ್ಷಣಾತ್ಮಕವಾಗಿ ವಿನ್ಯಾಸಕ್ಕೆ ಒಳಪಡಿಸಿ, ಹೆಚ್ಚಿನ ಫ್ರೀಕ್ವೆನ್ಸಿಗಳನ್ನು (10 ಎಏ ಮೇಲೆ) ಬಳಸಿ ಅಥವಾ ಪರ್ಯಾಯ ಸಂವಹನ ವಿಧಾನಗಳನ್ನು ಅಳವಡಿಸಬಹುದು.
ಮ್ಯಾಗ್ನೆಟಿಕ್ ವಿಂಡೋಗಳು ಅಥವಾ ಕ್ವೆಂಚಂಟ್ ಇಂಜೆಕ್ಷನ್ನಂತಹ ತಂತ್ರಜ್ಞಾನಗಳನ್ನು ಬಳಸಿ ಪ್ಲಾಸ್ಮಾ ಪರಿಣಾಮವನ್ನು ಕಡಿಮೆ ಮಾಡಬಹುದು, ವಿಶೇಷವಾಗಿ ಸ್ಪೇಸ್ ವೆಹಿಕಲ್ ರೀ-ಎಂಟ್ರಿಗಳಲ್ಲಿ. ಇಸ್ರೋದಂಥ ಸಂಸ್ಥೆಗಳು ನಿರಂತರ ನಿಗಾ, ಮೇಲ್ವಿ ಚಾರಣೆ ಮತ್ತು ತ್ವರಿತ ಪ್ರತಿಕ್ರಿಯೆಗಳ ಮೂಲಕ ಅಡ ಚಣೆಗಳನ್ನು ನಿರ್ವಹಿಸುತ್ತವೆ ಹಾಗೂ ನಿವಾರಿಸುತ್ತವೆ.