ಬಾಳೆಹೊನ್ನೂರಿನ ರೋಟರಿ ಭವನದಲ್ಲಿ ಆಯೋಜಿಸಿದ್ದ ಮಣ್ಣಿನ ಲವತ್ತತೆಯ ಮಾಹಿತಿ ಶಿಬಿರವನ್ನು ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಉದ್ಘಾಟಿಸಿದರು. ಸುರೇಂದ್ರ, ಶಶಿಧರ್, ಡಾ.ಹರೀಶ್, ಸತೀಶ್ ಅರಳೀಕೊಪ್ಪ ಇದ್ದರು. 
ನ್ಯೂಸ್

ಕಾರ್ಮಿಕ, ಬೆಳೆಗಾರರ ಹಿತಕಾಯಲು ಬದ್ಧ

ಜಿ. ಗಜೇಂದ್ರ

ಬಾಳೆಹೊನ್ನೂರು: ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರ ಹಿತಕಾಯಲು ಕಾಫಿ ಮಂಡಳಿ ಸದಾ ಬದ್ಧವಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ರೋಟರಿ ಕ್ಲಬ್ ಹಾಗೂ ಜೆಸಿಐ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಮಣ್ಣು ಪರೀಕ್ಷಾ ಶಿಬಿರ ಹಾಗೂ ಮಣ್ಣಿನ ಲವತತ್ತೆ, ಸಂರಕ್ಷಣಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಫಿ ಮಂಡಳಿಯು ಬೆಳೆಗಾರರು, ಕಾರ್ಮಿಕ ಪರವಾಗಿಯೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ 63.7 ಕೋಟಿ ರೂ. ಸಹಾಯಧನವನ್ನು ಬೆಳೆಗಾರರಿಗಾಗಿ ಬಿಡುಗಡೆ ಮಾಡಿದೆ. ಇತ್ತೀಚೆಗೆ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಕಾಫಿ ಬೆಳೆಗಾರರು, ಕಾರ್ಮಿಕರ ಕಲ್ಯಾಣಕ್ಕಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಪ್ರಧಾನಮಂತ್ರಿ ಜೀವನ್‌ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಆರಂಭಿಸಿದೆ. 436 ರೂ., 20 ರೂ. ಪ್ರೀಮಿಯಂ ಪಾವತಿಸಿ ಯೋಜನೆಯ ಸದುಪಯೋಗ ಪಡೆದು ಕೊಳ್ಳಬಹುದು ಎಂದರು.
ಕಾಫಿ ಮಂಡಳಿಯಿಂದ ಕಾಫಿ ಪ್ಲಾಂಟೇಷನ್ ಹಾಗೂ ಕ್ಯೂರಿಂಗ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿ, ಎಸ್‌ಟಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿಯಿಂದ ಪಿಯುಸಿವರೆಗೆ 2250 ರೂ. ಹಾಗೂ ಪದವಿ, ಐಟಿಐ ನರ್ಸಿಂಗ್, ಕಾನೂನು ಪದವಿಗೆ 3750 ರೂ., ಇಂಜಿನಿಯರಿಂಗ್, ವೈದ್ಯ, ಕೃಷಿ ಕೋರ್ಸ್‌ಗಳಿಗೆ 7500 ರೂ. ವಿದ್ಯಾರ್ಥಿವೇತನ ನೀಡಲಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 2450 ವಿದ್ಯಾರ್ಥಿಗಳಿಗೆ 98.75 ಲಕ್ಷ ರೂ. ವಿದ್ಯಾರ್ಥಿವೇತನ ನೀಡಲಾಗುವುದು ಎಂದರು.
ಗ್ರಾಮೀಣ ಭಾಗಗಳಿಗೆ ಕಾಫಿ ಮಂಡಳಿಯು ತೆರಳಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮಣ್ಣು ಪರೀಕ್ಷೆ ನಡೆಸುತ್ತಿದೆ. ಮಣ್ಣು ಪರೀಕ್ಷೆ ಪ್ರತಿಯೊಬ್ಬ ರೈತರಿಗೂ ಅಗತ್ಯವಿದ್ದು ಭೂಮಿಯ ಲವತ್ತತೆ ತಿಳಿಯಲು ಸಾಧ್ಯವಿದೆ ಎಂದು ಹೇಳಿದರು.
ಕಾಫಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಎಸ್.ಬಿ.ಹರೀಶ್ ಮಾತನಾಡಿ, ಮಣ್ಣಿಗೆ ಗೊಬ್ಬರ ನೀಡುವ ಮುನ್ನ ಮಣ್ಣಿನ ಪೂರ್ವಾಪರತೆಯನ್ನು ತಿಳಿದುಕೊಂಡಿರಬೇಕು. ಗೊಬ್ಬರ ಹೆಚ್ಚಿಗೆ ಹಾಕಿದ ಮಾತ್ರಕ್ಕೆ ಇಳುವರಿ ಹೆಚ್ಚು ಬರುವುದಿಲ್ಲ. ಗೊಬ್ಬರ ಹೆಚ್ಚಾದರೆ ಅದು ವಿಷಪೂರಿತವೂ ಆಗಬಹುದು ಎಂದು ತಿಳಿಸಿದರು.
ಮಣ್ಣಿಗೆ 18 ಪೋಷಕಾಂಶಗಳು ಬೇಕಿದ್ದು ರೈತರು ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕಿದೆ. ಭೂಮಿಗೆ ಹೆಚ್ಚಿನ ಸುಣ್ಣ ಬಳಕೆ ಮಾಡಿದರೂ ಅಸಮತೋಲನ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರು ಪ್ರತಿವರ್ಷ ಮಣ್ಣಿನ ಪರೀಕ್ಷೆ ಮಾಡಿಸಿ ಸೂಕ್ತ ಪೋಷಕಾಂಶಗಳನ್ನು ನೀಡಬೇಕು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ, ಜೆಸಿಐ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಕಾಫಿ ಮಂಡಳಿಯ ಸಂಪರ್ಕಾಧಿಕಾರಿ ಚರಣ್, ಸ್ನೇಹಾ, ವೈಷ್ಣವಿ, ರೋಟರಿ ಸದಸ್ಯರಾದ ಸತೀಶ್ ಅರಳೀಕೊಪ್ಪ, ಸಿ.ವಿ.ಸುನೀಲ್, ಟಿ.ಸುರೇಶ್ ಇತರರಿದ್ದರು.