ಶಿವಮೊಗ್ಗದಲ್ಲಿ ಕಾರ್ಮಿಕರ ಕಾಯ್ದೆಗಳ ಅರಿವು ಕಾರ್ಯಕ್ರಮವನ್ನು ನ್ಯಾಯಾಧೀಶ ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಎಂ.ಪಿ.ವೇಣುಗೋಪಾಲ, ರಘುನಾಥ, ಎಂ.ಕೃಷ್ಣ, ಡಾ. ಸಂಜನಾ, ಜೆ.ವಿ.ಸುಪ್ರೀತಾ ಇತರರಿದ್ದರು. 
ನ್ಯೂಸ್

ಕಾರ್ಮಿಕರ ಶ್ರಮದಿಂದ ಸಮಾಜ ಸುವ್ಯವಸ್ಥಿತ

ಶಿವಮೊಗ್ಗ: ಸಮಾಜ ಎಂಬ ದೊಡ್ಡ ಯಂತ್ರವು ಕಾರ್ಮಿಕರೆಂಬ ಇನ್ನೊಂದು ಯಂತ್ರದಿಂದಾಗಿ ಸುಗಮವಾಗಿ ಸಾಗುತ್ತಿದೆ. ಕಾರ್ಮಿಕ ಯಂತ್ರ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ತೊಂದರೆ ನಿಶ್ಚಿತ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಅಭಿಪ್ರಾಯಪಟ್ಟರು.

ಕಾರ್ಮಿಕ ಇಲಾಖೆ ಮತ್ತಿತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕರಿಗೆ ಆಯೋಜಿಸಿದ್ದ ವಿವಿಧ ಕಾಯ್ದೆಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರ ಶ್ರಮದಿಂದ ಸಮಾಜ ಸುವ್ಯವಸ್ಥಿತವಾಗಿ ನಡೆಯುತ್ತಿದೆ. ಹೀಗಾಗಿ ಕಾರ್ಮಿಕ ವರ್ಗದ ನೆಮ್ಮದಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಕಾರ್ಮಿಕರು ಪ್ರೀತಿ ಮತ್ತು ಶಿಸ್ತಿನಿಂದ ತಮ್ಮ ಕೆಲಸದಲ್ಲಿ ತೊಡಗಿ ಸಮಾಜ ಸುಸ್ಥಿತಿಯಲ್ಲಿ ಕಾರ್ಯನಿರ್ವಹಣೆ ಮಾಡಲು ಅನುಕೂಲ ಮಾಡಿಕೊಡಬೇಕು. ಕಾರ್ಮಿಕರು ಆಧಾರ್, ಮೊಬೈಲ್ ಸಂಖ್ಯೆ, ಬ್ಯಾಂಕ್ ಹಾಗೂ ಕೆಲಸದ ವಿವರ ನೀಡಿ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಕಾರ್ಮಿಕ ನಿರೀಕ್ಷಕ ಎಂ.ಕೃಷ್ಣ ಮಾತನಾಡಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರು ನೋಂದಣಿ ಮಾಡಿಕೊಳ್ಳಲು 18ರಿಂದ 60 ವರ್ಷದೊಳಗಿನವರಾಗಿರಬೇಕು. ನೋಂದಣಿ ಪೂರ್ವದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನ ಕೆಲಸ ಮಾಡಿರಬೇಕು ಎಂದರು.
ಕಾರ್ಮಿಕ ಅಧಿಕಾರಿ ಎಂ.ಪಿ.ವೇಣುಗೋಪಾಲ್, ಇಎಸ್‌ಐ ಆಸ್ಪತ್ರೆಯ ಡಾ. ಸಂಜನಾ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ರಘುನಾಥ, ಕಾರ್ಮಿಕ ನಿರೀಕ್ಷಕಿ ಜೆ.ವಿ.ಸುಪ್ರೀತಾ, ಶಿಕಾರಿಪುರ ವೃತ್ತದ ಕಾರ್ಮಿಕ ನಿರೀಕ್ಷಕ ಫಕೀರಪ್ಪ ಗೋಡಿ, ಭದ್ರಾವತಿ ವೃತ್ತದ ಕಾರ್ಮಿಕ ನಿರೀಕ್ಷಕ ಬಿ.ಎಂ.ರಕ್ಷಿತ್, ಸಾಗರ ವೃತ್ತದ ಕಾರ್ಮಿಕ ನಿರೀಕ್ಷಕಿ ಬಿ.ಶಿಲ್ಪಾ ಇತರರಿದ್ದರು.