ಭದ್ರಾವತಿಯಲ್ಲಿ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಬೆಂಗಳೂರು ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಶಾರದಾ , ಎಚ್.ಆರ್.ಲೋಕೇಶ್ವರರಾವ್ ದೊಂಬಾಳೆ ಇತರರಿದ್ದರು. 
ನ್ಯೂಸ್

ಆರ್ಥಿಕ ಶಕ್ತಿ ನೀಡಲು ಸೊಸೈಟಿ ಸಹಕಾರಿ

ಭದ್ರಾವತಿ: ಸಮಾಜದ ಹಿರಿಯರ ಶ್ರಮದಿಂದ ಮರಾಠ ಸಮಾಜ ಆರ್ಥಿಕವಾಗಿ ಸದೃಢವಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಹೇಳಿದರು.

ನಗರದ ಭವಾನಿ ಸಂಕೀರ್ಣದಲ್ಲಿ ಏರ್ಪಡಿಸಿದ್ದ ಮರಾಠ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರ ಏಳಿಗೆಗೆ ಸೊಸೈಟಿ ಆರಂಭಿಸಲಾಗಿದೆ. ಸೊಸೈಟಿಯನ್ನು ಉತ್ತಮವಾಗಿ ಮುನ್ನಡೆಸುವುದು ಮುಖ್ಯ ಎಂದು ತಿಳಿಸಿದರು.

ಮಾಜಿ ಎಂಎಲ್‌ಸಿ ಆರ್.ಕೆ.ಸಿದ್ರಾಮಣ್ಣ ಮಾತನಾಡಿ, ದೇಶದಲ್ಲಿ ಹಿಂದು ಸಮಾಜಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ಕೊಡುಗೆ ಅಪಾರ. ಮರಾಠ ಸಮಾಜ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಸಂವಿಧಾನದ ಚೌಕಟ್ಟಿನಲ್ಲಿ ಸಿಗಬೇಕಾದ ಸ್ಥಾನಮಾನ ಇಲ್ಲವಾಗಿದೆ. ಜಾತಿ ಜನಗಣತಿ ನಡೆಯುತ್ತಿದ್ದು, 2ಎ ಮೀಸಲಾತಿಗಾಗಿ ಹೋರಾಟ ಮಾಡಬೇಕು. ವಿಧಾನಸಭೆ, ಲೋಕಸಭೆಯಲ್ಲಿ ಮೀಸಲಾತಿ ಪಡೆದುಕೊಳ್ಳಬೇಕು ಎಂದರು.

ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಕಾಶ್ ಆರ್. ಪಾಗೋಜಿ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಬೆಂಗಳೂರು ಗವಿಪುರಂನ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎಚ್.ಆರ್.ಲೋಕೇಶ್ವರರಾವ್ ದೊಂಬಾಳೆ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ್, ಸಂಘದ ಉಪಾಧ್ಯಕ್ಷ ಆರ್.ನಾಗರಾಜ್ ರಾವ್ ಸಿಂಘಾಡೆ, ಬಸವಂತರಾವ್ ದಾಳೆ ಇತರರಿದ್ದರು.