ಹೊದ್ದೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿಯ ನೂತನ ಗ್ರಾಮ ಸಮಿತಿ ಪುನರ್ ರಚನಾ ಸಭೆಯಲ್ಲಿ ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ ಮಾತನಾಡಿದರು. ಆನಂದ್, ಮಹೇಶ್, ಹನೀಫ್, ಪಾಪಣ್ಣ, ಸುಜಾತಾ, ಸೌಕತ್ ಆಲಿ, ಸುರೇಶ್, ಅಶ್ವತ್ಥ್ ಮೌರ್ಯ ಇದ್ದರು. 
ನ್ಯೂಸ್

ಕಾನೂನಾತ್ಮಕವಾಗಿ ಹಕ್ಕು ಪಡೆಯಲು ಸಾಮಾಜಿಕವಾಗಿ ಒಗ್ಗಟ್ಟಾಗಿ

ನಾಪೋಕ್ಲು: ಹೊದ್ದೂರು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಸಂವಿಧಾನದ ಕಾನೂನಾತ್ಮಕ ಹಕ್ಕನ್ನು ಪಡೆಯಲು ಸಾಮಾಜಿಕವಾಗಿ ಒಗ್ಗಟ್ಟಾಗಬೇಕು ಎಂದು ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಮೊಣ್ಣಪ್ಪ ಕರೆ ನೀಡಿದರು.

ಹೊದ್ದೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿಯ ನೂತನ ಗ್ರಾಮ ಸಮಿತಿ ಪುನರ್ ರಚನಾ ಸಭೆಯಲ್ಲಿ ಮಾತನಾಡಿದರು.

ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಹೀನಾಯ ವ್ಯವಸ್ಥೆಯಲ್ಲಿದ್ದು, ಹಲವಾರು ವರ್ಷಗಳಿಂದ ಭೂ ಮಾಲೀಕರ ದಬ್ಬಾಳಿಕೆಗೆ ಒಳಗಾಗಿ ಲೈನ್ ಮನೆಗಳಲ್ಲಿ ಶೋಚನೀಯವಾಗಿ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರದ ಕೆಲವು ಅಧಿಕಾರಿಗಳು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರ ಮೂಲಭೂತ ಹಕ್ಕೋತ್ತಾಯಗಳ ನಿರ್ಲಕ್ಷ್ಯವೇ ಕಾರಣ ಮತ್ತು ಸರ್ಕಾರದ ಭೂ ಗುತ್ತಿಗೆ ನೀತಿಯನ್ನು ವಿರೋಧಿಸಿ ಟೀಕಿಸಿದರು.

ಬಡ ಕೂಲಿ ಕಾರ್ಮಿಕರು ಸಾಮಾಜಿಕವಾಗಿ ಸಧೃಡಗೊಳಿಸಲು ಸಂಘಟನೆಯೇ ಮೂಲಾಧಾರ. ಸಂಘಟನೆಗಳನ್ನು ಬಲಪಡಿಸಲು ಗ್ರಾಮ ಮಟ್ಟದಲ್ಲಿ ಕಾಲನಿಗಳಿಗೆ ಭೇಟಿ ನೀಡುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಕಾರ್ಯಕರ್ತರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಪೆಗ್ಗೋಳಿ ನಿವೇಶನ ಹೋರಾಟ ಸಮಿತಿ ಮೇಲುಸ್ತುವಾರಿಯಾದ ಕಿರಣ್ ಜಗದೀಶ್ ಮಾತನಾಡಿ, ಕಾನ್ಸೀರಾಂಜೀ ನಗರ ಪಾಲೆಮಾಡುವಿನ ಅಂದಿನಿಂದ ಇಂದಿನವರೆಗಿನ ಹೋರಾಟದ ಬಗ್ಗೆ ಮೆಲುಕು ಹಾಕಿ, ಬಡವರ ಸಾಮಾಜಿಕ ಹಕ್ಕೊತ್ತಾಯಗಳು ಬಗೆಹರಿಯುವವರೆಗೂ ಹೋರಾಟಗಳು ಅನಿವಾರ್ಯವಾಗಿದೆ ಎಂದು ಪ್ರಾಸ್ತವಿಕವಾಗಿ ಮಾತನಾಡಿದರು.

ಕುಸುಮಾವತಿ ಆನಂದ್ ಮಾತನಾಡಿ, ಕೊಡಗಿನಲ್ಲಿ ನಿವೇಶನ ರಹಿತ ಬಡವರ ಪರವಾಗಿ ಧ್ವನಿ ಎತ್ತಿದ ಮೊದಲ ಹೋರಾಟ ಪಾಲೆಮಾಡು ಇಂದು ಕೊಡಗಿನಾದ್ಯಂತ ನಿವೇಶನ ರಹಿತರ ಮೂಲಭೂತ ಹಕ್ಕುಗಳಿಗಾಗಿ ಕೊಡಗಿನಾದ್ಯಂತ ಹೋರಾಟವು ವಿಸ್ತರಿಸಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಮ್ಮತಿ ನಿವೇಶನ ಹೋರಾಟ ಸಮಿತಿಯ ಮೇಲುಸ್ತುವಾರಿಯಾದ ಮಹೇಶ್, ಹನೀಫ್, ಅಧ್ಯಕ್ಷ ಪಾಪಣ್ಣ, ಪೆಗ್ಗೋಳಿ ಹೋರಾಟ ಸಮಿತಿಯ ಸುಜಾತಾ, ಪೊನ್ನತ್ ಮೊಟ್ಟೆ ಹೋರಾಟ ಸಮಿತಿಯ ಸೌಕತ್ ಆಲಿ, ಕಬಡಕೇರಿ ಹೋರಾಟ ಸಮಿತಿಯ ಸುರೇಶ್ , ಕಾನ್ಸಿರಾಂಜೀನಗರ ಪಾಲೆಮಾಡು ಹೋರಾಟ ಮತ್ತು ಅಭಿವೃದ್ಧಿ ಸಮಿತಿ ಪಿ.ಸಿ.ಸುರೇಶ್, ಕೋಕೇರಿ ನಿವೇಶನ ಹೋರಾಟ ಸಮಿತಿಯ ಮಂಜು, ಬಲಮೂರಿಯ ಕವೀನ್, ಕೊಂಡಂಗೇರಿಯ ಅಣ್ಣು ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಎಂ. ಅಶ್ವತ್ಥ್ ಮೌರ್ಯ ಮತ್ತು ಕೊಡಗು ಜಿಲ್ಲಾದ್ಯಂತ ಇರುವ ಭೂ ನಿವೇಶನ ರಹಿತ ಮತ್ತು ಹಕ್ಕು ವಂಚಿತರ ಹೋರಾಟದ ಸ್ಥಳದಿಂದ ಸದಸ್ಯರು ಭಾಗವಹಿಸಿದ್ದರು. ಜಿಲ್ಲಾದ್ಯಂತ ನಿವೇಶನ ರಹಿತ ಗ್ರಾಮಗಳಲ್ಲಿ 20 ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಂ.ರಂಜಿತ್ ಮೌರ್ಯ ಸ್ವಾಗತಿಸಿ ವಂದಿಸಿದರು.