ನ್ಯೂಸ್

ಸಮಾಜ ಸೇವೆಯೇ ಇವರ ಪಾಲಿನ ಗಾಯತ್ರಿ ಮಂತ್ರ!

| ನವೀನ್ ಎಂ.ಬಿ. ಚಿತ್ರದುರ್ಗ

ಹೆಸರು ಗಾಯತ್ರಿ ಶಿವರಾಂ. ಸೇವೆಯೇ ಇವರ ಪಾಲಿಗೆ ಗಾಯತ್ರಿ ಮಂತ್ರ. ತನಗಿಂತ ಹೆಚ್ಚಾಗಿ ಸಮಾಜದ ಹಿತ ಬಯಸಿದ ಚಿತ್ರದುರ್ಗದ ಚಿಂತಕಿ ಇವರು. ಕುಟುಂಬದ ಇಷ್ಟ-ಕಷ್ಟಗಳನ್ನು ನೀಗಿ ಒಬ್ಬ ಸಾಧಕಿಯಾಗಿ, ಸಮಾಜಮುಖಿಯಾಗಿ, ಅಂಧರಿಗೆ ಕಣ್ಣಾಗಿ ರೂಪುಗೊಂಡ ಇವರು ಯುವ ಸಾಧಕರಿಗೆ ರೋಲ್ ಮಾಡೆಲ್!

40ಕ್ಕೂ ಹೆಚ್ಚು ಸಂಸ್ಥೆಗಳ ಮೂಲಕ ಸಮಾಜ ಸೇವೆಯಲ್ಲಿರುವ ಗಾಯತ್ರಿ, ವಿಮಾ ಕ್ಷೇತ್ರದಲ್ಲಿನ 10 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳಿಗೆ ಒಡತಿ. ಎರಡು ಬಾರಿ ಮುಖದ ಪ್ಯಾರಾಲಿಸಿಸ್​ಗೆ ಒಳಗಾದರೂ ಕಾರ್ಯಕ್ಷೇತ್ರದಿಂದ ಹಿಂದಡಿ ಇಡದ ಗಟ್ಟಿಗಿತ್ತಿ (ಈಗ ಗುಣಮುಖರಾಗಿದ್ದಾರೆ). ಐ ಬ್ಯಾಂಕ್ ಸ್ಥಾಪನೆಯಿಂದ ಹಿಡಿದು ಬ್ಲಡ್ ಬ್ಯಾಂಕ್​ವರೆಗೆ, ಮೆಮೋಗ್ರಫಿ ಸೆಂಟರ್​ನಿಂದ ರೆಡ್ ಕ್ರಾಸ್ ಸಂಸ್ಥೆವರೆಗೆ, ಹಿಮೋಫಿಲಿಯಾ ಸೊಸೈಟಿಯಿಂದ ಜೈಪುರ ಕೃತಕ ಕಾಲು ಜೋಡಣೆವರೆಗೆ ಇವರ ಸೇವೆಯ ವ್ಯಾಪ್ತಿ ಹರಡಿದೆ.

15 ವರ್ಷದ ಕನಸು, 10 ವರ್ಷದ ಹೋರಾಟ: ಕೋಟೆ ನಾಡಿನ ಪ್ರಸನ್ನ ಗಣಪತಿ ಉತ್ಸವದಲ್ಲಿ ಶಿವಮೊಗ್ಗದ ಅಂಧ ಗಾಯಕ ವೇಣುಗೋಪಾಲ್ ಹಾಡುಗಾರಿಕೆ ಇತ್ತು. ಇವರ ಹಾಡು ಕೇಳಿದ ಗಾಯತ್ರಿ ಅವರಿಗೆ ಅಂಧರಿಗೆ ಏನಾದರೂ ಮಾಡಬೇಕೆಂಬ ತುಡಿತ ಹುಟ್ಟಿಕೊಂಡಿತು. ಅದರ ಫಲವೇ ಐ ಬ್ಯಾಂಕ್. ಚಿತ್ರದುರ್ಗದ ಅಷ್ಟೂ ನೇತ್ರ ತಜ್ಞರ ಬಳಿಗೆ, ಸಂಘ-ಸಂಸ್ಥೆಗಳ ಬಾಗಿಲಿಗೆ ಅಲೆದಾಡಿದ್ದಾರೆ. ಕೊನೆಗೆ, ಐಶ್ವರ್ಯ ಫೋರ್ಟ್ ಮಾಲೀಕ ಅರುಣಕುಮಾರ್ ನೆರವಿನಿಂದ 2006ರ ನವೆಂಬರ್​ನಲ್ಲಿ ಬಸವೇಶ್ವರ ಪುನರ್​ಜ್ಯೋತಿ ಐ ಬ್ಯಾಂಕ್ ಜನ್ಮ ತಾಳಿತು. ಆಗಿನ ವೈದ್ಯಕೀಯ ಶಿಕ್ಷಣ ಸಚಿವ ವಿ.ಎಸ್.ಆಚಾರ್ಯ ಉದ್ಘಾಟಿಸಿದ್ದರು. ಐ ಬ್ಯಾಂಕ್ ಕೆಲಸ ಕಾರ್ಯಗಳನ್ನು ಕಳೆದ 14 ವರ್ಷಗಳಿಂದ ಒಂದು ವ್ರತದಂತೆ ಪಾಲಿಸಿಕೊಂಡು ಬಂದಿದ್ದಾರೆ ಗಾಯತ್ರಿ. ಇದುವರೆಗೆ 1350ಕ್ಕೂ ಹೆಚ್ಚು ಅಂಧರಿಗೆ ಬೆಳಕಾಗಿದ್ದಾರೆ. ಕರೆ ಬಂದಾಗ ಸರಹೊತ್ತನ್ನೂ ಲೆಕ್ಕಿಸದೇ ಕಣ್ಣು ಪಡೆಯಲು ಹೋಗುತ್ತಿದ್ದರು. ಎಷ್ಟೋ ಬಾರಿ ಅವುಗಳನ್ನು ತಮ್ಮ ಮನೆಯ ಫ್ರಿಜ್​ನಲ್ಲಿಟ್ಟು ಮರುದಿನ ರವಾನಿಸಿದ್ದಿದೆ.

ರೋಗಿಗಳ ಪಾಲಿನ ಆಶಾಕಿರಣ: ಚಿತ್ರದುರ್ಗದಲ್ಲಿ ರಕ್ತ ನಿಧಿ ಕೇಂದ್ರಗಳಿದ್ದರೂ ಅಪಘಾತಗಳು ಸಂಭವಿಸುತ್ತಿದ್ದರಿಂದ ಬೇಡಿಕೆ ಹೆಚ್ಚಿತ್ತು. ರೋಗಿಗಳಿಗೆ ಸುಲಭಕ್ಕೆ ರಕ್ತ ಸಿಗಲಿ ಎಂಬ ಸದುದ್ದೇಶದಿಂದ 20 ವರ್ಷಗಳ ಹಿಂದೆ ಗಾಯತ್ರಿ ಅವರ ಮನೆ ಗೃಹಪ್ರವೇಶ ದಿನವೇ ಆಶಾಕಿರಣ ಸೇವಾ ಸಂಸ್ಥೆ ಜನ್ಮ ತಾಳಿತು. ದಾನಿಗಳಿಂದ ರಕ್ತ ಪಡೆದು ರಕ್ತ ನಿಧಿ ಕೇಂದ್ರಗಳ ಮೂಲಕ ಉಚಿತವಾಗಿ ಪೂರೈಸುತ್ತಿದ್ದಾರೆ. ಈವರೆಗೆ ಸುಮಾರು 4000 ಯುನಿಟ್ ರಕ್ತ ಸಂಗ್ರಹಿಸಿ ನೀಡಲು ಸಹಕಾರಿಯಾಗಿದ್ದಾರೆ.

ಸೇವೆ ಇವರಿಗೆ ರಕ್ತಗತ!: ಗಾಯತ್ರಿ ತಂದೆ ಬಾಗಲಕೋಟೆಯ ಮಹಾಬಲರಾವ್ ದಾಸ್ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಪರ್ಕದಲ್ಲಿದ್ದರು. ತಾಯಿ ಗಿರಿಜಾ ದಾಸ್ ಹೆಣ್ಣು ಮಕ್ಕಳ ಹೆರಿಗೆ ಸೇರಿ ಇನ್ನಿತರ ಅನಾರೋಗ್ಯ ವೇಳೆ ಸಹಾಯಕ್ಕೆ ನಿಲ್ಲುತ್ತಿದ್ದರು. ತಾಯಿಯ ತವರು ಕಬ್ಬಿನಾಲೆಯಲ್ಲಿ ಅಜ್ಜ ನಾರಾಯಣರಾವ್, ಅಜ್ಜಿ ಸಿಂಗಾರಮ್ಮ ಸಹ ಸೇವಾಪರರಾಗಿದ್ದರು. ಅಜ್ಜನೂರಲ್ಲಿ 9ನೇ ತರಗತಿವರೆಗೆ, ತಂದೆಯೂರಲ್ಲಿ ಪದವಿವರೆಗೆ ಓದಿದ ಗಾಯತ್ರಿಗೆ ಅಲ್ಲಿನ ಸಂಸ್ಕಾರ, ಸಂಸ್ಕೃತಿ ಮೈಗೂಡಿತು. ಋಷಿ ಪ್ರಭಾಕರ ಅವರ ಸಿದ್ಧ ಸಮಾಧಿ ಯೋಗ ಗಾಢ ಪ್ರಭಾವ ಬೀರಿತ್ತು. 1983ರಲ್ಲಿ ಬ್ಯಾಂಕ್ ಉದ್ಯೋಗಿ ಶಿವರಾಂ ವಿವಾಹ ವಾಗಿ ಚಿತ್ರದುರ್ಗಕ್ಕೆ ಬಂದು ನೆಲಸಿದರು. ಈ ನಡುವೆ ಪತಿಗೆ ಅನಾರೋಗ್ಯ ಕಾಡಿತು. 2 ವರ್ಷಗಳ ಕಾಲ 8 ದಿನ ಮನೆಯಲ್ಲಿದ್ದರೆ, ಇನ್ನೆಂಟು ದಿನ ಆಸ್ಪತ್ರೆಯಲ್ಲಿರುತ್ತಿದ್ದರು. ಪತಿ ಗುಣ ಹೊಂದಿ ಸೇವೆಗೆ ಮರಳಿದರು. ಕಷ್ಟಕಾಲದಲ್ಲಿ ಮನೆ ಸರಿತೂಗಿಸಲು ಸಣ್ಣ ಉಳಿತಾಯ ಪ್ರತಿನಿಧಿಯಾಗಿ ಮಾಸಿಕ 120 ರೂ.ಗೆ ಕೆಲಸ ಶುರು ಮಾಡಿದರು. ಈಗ ಲಕ್ಷಾಂತರ ರೂ. ಆದಾಯ ಬರುತ್ತಿದೆ. ದುಡಿಮೆಯ ಶೇ.25 ಭಾಗವನ್ನು ಸೇವೆಗೆ ಮೀಸಲಿಡುತ್ತ ಬಂದಿದ್ದಾರೆ. ತಮ್ಮಿಬ್ಬರು ಮಕ್ಕಳನ್ನು ಸರ್ಕಾರಿ ಶಾಲೆ- ಕಾಲೇಜುಗಳಲ್ಲೇ ಓದಿಸಿದ್ದಾರೆ. ಹಿರಿ ಮಗಳು ದೀಪ್ತಿ ಅಮೆರಿಕ ದಲ್ಲಿ ವೈದ್ಯೆ. ಕಿರಿ ಮಗಳು ದಿವ್ಯಾ ಐಎಎಸ್ ಅಧಿಕಾರಿ, ಪ್ರಧಾನಮಂತ್ರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾರೆ.

ಗಾಯತ್ರಿ ಸೇವಾ ಕೈಂಕರ್ಯ: ಗುರುತು ಪರಿಚಯವೇ ಇರದ ಎಷ್ಟೋ ವಿದ್ಯಾರ್ಥಿಗಳ ಶಾಲಾ ಶುಲ್ಕ ಭರಿಸುತ್ತಾರೆ. ಇನ್ನೆಷ್ಟೋ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸುತ್ತಾರೆ. ಅಂಗವಿಕಲರಿಗೆ ಸಾಧನ ಸಲಕರಣೆ ಹಂಚುತ್ತಾರೆ. ಶಾಲೆಗಳಲ್ಲಿ ಶೌಚಗೃಹ ನಿರ್ವಣ, ಪೀಠೋಪಕರಣ, ಶಾಲಾವರಣ, ಬಯಲು ರಂಗ ಮಂದಿರ, ದೇವಸ್ಥಾನ, ಧ್ಯಾನ ಮಂದಿರ ನಿರ್ವಣ, ಆಂಬುಲೆನ್ಸ್ ಖರೀದಿ, ಲೈಂಗಿಕ ದೌರ್ಜನ್ಯ ನಿಯಂತ್ರಣ, ಮಹಿಳಾ ಸಮಾಜ ಹೀಗೆ ಹಲವು ಸಂಸ್ಥೆಗಳಲ್ಲಿ ಗಾಯತ್ರಿ ಕೆಲಸ ಮಾಡಿದ್ದಾರೆ. ಶ್ರೀ ಶಿವಮೂರ್ತಿ ಮುರುಘಾ ಶರಣರು ಇವರನ್ನು ಎಸ್​ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ನಿರ್ದೇಶಕರನ್ನಾಗಿ ನೇಮಿಸಿದ್ದಾರೆ. ರಾಜ್ಯ ರೆಡ್ ಕ್ರಾಸ್ ಆಡಳಿತ ಮಂಡಳಿ ಸದಸ್ಯರೂ ಹೌದು. ಸ್ತನ್ಯಪಾನ ಸಪ್ತಾಹದ ರಾಜ್ಯ, ರಾಷ್ಟ್ರ ಮಟ್ಟದ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಐಎನ್​ಜಿ ಲೈಫ್ ಇನ್ಶೂರೆನ್ಸ್​ನಲ್ಲಿ ಮ್ಯಾನೇಜರ್ ಆಗಿದ್ದಾಗ ದುಬೈ, ಸಿಂಗಾಪುರ, ಥಾಯ್ಲೆಂಡ್, ಮಲೇಷ್ಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ಗೆ ತೆರಳಿ ಗ್ರ್ಯಾಂಡ್​ಸ್ಲ್ಯಾಮ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಪತಿ ಶಿವರಾಂ ಐ ಬ್ಯಾಂಕ್ ಉಸ್ತುವಾರಿ ನೋಡುತ್ತಿದ್ದಾರೆ. ಕರೊನಾ ವೇಳೆ ಬಡವವರಿಗೆ ಆಹಾರ ಕಿಟ್ ವಿತರಿಸಿದ್ದಾರೆ.

ಸಾಧನೆಗೆ ಯಾವುದೂ ಅಸಾಧ್ಯವಲ್ಲ. ಒಂದು ಕೆಲಸಕ್ಕೆ ನಿಂತರೆ ಖಂಡಿತ ಸುತ್ತಮುತ್ತಲಿನವರ ಸಹಾಯ ಸಿಕ್ಕೇ ಸಿಗುತ್ತದೆ. ನಮ್ಮಲ್ಲಿ ಹಿಂಜರಿಕೆ, ಕೀಳರಿಮೆ ಇರಬಾರದು. ಒಂದು ತಂಡವಾಗಿ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಗಾಯತ್ರಿ ಶಿವರಾಂ.