ಸೊರಬ: ಜೀವದ ಹಂಗನ್ನು ತೊರೆದು ಹಗಲಿರುಳೆನ್ನದೇ ನಿಸ್ವಾರ್ಥ ಸೇವೆ ಸಲ್ಲಿಸುವ ಮೆಸ್ಕಾಂ ಸಿಬ್ಬಂದಿ ಕಾರ್ಯ ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಡಿ.ಎಸ್.ಶಂಕರ್ ಶೇಟ್ ಹೇಳಿದರು.
ಸೋಮವಾರ ಪಟ್ಟಣದ ಮಾರ್ಕೆಟ್ ರಸ್ತೆಯ ಪ್ರಜಾಪಿತ ಬ್ರಹ್ಮಕುಮಾರಿ ವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಮ್ಮಿಕೊಂಡಿದ್ದ ಮೆಸ್ಕಾಂ ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿಗೆ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಂದ್ರಗುತ್ತಿ ಹೋಬಳಿಯಲ್ಲಿ ವಿದ್ಯುತ್ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಎದೆಮಟ್ಟಕ್ಕೆ ನಿಂತಿದ್ದ ನೀರಿನಲ್ಲಿ ಇಳಿದು ಅಪಾಯವನ್ನೂ ಲೆಕ್ಕಿಸದೆ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ಇಂಥವರ ಸೇವೆ ಗುರುತಿಸಿ ವೇದಿಕೆಯಿಂದ ಸನ್ಮಾನಿಸಲಾಗುತ್ತಿದೆ. ಲೈನ್‌ಮನ್‌ಗಳು ತಮಗೂ ಒಂದು ಕುಟುಂಬ ಇದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಜಾಗರೂಕರಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸನ್ಮಾನ ಸ್ವೀಕರಿಸಿದ ಲೈನ್‌ಮನ್ ಕೆ.ರಾಜಪ್ಪ ಮಾತನಾಡಿ, ಸೇವೆ ಮಾಡುವ ಉದ್ದೇಶದಿಂದಲೇ ಮೆಸ್ಕಾಂಗೆ ಸೇರ್ಪಡೆಗೊಂಡಿದ್ದೇನೆ. ಜನತೆಗೆ ಸೇವೆ ನೀಡುವುದು ನನ್ನ ಉದ್ದೇಶ. ಜೀವದ ಹಂಗನ್ನು ತೊರೆದು ವಿದ್ಯುತ್ ಸಂಪರ್ಕ ಕಲ್ಪಿಸದಿದ್ದರೆ 7-8 ಗ್ರಾಮಗಳು ಸತತವಾಗಿ ಕತ್ತಲಲ್ಲಿ ಇರಬೇಕಾದ ಪರಿಸ್ಥಿತಿ ಇತ್ತು. ಏನಾದರೂ ಆಗಲಿ ಜನರಿಗೆ ಬೆಳಕು ಕಲ್ಪಿಸಬೇಕೆಂಬ ಉದ್ದೇಶದಿಂದ ಎದೆಮಟ್ಟದ ನೀರಿನಲ್ಲಿಯೂ ಕೆಲಸ ಮಾಡಿ ವಿದ್ಯುತ್ ಸಂಪರ್ಕ ಕಲ್ಪಿಸಿದ ತೃಪ್ತಿ ತಮಗಿದೆ. ಜನತೆ ಸಹ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಾಗ ನಮ್ಮೊಂದಿಗೆ ಸ್ನೇಹಪರವಾಗಿ ವರ್ತಿಸಿದರೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ದೊರೆಯುತ್ತದೆ ಎಂದರು.
ಗೃಹರಕ್ಷಕ ದಳದ ನಿವೃತ್ತ ಘಟಕಾಧಿಕಾರಿ ರೇವಣಪ್ಪ, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ವೀಣಾ, ಲೈನ್‌ಮನ್‌ಗಳಾದ ಬಸವರಾಜ್ ಜಂಗಮಶೆಟ್ಟಿ, ಅವಿನಾಶ್ ಕಟ್ಟಿ, ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ವೈದ್ಯ ಅಮಿತ್ ಮೊಂಡಲ್, ಎಸ್.ರಾಘವೇಂದ್ರ. ರಮೇಶ್ ಕಲ್ಲಂಬಿ, ಸರಸ್ವತಿ ನಾವುಡ ಇತರರಿದ್ದರು.