ಬೆಂಗಳೂರು: ರಾಜ್ಯದಲ್ಲಿ ಸಾಮಾಜಿಕ ನ್ಯಾಯ, ದುರ್ಬಲರಿಗೆ ಮೀಸಲಾತಿ ಸೌಲಭ್ಯ ತಂದಿದ್ದೇ ನಾವು(We brought social justice and reservation facilities for the weak in the state). ಆದರೆ ಇವತ್ತು ಅದರ ಪ್ರತಿಫಲವನ್ನು ಕಾಂಗ್ರೆಸ್ ಅನುಭವಿಸುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಜೆ.ಪಿ. ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಾಂಗ್ರೆಸ್‌ನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ಆದರೆ, ಈ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಮತ್ತು ದುರ್ಬಲರಿಗೆ ಮೀಸಲಾತಿ ಸೌಲಭ್ಯ ಕೊಟ್ಟಿದ್ದೇ ನಾವು ಎಂದರು.
ನಾರಿಯರಿಗೆ ಶಕ್ತಿ ತುಂಬಿದವರು ಪ್ರಧಾನಿ ಮೋದಿ. ನಾವು ಅವರ ಜೊತೆ ಇದ್ದೇವೆ. ಯಾವ ಭಯವೂ ಇಲ್ಲ. ಪಕ್ಷದಲ್ಲಿ ಮುಂದೆ ಕನಿಷ್ಟ ಐವತ್ತು ಮಹಿಳಾ ಸಮಾವೇಶಗಳು ನಡೆಯಬೇಕು. ಭಿಕ್ಷೆ ಬೇಡಿಯಾದರೂ ಹಣ ಕೊಡುತ್ತೇನೆ. ಅದಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ಬರುತ್ತಾರೆ, ನಾನು ಬರುತ್ತೇನೆ. ನಿಖಿಲ್ ಅವರು ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಕಟ್ಟಬೇಕು. ಸಮಾವೇಶಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಮುಂದಿನ ವರ್ಷಗಳಲ್ಲಿ ಕನಿಷ್ಟ 80 ಮಹಿಳೆಯರು ನಮ್ಮ ಪಕ್ಷದಿಂದ ಅಸೆಂಬ್ಲಿಗೆ ನಿಲ್ಲಬೇಕು. ಅದನ್ನು ನಾನು ಕಣ್ಣಾರೆ ನೋಡಬೇಕು. ಮೋದಿಯವರು ಮಹಿಳಾ ಸಬಲೀಕರಣಕ್ಕೆ ಅನೇಕ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಲೊಕಸಭೆಯಲ್ಲಿ ಮಹಿಳಾ ಮೀಸಲಾತಿ ಬಿಲ್ ಪಾಸಾಗಿದೆ ಎಂದು ತಿಳಿಸಿದರು.
ದೇವೇಗೌಡರು ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ನಮ್ಮ ತಾತನ ಹಿಂದೆ ಇದ್ದ ಶಕ್ತಿ ನಮ್ಮ ಅಜ್ಜಿ ಚನ್ನಮ್ಮನವರು. ತಾತಾ ಅವರನ್ನು ಹಳ್ಳಿಗಳಿಂದ ಜನರು ಹುಡುಕಿಕೊಂಡು ಬರುತ್ತಿದ್ದರು. ಅವರಿಗೆಲ್ಲ ಮನೆಯಲ್ಲಿ ಅತ್ಯಂತ ವಾತ್ಸಲ್ಯದಿಂದ ಊಟ, ತಿಂಡಿ ಬಡಿಸುತ್ತಿದ್ದರು ಅಜ್ಜಿ. ಚನ್ನಮ್ಮಜ್ಜಿ ಅವರ ತ್ಯಾಗ ಎಲ್ಲರಿಗೂ ಗೊತ್ತಿದೆ. ಅವರ ತ್ಯಾಗವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಆದರ್ಶ ಜೀವನ ಮಾಡಿದ್ದಾರೆ. ಈಗಲೂ ಮನೆಗೆ ಹೋದರೆ ದೇವೆಗೌಡರ ಜೊತೆಗೆ ಕೂತು ಊಟ ಮಾಡುತ್ತಿರುತ್ತಾರೆ. ಇದೆಲ್ಲವನ್ನು ನೋಡುವ ಭಾಗ್ಯ ನನ್ನದಾಗಿದೆ ಎಂದು ನಿಖಿಲ್ ಭಾವುಕರಾದರು.
ಜೆಡಿಎಸ್ ಬೆಂಗಳೂರು ಘಟಕ ಅಧ್ಯಕ್ಷ ರಮೇಶ್ ಗೌಡ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮೀ ರಾಮೇಗೌಡ ಮಾತನಾಡಿದರು.
ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹಿರಿಯ ಲೇಖಕಿ, ಪತ್ರಕರ್ತೆ ಪ್ರತಿಭಾ ನಂದಕುಮಾರ್ ಉದ್ಘಾಟಿಸಿದರು. ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಸಿ.ಬಿ.ಸುರೇಶ್ ಬಾಬು, ಮಾಜಿ ಸಚಿವರಾದ ಲೀಲಾದೇವಿ ಆರ್. ಪ್ರಸಾದ್, ವೆಂಕಟರಾವ್ ನಾಡಗೌಡ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ, ಮಾಜಿ ಶಾಸಕ ಕೆ.ಎ. ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಅಂತಾರಾಷ್ಟ್ರೀಯ ದಿನಾಚರಣೆಯಲ್ಲಿ ಮಾತನಾಡಿದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ನಾನು ರಾಮನಗರದ ಶಾಸಕಿಯಾಗಿದ್ದ ವೇಳೆ ಹಲವು ಸಮಸ್ಯೆಗಳನ್ನು ಎದುರಿಸಿದ್ದೆ. ಹಾರೋಹಳ್ಳಿ ತಾಲ್ಲೂಕು ರಚನೆ ಮಾಡುವುದಕ್ಕೆ ಕೆಲವರು ಬಿಡಲಿಲ್ಲ. ವಿಧಾನಸೌದದಲ್ಲಿ ಫೈಲ್ಗಳನ್ನು ಮುಚ್ಚಿಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರ ಅಭಿವೃದ್ಧಿ ಹೊಂದಲು ದೇವೇಗೌಡರು, ಕುಮಾರಸ್ವಾಮಿ ಹಾಗೂ ನನ್ನ ಕೊಡುಗೆ ಇದೆ. ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ಡಿ.ಕೆ. ಸುರೇಶ್ ಹೆಸರು ಹೇಳದೆಯೇ ಅನಿತಾ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.