ನಿಮ್ಮ ಜೀವನ ಚೆನ್ನಾಗಿದ್ರೂ ಖುಷಿ ಇಲ್ವಾ? 
ನ್ಯೂಸ್

Social Comparison Theory: ಎಲ್ಲವೂ ಇದ್ರೂ ಖುಷಿ ಇಲ್ವಾ? ಬೇರೆಯವರ ಜೀವನ ನೋಡಿ ನೆಮ್ಮದಿ ಕಳೆದುಕೊಳ್ತಿದ್ದೀರಾ?

ಎಲ್ಲವೂ ಇದ್ರೂ ಬೇರೆಯವರ ಜೀವನ ನೋಡಿ ಬೇಸರವಾಗುತ್ತಿದೆಯಾ? ಸೋಷಿಯಲ್ ಮೀಡಿಯಾದಲ್ಲಿ ಇತರರ ಜತೆ ಹೋಲಿಕೆ ಮಾಡಿಕೊಳ್ಳುವುದು ನಿಮ್ಮ ಖುಷಿ, ನೆಮ್ಮದಿಗೆ ಹೇಗೆ ಅಡ್ಡಿಯಾಗುತ್ತೆ ಗೊತ್ತಾ?

Mental Wellbeing: ನಮಗೆ ಒಳ್ಳೆಯ ಕೆಲಸ, ಕುಟುಂಬ, ಹಣ ಎಲ್ಲವೂ ಇದ್ದರೂ ಕೆಲವೊಮ್ಮೆ ನೆಮ್ಮದಿ ಇರಲ್ಲ. ಬೇರೆಯವರು ಹೊಸ ಕಾರು ತಗೊಂಡಾಗ, ವಿದೇಶಕ್ಕೆ ಹೋಗಿ ಬಂದಾಗ ಅಥವಾ ಏನಾದ್ರೂ ಸಾಧನೆ ಮಾಡಿದಾಗ, ನಮ್ಮ ಜೀವನದಲ್ಲಿ ಏನೋ ಕಡಿಮೆ ಇದೆ ಅನ್ನಿಸಬಹುದು. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಬೇರೆಯವರ ಜೀವನ ನೋಡಿಕೊಂಡು ನಮ್ಮ ಬದುಕನ್ನು ಹೋಲಿಕೆ ಮಾಡಿಕೊಳ್ಳುವ ಅಭ್ಯಾಸವೂ ಒಂದು ಕಾರಣ.

ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಹಲವರು ತಮ್ಮ ಖುಷಿಯ ಕ್ಷಣಗಳು, ಪ್ರವಾಸ ಮತ್ತು ಯಶಸ್ಸಿನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಆದರೆ ಅವರ ಕಷ್ಟ, ಸಮಸ್ಯೆ ಮತ್ತು ವೈಫಲ್ಯಗಳು ಅಷ್ಟಾಗಿ ಕಾಣಿಸಲ್ಲ. ಹೀಗಾಗಿ ಬೇರೆಯವರ ಜೀವನವೇ ಪರ್ಫೆಕ್ಟ್, ನಮ್ಮ ಬದುಕೇ ಸಪ್ಪೆ ಅನ್ನೋ ಭಾವನೆ ಬರಬಹುದು.

‘ಸಾಮಾಜಿಕ ಹೋಲಿಕೆ’ ಅಂದರೆ?

ಮನಃಶಾಸ್ತ್ರದಲ್ಲಿ ಇದನ್ನು ‘ಸಾಮಾಜಿಕ ಹೋಲಿಕೆ’ (Social Comparison) ಎಂದು ಕರೆಯುತ್ತಾರೆ. ಬೇರೆಯವರ ಸಾಧನೆ ನೋಡಿ ಪ್ರೇರಣೆ ಪಡೆಯೋದು ಒಳ್ಳೆಯದೇ. ಆದರೆ ಅದೇ ಹೋಲಿಕೆ ನಮ್ಮಲ್ಲಿ ಬೇಸರ ಮತ್ತು ಕೀಳರಿಮೆ ಮೂಡಿಸಿದರೆ ಸಮಸ್ಯೆಯಾಗಬಹುದು.

ಇನ್‌ಫ್ಲುಯೆನ್ಸರ್‌ಗಳ ಜೀವನ ನೋಡಿ ಆಸೆ ಹೆಚ್ಚಾಗುತ್ತಾ?

ಇನ್‌ಫ್ಲುಯೆನ್ಸರ್‌ಗಳ ದುಬಾರಿ ಬಟ್ಟೆ, ಹೊಸ ಮೊಬೈಲ್‌, ಐಷಾರಾಮಿ ಪ್ರವಾಸ ನೋಡಿ ನಮಗೂ ಅದೇ ಬೇಕು ಅನ್ನಿಸಬಹುದು. ನಮ್ಮ ಬಳಿ ಒಳ್ಳೆಯ ವಸ್ತುಗಳಿದ್ದರೂ ಬೇರೆಯವರ ಬಳಿ ಇರೋದನ್ನು ನೋಡಿ ಹೊಸ ಆಸೆಗಳು ಹುಟ್ಟುತ್ತವೆ. ಇದರಿಂದ ಅನಗತ್ಯ ಖರ್ಚು ಹೆಚ್ಚಾಗುವ ಸಾಧ್ಯತೆಯೂ ಇದೆ.

ಸೋಷಿಯಲ್ ಮೀಡಿಯಾ ನೋಡಿ ಬೇಸರಪಡುವುದು ಯಾಕೆ?

ಇನ್ನು, ‘ಫೋಮೋ’ (FOMO) ಅಂದ್ರೆ, ಬೇರೆಯವರು ಏನೋ ವಿಶೇಷ ಅನುಭವ ಪಡೆಯುತ್ತಿದ್ದಾರೆ, ನಾವು ಅದನ್ನು ಮಿಸ್ ಮಾಡಿಕೊಳ್ತಿದ್ದೀವಿ ಅನ್ನೋ ಆತಂಕ. ಈ ಭಾವನೆ ಹೆಚ್ಚಾದಾಗ, ನಮ್ಮ ಜೀವನದಲ್ಲಿ ಏನಿದೆ ಅನ್ನೋದಕ್ಕಿಂತ ಬೇರೆಯವರು ಏನು ಮಾಡ್ತಿದ್ದಾರೆ ಅನ್ನೋದೇ ಮುಖ್ಯವಾಗಬಹುದು.

ಸಿಕ್ಕ ಖುಷಿ ಯಾಕೆ ಹೆಚ್ಚು ದಿನ ಇರಲ್ಲ?

ಹೊಸ ಬೈಕ್‌ ತಗೊಂಡಾಗ ಅಥವಾ ಒಂದು ಗುರಿ ಸಾಧಿಸಿದಾಗ ಖುಷಿಯಾಗುತ್ತೆ. ಆದರೆ ಸ್ವಲ್ಪ ದಿನಗಳ ನಂತರ ಅದೇ ಸಹಜ ಅನ್ನಿಸಬಹುದು. ಇದನ್ನು ‘ಹೆಡೋನಿಕ್ ಅಡಾಪ್ಟೇಶನ್’ (Hedonic Adaptation) ಅಂತಾರೆ. ಹೀಗೆ ಮತ್ತೆ ಮತ್ತೆ ಹೊಸ ವಸ್ತು, ಹಣ ಅಥವಾ ಸ್ಥಾನಮಾನದಲ್ಲಿ ಖುಷಿ ಹುಡುಕಿದರೆ ಮನಸ್ಸಿಗೆ ತೃಪ್ತಿ ಸಿಗದೇ ಇರಬಹುದು.

ನೆಮ್ಮದಿ ಕಾಪಾಡಿಕೊಳ್ಳೋದು ಹೇಗೆ?

ಬೇರೆಯವರ ಜೊತೆ ನಮ್ಮನ್ನು ಹೋಲಿಸಿಕೊಳ್ಳುವುದು ಸಹಜ. ಆದರೆ ಅದರಿಂದ ನಮ್ಮ ಖುಷಿ, ನೆಮ್ಮದಿ ಹಾಳಾಗಬಾರದು. ಸೋಷಿಯಲ್ ಮೀಡಿಯಾ ಬಳಕೆಗೆ ಮಿತಿ ಹಾಕಿಕೊಳ್ಳಿ. ನಿಮ್ಮ ಜೀವನದಲ್ಲಿರುವ ಒಳ್ಳೆಯ ಸಂಗತಿಗಳನ್ನು ಗುರುತಿಸಿ, ಅವುಗಳಿಗೆ ಬೆಲೆ ಕೊಡಿ. ಬೇರೆಯವರ ಯಶಸ್ಸನ್ನು ನಿಮ್ಮ ಸೋಲು ಎಂದು ಭಾವಿಸಬೇಡಿ. ಅವರ ಸಾಧನೆಯನ್ನು ನೋಡಿ ಬೇಸರಪಡುವ ಬದಲು, ಅದನ್ನೇ ನಿಮ್ಮ ಬೆಳವಣಿಗೆಗೆ ಸ್ಫೂರ್ತಿಯಾಗಿ ತೆಗೆದುಕೊಳ್ಳಿ.

ಇದನ್ನೂ ಓದಿ: ದುರ್ಗಾ ಪೂಜೆಯಲ್ಲಿ ಮಿಂಚಿದ ಆಲೂ; ಬಂಗಾಳಿ ಸೀರೆಯಲ್ಲಿ ಆಲಿಯಾ ಭಟ್ ಕ್ಯೂಟ್‌ ಪೋಸ್‌! | Alia Bhatt Bengali Saree

ನೆನಪಿರಲಿ, ಸೋಷಿಯಲ್ ಮೀಡಿಯಾದಲ್ಲಿ ಕಾಣಿಸೋದು ಬೇರೆಯವರ ಜೀವನದ ಒಂದು ಭಾಗ ಮಾತ್ರ. ಅವರ ಬದುಕಿನ ಜತೆ ನಿಮ್ಮ ಜೀವನವನ್ನು ಹೋಲಿಕೆ ಮಾಡಿಕೊಂಡು ನೆಮ್ಮದಿ ಕಳೆದುಕೊಳ್ಳಬೇಡಿ. ನಿಮಗೆ ಮುಖ್ಯವಾದ ಗುರಿಗಳ ಕಡೆ ಗಮನ ಕೊಡಿ.