ನ್ಯೂಸ್

ಚಾಕು, ಟ್ರೇನಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಾಗಣೆ;ದಂಗಾದ ಕೆಐಎ ಕಸ್ಟಮ್ಸ್

ಬೆಂಗಳೂರು: ಚಾಕು ಮತ್ತು ಟ್ರೇಗಳಲ್ಲಿ ಚಿನ್ನ ಬಚ್ಚಿಟ್ಟು ಕಳ್ಳಸಗಾಣೆ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಇವರಿಂದ ಚಿನ್ನದ ಪೇಸ್ಟ್ ಸೇರಿ 298 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ. ದುಬೈನಿಂದ ಶನಿವಾರ ಕೆಐಎಗೆ ಬಂದಿಳಿದ ಪ್ರಯಾಣಿಕರನ್ನು ಮತ್ತು ಬ್ಯಾಗ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದರು. ಇದರಲ್ಲಿ ಇಬ್ಬರ ಲಗೇಜ್‌ಗಳನ್ನು ತಪಾಸಣೆ ಮಾಡಿದಾಗ ಎರಡು ಚಾಕು ಹಾಗೂ ಟ್ರೇಗಳಲ್ಲಿ ಚಿನ್ನ ಪತ್ತೆಯಾಗಿತ್ತು.

ಕೂಡಲೇ ಆ ಇಬ್ಬರು ಪ್ರಯಾಣಿಕರನ್ನು ಬಂಧಿಸಿ, ಲಗೇಜ್ ತಪಾಸಣೆ ನಡೆಸಿದರು. ಚಾಕುಗಳ ಹಿಡಿಯಲ್ಲಿ ಚಿನ್ನದ ತುಂಡುಗಳನ್ನು ಬಚ್ಚಿಟ್ಟಿದ್ದರು. ಅದೇ ರೀತಿ ಟ್ರೇ ಒಳಗೆ ಅಂಟಿಸಿದ್ದ ಸ್ಟಿಕರ್ ತೆಗೆದು ನೋಡಿದಾಗ ಅದರಡಿ ಚಿನ್ನದ ಪೇಸ್ಟ್ ಇರುವುದು ಬೆಳಕಿಗೆ ಬಂದಿದೆ. ಈ ಎರಡನ್ನೂ ವಶಕ್ಕೆ ಪಡೆದು ನೋಡಿದಾಗ ಚಿನ್ನ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.