ಭಾರತೀಯ ಸಂಸ್ಕೃತಿ, ಸಂಸ್ಕಾರ, ಕುಟುಂಬ ಮೌಲ್ಯಗಳ ವಿಚಾರ ಪದೇಪದೆ ಚರ್ಚೆಗೊಳಗಾಗುತ್ತದೆ. ಮಹಿಳಾ ಪರ ವಿಚಾರ, ಮಹಿಳಾ ಹಕ್ಕುಗಳ ವಿಚಾರ ಬಂದಾಗ ಸಾಕಷ್ಟು ಟೀಕೆಗೊಳಗಾಗುತ್ತವೆ ಕೂಡ. ಅದೇ ರೀತಿ ಕೆಲವು ಆಚರಣೆಗಳಿಗೆ ವಿರೋಧವೂ ವ್ಯಕ್ತವಾಗುತ್ತದೆ. ಅಂತಹ ಸಂಪ್ರದಾಯದ ಪೈಕಿ, ಭಾರತೀಯ ನಾರಿ ಪತಿಯನ್ನು ಹಿಂಬಾಲಿಸಿಕೊಂಡು ಹೋಗುವ ವಿಚಾರವೂ ಪ್ರಮುಖವಾದುದು. ಇದಕ್ಕೆ ಸಾಕಷ್ಟು ವಿರೋಧವನ್ನೂ ಮಹಿಳಾವಾದಿಗಳು ಮಾಡುತ್ತಿರುತ್ತಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಯಾವುದೋ ಸಂದರ್ಭದಲ್ಲಿ ಮಾಡಿದ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಪ್ರಶಂಸೆಗೊಳಗಾಗಿದೆ.
ಹೊಸ ವರ್ಷದ ಆರಂಭದಲ್ಲಿ ಮತ್ತೊಮ್ಮೆ ಈ ವಿಡಿಯೋ ಟಿಕ್ಟಾಕ್ ಬಳಕೆದಾರ ಯುವತಿ ಪಾಹಿ ಎಂಬುವವರ ಖಾತೆಯಿಂದ ಅವರನ್ನೂ ಒಳಗೊಂಡಂತೆ ಬಂದಿದ್ದು, ವ್ಯಾಪಕವಾಗಿ ವೈರಲ್ ಆಗಿದೆ. ಇದನ್ನು ಅವರು ಜನವರಿ 2ರಂದು ಪೋಸ್ಟ್ ಮಾಡಿದ್ದಾರೆ. ಅವರ ಭಾಷಣದ ವಿಡಿಯೋ ಒಂದು ಪಕ್ಕ ಇದ್ದರೆ, ಇನ್ನೊಂದು ಪಕ್ಕದಲ್ಲಿ ಪಾಹಿ ಪ್ರತಿಕ್ರಿಯಿಸಿರುವ ರೀತಿ ಸೇರಿಕೊಂಡಿರುವುದು ವಿಶೇಷ.
ವಾಸ್ತವದಲ್ಲಿ ಸ್ಮೃತಿ ಇರಾನಿ ಅವರು 2018ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಅಂಶವನ್ನು ಒಳಗೊಂಡ ಭಾಷಣವನ್ನು ಮಾಡಿದ್ದರು. ವೈರಲ್ ಆಗಿರುವ ವಿಡಿಯೋ ತುಣುಕಿನಲ್ಲಿರುವ ಭಾಷಣದ ಅಂಶ ಇಷ್ಟು- ನಾನು ತುಂಬ ಸಂಪ್ರದಾಯವಾದಿ ಎಂದು ಅವರು ಹೇಳುತ್ತಿರುತ್ತಾರೆ. ನನ್ನ ಪತಿ ಮುಂದೆ ಹೋಗುತ್ತಿದ್ದರೆ ಅವರಿಂದ ಎರಡು ಹೆಜ್ಜೆ ಹಿಂದೆ ಇದ್ದುಕೊಂಡು ನಡೆಯುವುದು ನನ್ನಂಥ ಭಾರತೀಯ ನಾರಿ ಅನುಸರಿಸುವ ಕ್ರಮ. ಇದನ್ನು ಅವರು ಸಮಸ್ಯೆ ಎಂದು ಹೇಳಿದ್ದರು. ನಾನು ಅವರಿಗೆ ಹೇಳಿದೆ, ಅದು ಸಮಸ್ಯೆ ಅಲ್ಲ. ದೇವರು ಕೆಲವೊಂದನ್ನು ನಿಶ್ಚಯಿಸಿರುತ್ತಾನೆ. ಭಾರತೀಯ ನಾರಿಯಾಗಿ ನನಗೆ ಕೆಲವೊಂದು ಮೌಲ್ಯಗಳ ಬಗ್ಗೆ ನಂಬಿಕೆ ಇದೆ. ಒಂದೊಮ್ಮೆ ನನ್ನ ಪತಿ ಮುಂದೆ ನಡೆಯುವಾಗ ಮುಗ್ಗರಿಸಿದರೆ ಅವರಿಗೆ ಆಸರೆಯಾಗಲು ನನ್ನಿಂದ ಮಾತ್ರ ಸಾಧ್ಯ. ಹೀಗಾಗಿಯೇ ನನ್ನ ಪತಿಯ ನೆರಳಾಗಿ ನಾನಿರುತ್ತೇನೆ.
ಇದನ್ನು ವಿಡಿಯೋದಲ್ಲಿ ನೋಡಿದರೇ ಚೆಂದ...