ಮದ್ದೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಸಂಯಮಶೀಲ, ಸೃಜನಶೀಲ, ಸರಳಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಒಬ್ಬ ಬರಹಗಾರನಾಗಿ ನಾನು ಅವರನ್ನು ಹೆಚ್ಚು ಗೌರವದಿಂದ ಕಾಣುವಂತಹ ಅಪರೂಪದ ವ್ಯಕ್ತಿತ್ವ ಹೊಂದಿದ್ದರು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಗುಣಗಾನ ಮಾಡಿದರು.
ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಸಂಜೆ ಚುಂಚಶ್ರೀ ಗೆಳೆಯರ ಬಳಗ, ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ ಸೇರಿದಂತೆ ಹಲವು ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಎಸ್.ಎಂ.ಕೃಷ್ಣ ಅವರ ಜನ್ಮ ದಿನಾಚರಣೆ ಹಾಗೂ ಎಸ್.ಎಂ.ಕೃಷ್ಣ ಸಮಷ್ಟಿ ಹಿತಚಿಂತನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನಾನು ಈ ಪ್ರಶಸ್ತಿಗೆ ಎಷ್ಟು ಅರ್ಹನೋ ಗೊತ್ತಿಲ್ಲ ಆದರೆ ಎಸ್.ಎಂ.ಕೃಷ್ಣ ಅವರಂತಹವರ ಹೆಸರಿನಲ್ಲಿ ಪ್ರಶಸ್ತಿಯನ್ನು ಚುಂಚಶ್ರೀ ಬಳಗದವರ ಒತ್ತಾಸೆಯ ಮೇರೆಗೆ ಪಡೆಯುತ್ತಿರುವುದು ಸಂತಸ ತಂದಿದೆ ಎಂದರು.
ಎಸ್.ಎಂ.ಕೆ. ಅವರು ಅತ್ಯಂತ ಸಾಹಿತ್ಯಾಸಕ್ತರಾಗಿದ್ದರು, ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರನ್ನು ವಿರೋಧಿಸುತ್ತಿದ್ದವರನ್ನೂ ಕೂಡ ವಿನಯದಿಂದ ವಸ್ತುಸ್ಥಿತಿಯನ್ನು ಮನದಟ್ಟು ಮಾಡುವ ಶಕ್ತಿಯಿತ್ತು, ಅಷ್ಟೇ ವಿದ್ವತ್ತಿನಿಂದ ವಿಚಾರಧಾರೆಗಳಿದ್ದವು ಅವರ ಒಡನಾಟಗಳನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.
ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿಶ್ಚಲಾನಂದನಾಥಸ್ವಾಮಿ ಮಾತನಾಡಿ, ಎಸ್.ಎಂ.ಕೃಷ್ಣ ದಕ್ಷಿಣ ಭಾರತದವರು ಎನ್ನುವ ಕಾರಣಕ್ಕಾಗಿ ಪ್ರಧಾನಿ ಪಟ್ಟ ತಪ್ಪಿಸಿದರು ಎನ್ನುವ ನೋವು ನನ್ನನ್ನು ಕಾಡಿತ್ತು ಎಂದು ಬೇಸರ ವ್ಯಕ್ತಪಡಿಸಿದ ಅವರು, ಅವರ ಪ್ರತಿಮೆಯನ್ನು ವಿಧಾನ ಸೌಧದ ಮುಂದೆ ನಿರ್ಮಿಸುವಂತಾಗಬೇಕು ಆ ಮೂಲಕ ವಿಧಾನ ಸೌಧಕ್ಕೆ ಬರುವ ಯುವ ರಾಜಕಾರಣಿಗಳಿಗೆ ಒಂದು ಸ್ಫೂರ್ತಿ ಸಿಗಬೇಕು ಎಂದರು.
ಶಾಸಕ ಕೆ.ಎಂ.ಉದಯ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್.ಎಂ.ಕೃಷ್ಣ ರವರು ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಸೇರಿದಂತೆ ಹತ್ತಾರು ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿದ್ದವರು ಅಂತಹವರು ಪ್ರತಿನಿಧಿಸಿದ್ದ ಮದ್ದೂರು ಕ್ಷೇತ್ರದ ಶಾಸಕನಾಗಿರುವುದು ನನಗೆ ಹೆಮ್ಮೆಯ ಸಂಗತಿಯೆಂದರು.
ಮುಂದಿನ ದಿನಗಳಲ್ಲಿ ಮದ್ದೂರು ಪಟ್ಟಣದ ಪ್ರಮುಖ ವೃತ್ತಕ್ಕೆ ಎಸ್.ಎಂ.ಕೃಷ್ಣ ಹೆಸರು ನಾಮಕರಣ ಮಾಡುವುದು ಹಾಗೂ ಪುತ್ತಳಿಯನ್ನು ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಎಸ್.ಎಂ.ಕೃಷ್ಣ ಕುರಿತು ವಿಶೇಷ ಉಪನ್ಯಾಸ ಮಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಎಸ್.ಬಿ.ಶಂಕರೇಗೌಡ ಪ್ರಶಸ್ತಿ ಪುರಸ್ಕೃತರನ್ನು ಕುರಿತು ಭಾಷಣ ಮಾಡಿದರು.
ಚುಂಚಶ್ರೀ ಗೆಳೆಯರ ಬಳದ ಅಧ್ಯಕ್ಷ ಡಾ.ಬಿ.ಕೃಷ್ಣ, ವಿಧಾನ ಪರಿಷತ್ ಸದಸ್ಯ ದಿನೇಶ್‌ಗೂಳಿಗೌಡ, ಕರ್ನಾಟಕದ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ, ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಪ್ರಾಂಶುಪಾಲ ಕೆ.ಬಿ.ನಾರಾಯಣ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ಮರಿಗೌಡ, ಚುಂಚಶ್ರೀ ಗೆಳೆಯರ ಬಳಗ ಪ್ರಧಾನ ಕಾರ್ಯದರ್ಶಿ ವಿ.ಟಿ.ರವಿಕುಮಾರ್, ಉಪಾಧ್ಯಕ್ಷ ಸಿ.ಎಸ್.ಶಂಕರಯ್ಯ, ಶ್ರೀ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಪಿ.ಶಿವಪ್ಪ ಇದ್ದರು.