- ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ವಿವಾದಾತ್ಮಕ ನಿರ್ಧಾರ
- 15 ಗ್ರಾಮಗಳ ಸೊಸೆಯಂದಿರು ಮತ್ತು ಅವಿವಾಹಿತ ಹೆಣ್ಣುಮಕ್ಕಳು ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದು ನಿಷೇಧ
- ಈ ನಿಯಮ ಜನವರಿ 26ರಿಂದ ಜಾರಿಗೆ ಬರಲಿದೆ
ಜೋಧಪುರ್: ಸುಂದರಮಾತಾ ಪಟ್ಟಿ ಪಂಚಾಯತ್ಗೆ ಸೇರಿದ 15 ಗ್ರಾಮಗಳ ಸೊಸೆಯಂದಿರು ಮತ್ತು ಅವಿವಾಹಿತ ಹೆಣ್ಣುಮಕ್ಕಳು ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದನ್ನು ಸಂಪೂರ್ಣ ನಿಷೇಧಿಸಿದ್ದು, ಇದೀಗ ರಾಜಸ್ಥಾನದ ಜಾಲೋರ್ ಜಿಲ್ಲೆಯಲ್ಲಿ ವಿವಾದಾತ್ಮಕ ನಿರ್ಧಾರ ಕೈಗೊಳ್ಳಲಾಗಿದೆ.
ಈ ನಿಯಮ ಜನವರಿ 26ರಿಂದ ಜಾರಿಗೆ ಬರಲಿದೆ. ಗಾಝಿಪುರ ಗ್ರಾಮದಲ್ಲಿ ಡಿಸೆಂಬರ್ 22ರಂದು ನಡೆದ ಚೌಧರಿ ಸಮುದಾಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ಅಧ್ಯಕ್ಷತೆಯನ್ನು 14 ಪಟ್ಟಿಗಳ ಅಧ್ಯಕ್ಷ ಸುಜನರಾಮ ಚೌಧರಿ ವಹಿಸಿದ್ದರು ಎಂದು ವರದಿಯಾಗಿದೆ.
ನಿಷೇಧಿತ ಗ್ರಾಮಗಳು: ಗಾಝಿಪುರ, ಪಾವಲಿ, ಕಲ್ರಾ, ಮನೋಜಿಯಾ ವಾಸ್, ರಾಜಿಕವಾಸ್, ದತ್ಲಾವಾಸ್, ರಾಜಪುರಾ, ಕೋಡಿ, ಸಿದ್ರೋಡಿ, ಅಲ್ರಿ, ರೋಪ್ಸಿ, ಖಾನದೇವಲ, ಸವಿಧಾರ್, ಹಾಥ್ಮಿ ಕಿ ಧಾನಿ ಮತ್ತು ಖಾನಪುರ ಸೇರಿದಂತೆ 15 ಗ್ರಾಮಗಳು.
ನಿಷೇಧಕ್ಕೆ ಕಾರಣ..?
ಪಂಚಾಯತ್‌ನ ವಾದ: ಮನೆಯಲ್ಲಿ ಮಹಿಳೆಯರು ಸ್ಮಾರ್ಟ್‌ಫೋನ್ ಬಳಸಿದಾಗ ಮಕ್ಕಳು ಅವುಗಳನ್ನು ಹೆಚ್ಚು ಬಳಸಿ ಕಣ್ಣಿನ ಆರೋಗ್ಯ ಹಾಳಾಗುತ್ತದೆ. ಮಹಿಳೆಯರು ಮನೆಕೆಲಸ ಮಾಡುವಾಗ ಮಕ್ಕಳನ್ನು ಶಾಂತಗೊಳಿಸಲು ಫೋನ್ ನೀಡುತ್ತಾರೆ ಎಂಬುದು ಅವರ ಆತಂಕ. ಹೀಗಾಗಿ ಮಹಿಳೆಯರು ಕೇವಲ ಕರೆ ಮಾಡಲು ಕೀಪ್ಯಾಡ್ ಫೋನ್‌ಗಳನ್ನು ಮಾತ್ರ ಬಳಸಬೇಕು.
ಹೆಚ್ಚುವರಿ ನಿಯಮಗಳು: ಸ್ಮಾರ್ಟ್‌ಫೋನ್ ಬಳಕೆಯ ಜೊತೆಗೆ, ಮದುವೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಅಥವಾ ನೆರೆಮನೆಗೆ ಹೋಗುವಾಗ ಯಾವುದೇ ಫೋನ್ ಒಯ್ಯುವಂತಿಲ್ಲ. ಓದುತ್ತಿರುವ ಹುಡುಗಿಯರು ಮನೆಯಲ್ಲಿಯೇ ಫೋನ್ ಬಳಸಬಹುದು. ಆದರೆ, ಹೊರಗೆ ಒಯ್ಯುವಂತಿಲ್ಲ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಕೆಲವೆಡೆ ವಿರೋಧ!
ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಹಿಳಾ ಹಕ್ಕಗಳ ಕಾರ್ಯಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಇದು ಮಹಿಳೆಯರ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಟೀಕಿಸಿದ್ದಾರೆ. ಡಿಜಿಟಲ್ ಯುಗದಲ್ಲಿ ಮಹಿಳೆಯರನ್ನು ಹಿಂದೆ ಸೆಳೆಯುವ ನಿರ್ಧಾರ ಎಂದು ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾ ಆಡಳಿತ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ,(ಏಜೆನ್ಸೀಸ್).