ನ್ಯೂಸ್

ನೌಕಾ ಸಿಬ್ಬಂದಿಗೆ ಸ್ಮಾರ್ಟ್​ಫೋನ್ ಬ್ಯಾನ್; ಸೇನಾ ರಹಸ್ಯ ಸೋರಿಕೆ ತಡೆಗೆ ಮುನ್ನೆಚ್ಚರಿಕೆ

ನವದೆಹಲಿ: ನೌಕಾಪಡೆಯ ಏಳು ಅಧಿಕಾರಿಗಳು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸಿದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ನೌಕಾಪಡೆ ಭದ್ರತಾ ವ್ಯವಸ್ಥೆ ಬಿಗಿಗೊಳಿಸಿದೆ.

ನೌಕಾದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಫೇಸ್​ಬುಕ್ ಜಾಲತಾಣ ಬಳಸಕೂಡದು. ನೌಕಾ ನೆಲೆಗಳು, ಡಾಕ್​ಯಾರ್ಡ್ ಮತ್ತು ಯುದ್ಧ ಹಡಗುಗಳಿಗೆ ಸ್ಮಾರ್ಟ್​ಫೋನ್​ಗಳನ್ನು ಒಯ್ಯುವಂತಿಲ್ಲ ಎಂಬ ಹೊಸ ನಿಯಮ ಜಾರಿಗೊಳಿಸಲಾಗಿದೆ.

ಸ್ಮಾರ್ಟ್​ಫೋನ್, ಫೇಸ್​ಬುಕ್ ಮೂಲಕ ನೌಕಾನೆಲೆ ಹಾಗೂ ಯುದ್ಧ ಹಡಗುಗಳ ರಹಸ್ಯ ಮಾಹಿತಿಗಳನ್ನು ಶತ್ರುಪಡೆಗೆ ರವಾನಿಸುವ ಸಾಧ್ಯತೆ ಇರುವುದರಿಂದ ಈ ಕ್ರಮ ಜರುಗಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಕೂಡ ಅನೇಕ ಬಾರಿ ನೌಕಾಪಡೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಾಮಾಜಿಕ ಜಾಲತಾಣ ಬಳಕೆಯ ಮೇಲೆ ನಿರ್ಬಂಧ ವಿಧಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಭಾರತದ ಸೇನಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದ ಪಾಕಿಸ್ತಾನದ ಗೂಢಚರ್ಯ ಜಾಲವನ್ನು ಕಳೆದ ಡಿ. 20ರಂದು ಆಂಧ್ರಪ್ರದೇಶ ಪೊಲೀಸರು ಬೇಧಿಸಿದ್ದರು. ಪಾಕ್ ಸಂಪರ್ಕ ಹೊಂದಿದ್ದ ನೌಕಾಪಡೆಯ ಏಳು ಹಾಗೂ ಅವರಿಗೆ ಹವಾಲಾ ಮೂಲಕ ಹಣ ನೀಡುತ್ತಿದ್ದ ಒಬ್ಬನನ್ನು ‘ಆಪರೇಷನ್ ಡಾಲ್ಪಿನ್ ನೋಸ್’ಎಂಬ ಕಾರ್ಯಾಚರಣೆಯಲ್ಲಿ ಬಂಧಿಸಿದ್ದರು. ಅದರಲ್ಲಿ ವಿಶಾಖಪಟ್ಟಣ ನೌಕಾನೆಲೆಯ ಮೂವರು, ಮುಂಬೈ ನೌಕಾನೆಲೆಯ ಇಬ್ಬರು, ಕಾರವಾರ ನೆಲೆಯಲ್ಲಿರುವ ಐಎನ್​ಎಸ್ ವಿಕ್ರಮಾದಿತ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುಣೆಯ ವಿಕಾಸ ಮತ್ತು ಐಎನ್​ಎಸ್ ಮೈಸೂರು ನೌಕೆಯ ಸೋಮನಾಥ್​ರನ್ನು ಬಂಧಿಸಲಾಗಿತ್ತು.

ವಲಯಗಳೇ ಜವಾಬ್ದಾರಿ

ಕಾರವಾರ: ಗುಪ್ತ ಮಾಹಿತಿಗಳು ಶತ್ರು ದೇಶಗಳಿಗೆ ರವಾನೆಯಾದರೆ ಪಶ್ಚಿಮ ಹಾಗೂ ಪೂರ್ವ ನೌಕಾ ವಲಯಗಳೇ ಜವಾಬ್ದಾರಿ ಎಂದು ರಕ್ಷಣಾ ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ ಎನ್ನಲಾಗಿದೆ. ರಕ್ಷಣಾ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ನೌಕಾಸೇನೆಯ ನೌಕೆಯಲ್ಲಿ ಕಾರ್ಯ ನಿರ್ವಹಿಸುವ ಸೇಲರ್​ಗಳು ಹಾಗೂ ಡಾಕ್ ಯಾರ್ಡ್​ನಲ್ಲಿ ಕಾರ್ಯನಿರ್ವಹಿಸುವ ಯಾವುದೇ ಅಧಿಕಾರಿ, ಸಿಬ್ಬಂದಿ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಸ್ಮಾರ್ಟ್ ಫೋನ್ ಬಳಸಬಾರದು ಎಂದು ಎಚ್ಚರಿಸಿದೆ. ಈ ಸಂಬಂಧ ಇದುವರೆಗೂ ಅಧಿಕೃತ ಪತ್ರ ಬಂದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕಾರವಾರ ನೌಕಾನೆಲೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಜಯ ಕಪೂರ್ ವಿಜಯವಾಣಿಗೆ ತಿಳಿಸಿದ್ದಾರೆ.