ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ಹೊಸ, ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಅಳವಡಿಸುವ ಸ್ಮಾರ್ಟ್ ಮೀಟರ್ ದರ, ಟೆಂಡರ್ ಪ್ರಕ್ರಿಯೆ, ಗುತ್ತಿಗೆ ಎಲ್ಲವೂ ನಿಯಮಬದ್ಧವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸಮಜಾಯಿಷಿ ನೀಡಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್‌ನ ಮೊತ್ತವೇ 998 ಕೋಟಿ ರೂ.ಗಳಾಗಿರುವಾಗ 15 ಸಾವಿರ ಕೋಟಿ ರೂ.ಗಳ ಹಗರಣ ಎಲ್ಲಿಂದ ಬಂತು ? ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕೆ ಆರೋಪಿಸಿದ್ದಾರೆ ಎಂದರು.
ತಾಂತ್ರಿಕ, ಆಡಳಿತಾತ್ಮಕ ಜತೆಗೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿರುವುದನ್ನು ಸದನದಲ್ಲಿ ಉತ್ತರ ನೀಡಲು ಸಜ್ಜಾಗಿದ್ದೆ. ಆದರೆ ಬಜೆಟ್‌ಗೆ ಸಿಎಂ ಉತ್ತರಿಸುವ ಮುನ್ನ ಶುರುವಾದ ಪ್ರತಿಪಕ್ಷಗಳ ಗದ್ದಲ ನಂತರವೂ ಮುಂದುವರಿದು ನನಗೆ ಉತ್ತರ ನೀಡಲು ಅವಕಾಶ ಸಿಗಲಿಲ್ಲ.
ಯಾವುದೇ ಲೋಪದೋಷಗಳಾಗಿಲ್ಲ, ದರವೂ ವೈಜ್ಞಾನಿಕವಾಗಿದೆ ಎಂದು ಇಲಾಖೆ ಅಧಿಕಾರಿಗಳು ಈಗಾಗಲೇ ಮಾಹಿತಿ ನೀಡಿದ್ದಾರೆ. ನಾನು ಕೂಡ ಅದನ್ನೇ ಹೇಳುತ್ತಿರುವೆ, ದಾಖಲೆಗಳ ಸಹಿತ ನಿರ್ದಿಷ್ಟ ಲೋಪ ಎತ್ತಿ ತೋರಿಸಿದರೆ ವಿಚಾರಣೆ ನಡೆಸಲೂ ಸಿದ್ಧವೆಂದು ಕೆ.ಜೆ.ಜಾರ್ಜ್ ಹೇಳಿದರು.
ಕೆಇಆರ್‌ಸಿ ನಿರ್ದೇಶನದಂತೆ ಸ್ಮಾರ್ಟ್ ಮೀಟರ್ ಅಳವಡಿಸಲು ನಿರ್ಧರಿಸಿದ್ದೇವೆ. ಈ ವಿಷಯದಲ್ಲಿ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಮಧ್ಯದ ಸಾಲುಗಳನ್ನು ಎತ್ತಿ ತೋರಿಸಿ, ಕೆಇಆರ್‌ಸಿ ಕಡ್ಡಾಯ ಮಾಡಿಲ್ಲ, ಗ್ರಾಹಕರಿಗೆ ಐಚ್ಛಿಕ ಎಂದಿರುವುದು ಸರಿಯಲ್ಲ ಎಂದರು.
ಹೊಸ ಸಂಪರ್ಕಗಳಿಗೆ ಸ್ಮಾರ್ಟ್ ಮೀಟರ್ ಪೂರ್ವ ಪಾವತಿ ಅಥವಾ ನಂತರ ಪಾವತಿ ಐಚ್ಛಿಕ ಎಂದು ಕೆಇಆರ್‌ಸಿ ತಿಳಿಸಿದೆಯೇ ಸ್ಮಾರ್ಟ್ ಮೀಟರ್ ಅಳವಡಿಕೆಯೇ ಐಚ್ಛಿಕ ಎಂದಿಲ್ಲ. ಜತೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕಗಳಿಗೆ ಪೂರ್ವಪಾವತಿ ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯ ಎಂದಿದೆ.
ಗುತ್ತಿಗೆ ಪಡೆದ ಕಂಪನಿಯು ಉತ್ತರಪ್ರದೇಶದಲ್ಲಿ ಕಪ್ಪು ಪಟ್ಟಿಯಲ್ಲಿದ್ದಿಲ್ಲ, ಎರಡು ವರ್ಷ ನಿರ್ಬಂಧ ವಿಧಿಸಿತ್ತು. ಈ ಅವಧಿ ಮುಗಿದ ನಂತರ ಕಂಪನಿಗೆ ರಾಜ್ಯದಲ್ಲಿ ಗುತ್ತಿಗೆ ನೀಡಲಾಗಿದೆ ಎಂದು ಕೆ.ಜೆ.ಜಾರ್ಜ್ ವಿವರಣೆ ನೀಡಿದರು.