ಶಿವಮೊಗ್ಗ: ಸ್ಮಾರ್ಟ್‌ಸಿಟಿ ಯೋಜನೆಯಲ್ಲಿನ ಕಾಮಗಾರಿಗಳ ಲೋಪದೋಷ ಕುರಿತು ಇದುವರೆಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ 1,135 ದೂರು ದಾಖಲಾಗಿವೆ. ಅದರಲ್ಲಿ 1,120 ದೂರುಗಳ ಪರಿಶೀಲನೆ ನಡೆಸಲಾಗಿದೆ. ಇನ್ನು 15 ದೂರುಗಳ ಪರಿಶೀಲನೆ ಮಾತ್ರ ಬಾಕಿ ಇದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಟಾರೆ ಹೇಳಿದರು.
ದೂರುಗಳ ಪರಿಶೀಲನೆ ನಡೆಸಿದ ಬಳಿಕ ಲೋಪ ಕಂಡುಬಂದ ಕಡೆ ಗುತ್ತಿಗೆದಾರರಿಗೆ 1.12 ಕೋಟಿ ರೂ. ದಂಡವನ್ನೂ ವಿಧಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಇದುವರೆಗೆ 47 ಕಾಮಗಾರಿಗಳು ಪೂರ್ಣಗೊಂಡಿದ್ದು ಯಾವುದೇ ಕಾಮಗಾರಿಗಳು ಇನ್ನೂ ಗುತ್ತಿಗೆದಾರರಿಂದ ಸ್ಮಾರ್ಟ್‌ಸಿಟಿ ಲಿಮಿಟೆಡ್‌ಗೆ ಹಸ್ತಾಂತರಗೊಂಡಿಲ್ಲ. ಕೆಲವರು ಕಳಪೆ ಕಾಮಗಾರಿಗಳ ಬಗ್ಗೆ ದೂರು, ಪ್ರತಿಭಟನೆಗಳನ್ನೂ ನಡೆಸುತ್ತಿದ್ದಾರೆ. ಆದರೆ ಖುದ್ದಾಗಿ ನಾನೇ ಹಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿಗಳು ಹಸ್ತಾಂತರಗೊಳ್ಳದೆ ಸ್ಮಾರ್ಟ್‌ಸಿಟಿ ಬಗ್ಗೆ ದೂಷಿಸುವುದು ಸರಿಯಲ್ಲ. ಕಳಪೆ ಕಾಮಗಾರಿ ಬಗ್ಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ದಂಡವನ್ನೂ ವಿಧಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಶೇ.79 ಸ್ಮಾರ್ಟ್‌ಸಿಟಿ ಕಾಮಗಾರಿ ಭೌತಿಕ ಪ್ರಗತಿಯಾಗಿದೆ. ಶೇ.72.19 ಆರ್ಥಿಕ ಪ್ರಗತಿ ಸಾಧಿಸಲಾಗಿದೆ. 71ರಲ್ಲಿ 47 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದ್ದು 24 ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ. ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯೋಜನೆ ಅವಧಿಯನ್ನು 2023ರ ಜೂನ್‌ವರೆಗೆ ವಿಸ್ತರಿಸಿದೆ. ಹಾಗಾಗಿ ಪೂರ್ಣಗೊಂಡಿರುವ ಎಲ್ಲ ಕಾಮಗಾರಿಗಳ ನಿರ್ವಹಣೆ ಅವಧಿ ಬಾಕಿ ಇರುವುದರಿಂದ ಹಸ್ತಾಂತರ ಮಾಡಿಕೊಂಡಿಲ್ಲ. ನಿರ್ವಹಣೆ ಅವಧಿ ಬಳಿಕ ಎಲ್ಲ ಕಾಮಗಾರಿಗಳನ್ನು ಸ್ಮಾರ್ಟ್‌ಸಿಟಿಗೆ ಹಸ್ತಾಂತರ ಮಾಡಿಕೊಳ್ಳಲಾಗುವುದು ಎಂದರು.