ನ್ಯೂಸ್

ಸಣ್ಣ ಕೈಗಾರಿಕೆ ದೊಡ್ಡ ಯೋಜನೆ

theerthaswamy
ಸಣ ಕೈಗಾರಿಕೆಗಳಿಗೆ ರಾಜ್ಯ ಸರ್ಕಾರದಿಂದ ಸಿಗುವ ಸವಲತ್ತು ಗಳು, ಟೌನ್​ಶಿಪ್ ಸ್ಥಾಪನೆ, ಖಾದಿ ಉತ್ಪನ್ನಗಳಿಗೆ ಫ್ಯಾಷನ್ ಸ್ಪರ್ಶ, ಇಲಾಖೆಯ ಪ್ರಗತಿ -ಇತ್ಯಾದಿ ವಿಚಾರಗಳ ಕುರಿತು ಸಣ್ಣ ಕೈಗಾರಿಕಾ ಸಚಿವ ಎನ್. ನಾಗರಾಜ್ (ಎಂಟಿಬಿ) ಅವರು ವಿಜಯವಾಣಿ ಸಂವಾದದಲ್ಲಿ ವಿವರಿಸಿದ್ದಾರೆ. ಸಣ್ಣ ಕೈಗಾರಿಕೆಗಳ ದಿನದ ಹಿನ್ನೆಲೆಯಲ್ಲಿ ಈ ಸಂವಾದ ಆಯೋಜಿಸಲಾಗಿತ್ತು.

ಸಣ್ಣ ಕೈಗಾರಿಕಾ ರಂಗಕ್ಕೆ ಹೊಸ ಸ್ಪರ್ಶ ನೀಡಲು ಖಾಸಗಿ ಸಹಭಾಗಿತ್ವದಲ್ಲಿ ಸಣ್ಣ ಕೈಗಾರಿಕೆ ಪ್ರಾಂಗಣ ಸ್ಥಾಪನೆ ಮಾಡಲಾಗುತ್ತದೆ. ಈ ಮಾದರಿಯನ್ನು ಮೊದಲು ಕೋಲಾರ, ತುಮಕೂರು ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುತ್ತದೆ. ಬಳಿಕ ಅದರ ಯಶಸ್ಸು ನೋಡಿಕೊಂಡು ಬೇರೆ ಜಿಲ್ಲೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಈ ಪ್ರಾಂಗಣದಲ್ಲಿ ಗರಿಷ್ಠ 20 ಸಾವಿರ ಚದರಡಿಯ ಪ್ಲಾಟ್, 10 ಸಾವಿರ, 5 ಸಾವಿರ ಮತ್ತು 3 ಸಾವಿರ ಚದರಡಿಯ ಪ್ರಾಂಗಣಗಳು ಲಭ್ಯವಾಗಲಿವೆ. ಹಾಗೆಯೇ, ನಿಗಮದ ಕೆಲ ಜಾಗಗಳಿದ್ದು ಅಲ್ಲಿಯೂ ಸಣ್ಣಮಟ್ಟದ ಕೈಗಾರಿಕಾ ಪ್ರಾಂಗಣ ಮಾಡಲಾಗುತ್ತದೆ. ಸದ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಭಿವೃದ್ಧಿಪಡಿಸುವ ಕಡೆಗಳಲ್ಲಿ ಒಂದಷ್ಟು ಪ್ರಮಾಣದಲ್ಲಿ ಸಣ್ಣ ಕೈಗಾರಿಕೆಗಳಿಗೆ ಮೀಸಲಾಗಿರುತ್ತದೆ. ಈ ಎರಡು ಪ್ರಯತ್ನದಿಂದ ಸಣ್ಣ ಕೈಗಾರಿಕಾ ಇಲಾಖೆಯೇ ಸ್ವತಂತ್ರವಾಗಿ ಕೈಗಾರಿಕೆ ಪ್ರಾಂಗಣ ಅಭಿವೃದ್ಧಿಪಡಿಸಲಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎನ್. ನಾಗರಾಜ್ (ಎಂಟಿಬಿ) ತಿಳಿಸಿದರು.

ಖಾದ್ಯ ತೈಲ ಉದ್ದಿಮೆ ಪುನಶ್ಚೇತನಕ್ಕೆ ಯತ್ನ: ರಾಜ್ಯದ ಚಳ್ಳಕೆರೆಯು ಖಾದ್ಯ ತೈಲ ಉತ್ಪಾದನೆಯಲ್ಲಿ ದೊಡ್ಡ ಹೆಸರು ಮಾಡಿತ್ತು. ಕಾಲಾನಂತರದಲ್ಲಿ ಮತ್ತು ದೊಡ್ಡ ಉದ್ಯಮಗಳ ಪೈಪೋಟಿಯಿಂದ ಸಣ್ಣ ಉದ್ದಿಮೆಗಳು ನೆಲಕಚ್ಚಿದವು. ಸಣ್ಣ ಕೈಗಾರಿಕೆ ಇಲಾಖೆಯು ಈ ಕ್ಷೇತ್ರದ ಪುನರುತ್ಥಾನಕ್ಕೆ ಮುಂದಾಗಿದೆ. ಈ ಕ್ಷೇತ್ರದವರ ಜತೆ ಎರಡು ಸಭೆಗಳನ್ನು ನಡೆಸಿದ್ದು, ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದರು.

ಸಣ್ಣ ಕೈಗಾರಿಕೆ ವಲಯ ಬೆಳೆಯುವ ವಿಪುಲ ಅವಕಾಶಗಳಿದ್ದು, ಉದ್ಯೋಗ ಸೃಜನೆ ನೆಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪಿಎಂಇಜಿಪಿ ಹಾಗೂ ಕೈಗಾರಿಕೆ ನೀತಿ ಸಹಕಾರಿಯಾಗಿದೆ.| ಎನ್. ನಾಗರಾಜ್ (ಎಂಟಿಬಿ)ಸಣ್ಣ ಕೈಗಾರಿಕೆ ಸಚಿವಖಾದಿ ಖರೀದಿ ಅಭಿಯಾನ: ಖಾದಿ ಜಾಗೃತಿ ಅಭಿಯಾನದ ಭಾಗವಾಗಿ ಅ.2ರಂದು ಸರ್ಕಾರಿ ನೌಕರರೆಲ್ಲರೂ ಖಾದಿ ಉಡುಪು ಧರಿಸುವಂತೆ ತಿಳಿಸಲಾಗುವುದು. ಕಳೆದ ಬಾರಿ ಮುಖ್ಯಮಂತ್ರಿ ಆದಿಯಾಗಿ ಜನಪ್ರತಿನಿಧಿಗಳು ಖಾದಿ ಉತ್ಪನ್ನಗಳನ್ನು ಖರೀದಿಸಿದ್ದರಿಂದ ಒಂದೇ ದಿನ 2.40 ಕೋಟಿ ರೂ. ವಹಿವಾಟು ನಡೆದಿತ್ತು ಎಂದರು.

3ನೇ ಸ್ಥಾನದಲ್ಲಿ ರಾಜ್ಯ: ರಾಷ್ಟ್ರದ ಎಂಎಸ್​ಎಂಇ ನೋಂದಣಿ ಪ್ರಕಾರ ಕರ್ನಾಟಕದಲ್ಲಿ 5,91,758 ಎಂಎಸ್​ಎಂಇಗಳು ನೋಂದಣಿಯಾಗಿದ್ದು, 3ನೇ ಸ್ಥಾನದಲ್ಲಿದೆ. ಹಾಗೆಯೇ, ರಫ್ತಿನಲ್ಲಿ ರಾಜ್ಯದ ಪ್ರಮಾಣ ಶೇ. 19ರಷ್ಟಿದೆ ಎಂದು ಸಚಿವ ಎಂಟಿಬಿ ತಿಳಿಸಿದರು. 2021-22ನೇ ಸಾಲಿನಲ್ಲಿ 1,27,718 ಡಾಲರ್ ಮೌಲ್ಯದ ಉತ್ಪನ್ನ ರಫ್ತು ಮಾಡಲಾಗಿದೆ. ಪ್ರಮುಖ ರಫ್ತು ಉತ್ಪನ್ನಗಳೆಂದರೆ ಐಟಿ ಸೇವೆ, ಇಂಜಿನಿಯರಿಂಗ್, ಪೆಟ್ರೋಲಿಯಂ, ಸಿದ್ಧ ಉಡುಪು, ಆಹಾರ ಪದಾರ್ಥಗಳು ಇವೆ.

ಖಾದಿ ಉತ್ಪನ್ನಗಳಿಗೆ ಫ್ಯಾಷನ್ ಟಚ್: ಯುವ ಪೀಳಿಗೆಯ ಅಪೇಕ್ಷೆ, ನಿರೀಕ್ಷೆಗೆ ತಕ್ಕಹಾಗೆ ಖಾದಿ ಉತ್ಪನ್ನಗಳ ವಿನ್ಯಾಸ ರೂಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಗೆ ಜವಾಬ್ದಾರಿ ನೀಡಲಾಗಿದ್ದು, ಇದಕ್ಕಾಗಿ 1.5 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹೊಸ ವಿನ್ಯಾಸ ರೂಪಿಸಿದ ನಂತರ ಖಾದಿ ಉತ್ಪನ್ನ ಗಳನ್ನು ತಯಾರಿಸುವವರಿಗೆ ಸೂಕ್ತ ತರಬೇತಿ ನೀಡುವುದಕ್ಕಾಗಿ ಫ್ಲಿಪ್​ಕಾರ್ಟ್ ಜತೆ ಒಡಂಬಡಿಕೆ ಮಾಡಿಕೊಳ್ಳ ಲಾಗುತ್ತದೆ. ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಒಳ್ಳೆಯ ಸ್ಪಂದನೆ ಇದ್ದು, ಕರೊನಾ ಪೂರ್ವದಲ್ಲಿ ಆಯೋಜಿಸಿದ್ದ ಪ್ರದರ್ಶನದಲ್ಲಿ 50 ಕೋಟಿ ರೂ. ವಹಿವಾಟು ನಡೆದಿತ್ತು, ಈಗ ಪುನಃ ಇಂಥದ್ದೇ ಮೇಳ ಆಯೋಜಿಸಲಾಗುತ್ತಿದೆ.

ಅನ್ಯ ಉದ್ದೇಶಕ್ಕೆ ನಿವೇಶನ ಬಳಕೆಗೆ ಕಡಿವಾಣ: ಸಣ್ಣ ಕೈಗಾರಿಕೆ ಸ್ಥಾಪನೆಗಾಗಿ ಹಂಚಿಕೆ ಮಾಡಿ 10 ವರ್ಷ ಕಳೆದರೂ ಕೈಗಾರಿಕೆ ಸ್ಥಾಪನೆ ಮಾಡದವರ ವಿರುದ್ಧ ಕೆಎಸ್​ಎಸ್​ಐಡಿಸಿ ನೋಟಿಸ್ ಜಾರಿ ಮಾಡಿತ್ತು, ಅನ್ಯ ಉದ್ದೇಶಕ್ಕೆ ನಿವೇಶನ ಬಳಕೆಗೆ ಅವಕಾಶ ಕೊಡುವುದಿಲ್ಲ ಎಂಬ ಎಚ್ಚರಿಕೆ ನೀಡ ಲಾಗಿದೆ. ಇಂತಹ ಒಟ್ಟು 2500 ಪ್ರಕರಣ ಗುರುತಿಸಿ ನೋಟಿಸ್ ನೀಡಿದಾಗ 1,800 ಮಂದಿ ಕೈಗಾರಿಕೆ ಸ್ಥಾಪನೆಗೆ ಮುಂದೆ ಬಂದಿದ್ದು, ನೋಟಿಸ್ ಕೈಬಿಡುವಂತೆ ಮನವಿ ಮಾಡಿದ್ದಾರೆ. ಉಳಿದ 700 ಪ್ರಕರಣಗಳಲ್ಲಿ ಡಿಸೆಂಬರ್ ವರೆಗೆ ಗಡುವು ನೀಡಲಾಗಿದೆ. ಕೈಗಾರಿಕೆ ಸ್ಥಾಪನೆ ಮಾಡದಿದ್ದರೆ ನಿವೇಶನ ವಾಪಸ್ ಪಡೆದು ಆಸಕ್ತರಿಗೆ ಮರುಹಂಚಿಕೆ ಮಾಡಲಾಗುತ್ತದೆ ಎಂದರು.

ನಿಗಮದ್ದೇ ಪೀಠೋಪಕರಣ!: ಕರಕುಶಲ ಅಭಿವೃದ್ಧಿ ನಿಗಮದ ಪೀಠೋಪಕರಣದ ಗುಣಮಟ್ಟ ಉತ್ತಮವಾಗಿದ್ದು, ಬೇಡಿಕೆಯೂ ಇದೆ. ಸರ್ಕಾರಿ ಕಚೇರಿಗಳಲ್ಲಿ ಪೀಠೋಪಕರಣ ಖರೀದಿಸುವಾಗ ಶೇ. 25ರಷ್ಟನ್ನು ನಿಗಮದಿಂದಲೇ ಕಡ್ಡಾಯವಾಗಿ ಖರೀದಿ ಮಾಡಬೇಕೆಂಬ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಮುಂದಿಡ ಲಾಗಿದೆ. ಹೀಗೆ ಮಾಡುವುದರಿಂದ ನಮ್ಮ ನಾಡಿನ ಪರಂಪರೆ, ಕಲೆ ಬೆಳೆಸಿದಂತಾಗುತ್ತದೆ. ಕರಕುಶಲ ಕಾರ್ವಿುಕರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸಚಿವರು ತಿಳಿಸಿದರು.

ರೈತರು-ಉದ್ಯಮಿಗಳ ನೇರ ಮಾತುಕತೆ: ಭೂ ಕಂದಾಯ ಕಾಯ್ದೆ ಕಲಂ 79ಎ ಮತ್ತು ಬಿ ರದ್ದುಪಡಿಸಿದ ನಂತರ ಜಮೀನಿನ ಬೆಲೆ ಗಗನಕ್ಕೇರಿದ್ದು, ಬಂಡವಾಳ ಹೂಡಿ ಕೈಗಾರಿಕೆ ಸ್ಥಾಪಿಸಲು ಇಚ್ಛಿಸಿದವರು ನೇರವಾಗಿ ರೈತರ ಜತೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ದೇವನಹಳ್ಳಿ ರೈತರ ಪ್ರತಿಭಟನೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆಸಕ್ತರ ಜತೆ ಮಾತ್ರ ಭೂ ಖರೀದಿ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಅವರ ಬೇಡಿಕೆಯನುಸಾರ ಮಾರುಕಟ್ಟೆ ದರಕ್ಕಿಂತ 2-3 ಪಟ್ಟು ಹೆಚ್ಚು ದರ ನೀಡುವುದು ಮತ್ತು ಭೂಮಿ ಕಳೆದುಕೊಳ್ಳುವವರ ಕುಟುಂಬಕ್ಕೆ ವಿದ್ಯಾರ್ಹತೆ ಅನುಸಾರ ಒಂದು ಉದ್ಯೋಗ ನೀಡುವುದಕ್ಕೂ ಸರ್ಕಾರ ಒಪ್ಪಿದೆ ಎಂದರು.

ಪುನಶ್ಚೇತನಕ್ಕೆ ಸರ್ವೆ: ಸಣ ್ಣೈಗಾರಿಕಾ ಇಲಾಖೆಯು ರಾಜ್ಯದಲ್ಲಿ ಸಣ್ಣ ಕೈಗಾರಿಕೆಗಳ ಸ್ಥಿತಿಗತಿ ತಿಳಿಯಲೆಂದು ಸಮಗ್ರ ಸಮೀಕ್ಷೆ ಕೈಗೆತ್ತಿಕೊಳ್ಳಲಿದೆ. ಕರೊನಾ ಅವಧಿಯಲ್ಲಿ ಬಹಳಷ್ಟು ಸಣ್ಣ ಕೈಗಾರಿಕೆಗಳು ಮುಚ್ಚಿವೆ, ಉದ್ಯೋಗ ನಷ್ಟವಾಗಿವೆ ಎಂಬ ಧ್ವನಿ ಎದ್ದಿದೆ. ವಿಧಾನ ಮಂಡಲ ಅಧಿವೇಶನದಲ್ಲೂ ಪ್ರಸ್ತಾಪವಾಗಿದ್ದು, ವಾಸ್ತವಾಂಶ ತಿಳಿದುಕೊಳ್ಳುವ ಸಲುವಾಗಿ ಆನ್​ಲೈನ್ ಸರ್ವೆ ನಡೆಸಲಾಗುತ್ತಿದೆ ಎಂದರು. ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್​ಗೆ ಸರ್ವೆ ಜವಾಬ್ದಾರಿ ನೀಡಿದ್ದು, ಒಂಬತ್ತು ತಿಂಗಳಲ್ಲಿ ವರದಿ ಕೈಸೇರಲಿದೆ. ನಂತರ ವಾಸ್ತವಾಂಶದ ಆಧಾರದಲ್ಲಿ ಈ ಕ್ಷೇತ್ರದ ಪುನಶ್ಚೇತನಕ್ಕೆ ಅಗತ್ಯ ಕ್ರಮಕೈಗೊಳ್ಳುವ ಉದ್ದೇಶವಿದೆ ಎಂದು ಸಚಿವ ಎಂಟಿಬಿ ಹೇಳಿದರು. ಕರೊನಾದಿಂದಾಗಿ, ರಾಜ್ಯದ ಅರ್ಥ ವ್ಯವಸ್ಥೆಗೆ ಕೈಗಾರಿಕೆಗಳಿಂದ ಆದಾಯದ ಪಾಲು ಇಳಿಮುಖವಾಗಿರುವುದು ಸರ್ಕಾರದ ಗಮನಕ್ಕಿದೆ. ಸಣ್ಣ ಕೈಗಾರಿಕೆಗಳು ಮುಚ್ಚಿದ್ದಕ್ಕೆ ಕರೊನಾದ ಜತೆಗೆ ರೋಗದಿಂದ ಭೀತರಾಗಿ ವಲಸೆ ಕಾರ್ವಿುಕರು ತಾಯ್ನಾಡಿಗೆ ಮರಳಿರುವುದೂ ಒಂದು ಕಾರಣ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ವಲಸೆ ಕಾರ್ವಿುಕರು ಪುನಃ ಕೆಲಸಕ್ಕೆ ಮರಳಲು ಆರಂಭಿಸಿದ್ದು, ಶೇ.75ರಷ್ಟು ವಾಪಸಾಗಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರ ಘೋಷಿಸಿರುವ ಆತ್ಮನಿರ್ಭರ ಭಾರತ ಅಭಿಯಾನದಡಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡಲು ತುರ್ತು ಕ್ರೆಡಿಟ್ ಲೈನ್ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಪ್ರಕಾರ 2020ರ ಫೆಬ್ರವರಿ ಅಂತ್ಯಕ್ಕೆ ಬ್ಯಾಂಕ್​ಗಳಲ್ಲಿ ಬಾಕಿ ಇರುವ ಎಂಎಸ್​ಎಂಇ ಘಟಕಗಳ ಸಾಲದ ಮೊತ್ತಕ್ಕೆ ಶೇ. 20 ಹೆಚ್ಚುವರಿ ಸಾಲ ವನ್ನು ಯಾವುದೇ ಖಾತ್ರಿ ಇಲ್ಲದೇ ನೀಡಲಾಗುತ್ತಿದೆ ಎಂದರು.

ಮೂರು ಟೌನ್​ಶಿಪ್​ಗೆ ಪ್ರಸ್ತಾವನೆ: ಎಲೆಕ್ಟ್ರಾನಿಕ್ ಸಿಟಿ ಅಥಾರಿಟಿ ಮಾದರಿಯಲ್ಲಿ ಪೀಣ್ಯ ಕೈಗಾರಿಕಾ ಪ್ರಾಧಿಕಾರ ರಚಿಸುವ ಉದ್ದೇಶವಿದೆ. ಮೈಸೂರಿನ ಹೆಬ್ಬಾಳ, ಧಾರವಾಡದ ತಾರಿಹಾಳದಲ್ಲಿ ಪ್ರಾಧಿಕಾರ ರಚನೆ ಸಂಬಂಧ ಪ್ರಸ್ತಾವನೆ ಕಳಿಸಲಾಗಿದೆ. ಟೌನ್​ಶಿಪ್ ರಚನೆಯಾದರೆ ಆ ವ್ಯಾಪ್ತಿಯ ಸಮಿತಿ ರಚನೆಯಾಗಲಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲ ಸವಲತ್ತು ಅಭಿವೃದ್ಧಿಗಾಗಿ 100 ಕೋಟಿ ರೂ. ಮಂಜೂರಾಗಿದ್ದು, ಕ್ರಿಯಾಯೋಜನೆ ಸಿದ್ಧವಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗೆ ಚಾಲನೆ ನೀಡಲಾಗುವುದು.

ಉದ್ಯಮಿಯಾಗು, ಉದ್ಯೋಗ ನೀಡು: ಬೃಹತ್ ಕೈಗಾರಿಕೆ ಇಲಾಖೆ ಸಹಯೋಗದಲ್ಲಿ ಕೈಗೊಂಡಿರುವ ‘ಉದ್ಯಮಿಯಾಗು ಉದ್ಯೋಗ ನೀಡು’ ಪರಿಕಲ್ಪನೆಗೆ ಉತ್ತಮ ಒಲವು ವ್ಯಕ್ತವಾಗಿದೆ. ವಿದ್ಯುತ್ ತೆರಿಗೆ ವಿನಾಯಿತಿ, ಕಡಿಮೆ ಬಡ್ಡಿ ದರದ ಸಾಲ ಸೇರಿ 16 ಸೌಲಭ್ಯ ನೀಡಲಾಗುತ್ತಿದ್ದು, ಏಕಗವಾಕ್ಷಿಯಡಿ ಜಿಲ್ಲಾಧಿಕಾರಿ ಸಮಿತಿ, ಸಿಎಂ ಅಧ್ಯಕ್ಷತೆಯ ರಾಜ್ಯ ಸಮಿತಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದ ಬೆನ್ನಲ್ಲೇ ಕೈಗಾರಿಕೆ ಸ್ಥಾಪಿಸಬಹುದಾಗಿದ್ದು ಮುಂದಿನ 3 ವರ್ಷದೊಳಗೆ ಅನುಮತಿ ಪಡೆಯಲು ಅವಕಾಶವಿದೆ ಎಂದರು.

ಸವಲತ್ತು ಸಲೀಸು: ಕೈಗಾರಿಕೆ ಸ್ಥಾಪಿಸಲು ಯೋಗ್ಯವಾದ ಭೂಮಿಯುಳ್ಳ ಆಸಕ್ತರು ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಕಾರ್ಯಕ್ರಮಕ್ಕೆ (ಪಿಎಂಇಜಿಪಿ) ಆನ್​ಲೈನ್ ಮೂಲಕ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ಸುಲಲಿತವಾಗಿ ಕೈಗಾರಿಕೆ ಆರಂಭಿಸಬಹುದಾಗಿದೆ. ಸಣ್ಣ ಕೈಗಾರಿಕೆ ಘಟಕಗಳಿಗೆ 50 ಲಕ್ಷ ರೂ.ವರೆಗೆ ಸಾಲ, ಸೇವಾ ವಲಯದ ಘಟಕಗಳಿಗೆ 25 ಲಕ್ಷ ರೂ.ವರೆಗೆ ಸಾಲ ದೊರೆಯಲಿದ್ದು ಈ ಕಾರ್ಯಕ್ರಮದಡಿ ಕಳೆದ ವರ್ಷ ಪ್ರತಿಶತ 130ರಷ್ಟು ಸಾಧನೆ ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿ ಶೇ.150ರಷ್ಟು ಗುರಿ ಮುಟ್ಟಲು ಅವಕಾಶ ನೀಡಿದೆ. ಬ್ಯಾಂಕ್​ಗಳ ವಾರ್ಷಿಕ ಸಾಲ ಕ್ರಿಯಾಯೋಜನೆ ಪ್ರಕಾರ 3300 ಜನರಿಗೆ ಸಾಲದ ನೆರವು ಸಿಗಬಹುದು ಎಂದು ವಿವರಿಸಿದರು.

ಕ್ಲಸ್ಟರ್​ಗೆ ಒತ್ತು, ಸಿಗಲಿದೆ ನೆರವಿನ ತುತ್ತು: ‘ಒಂದು ಜಿಲ್ಲೆ ಒಂದು ಉತ್ಪನ್ನ’ ಪರಿಕಲ್ಪನೆ ಪ್ರಕಾರ ಬೀದರ್ ಜಿಲ್ಲೆಯಲ್ಲಿ ಬಿದರಿ, ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣ ಗೊಂಬೆ, ಕೋಲಾರ ಜಿಲ್ಲೆಯಲ್ಲಿ ಶಿವಾರಪಟ್ಟಣ ಶಿಲ್ಪಕಲೆ ಕ್ಲಸ್ಟರ್ ಮಾಡಿ ಪ್ರೋತ್ಸಾಹ ನೀಡುವ ಯೋಜನೆ ಇದೆ. ಗುಂಪು ರೂಪದಲ್ಲಿ ಬಂದರೆ ಹೆಚ್ಚು ಅನುಕೂಲತೆಗಳು ದೊರೆಯುತ್ತದೆ. ಈ ಕ್ಲಸ್ಟರ್​ಗೆ 50 ಕೋಟಿ ರೂ. ವರೆಗೂ ನೆರವು ಸಿಗಲಿದೆ. ಹೂಡಿಕೆ 10 ಕೋಟಿ ರೂ. ಒಳಗಿದ್ದರೆ ಕೇಂದ್ರ ಶೇ.70, ರಾಜ್ಯ ಸರ್ಕಾರದಿಂದ ಶೇ.20 ಮತ್ತು ವಿಶೇಷ ವಾಹಕದಿಂದ ಶೇ.10 ಪಾಲುಗಾರಿಕೆ ಮೂಲಕ ಘಟಕ ಸ್ಥಾಪಿಸಲಾಗುತ್ತದೆ. 10 ಕೋಟಿ ಮೇಲ್ಪಟ್ಟು, 50 ಕೋಟಿ ರೂ. ವರೆಗೆ ಕೇಂದ್ರ ಶೇ.60, ರಾಜ್ಯ ಶೇ.20, ಎಸ್​ಪಿವಿ ಶೇ.20ರಷ್ಟು ಪಾಲುದಾರಿಕೆ ಹೊಂದಿರುತ್ತದೆ. ಕ್ಲಸ್ಟರ್ ಮಾದರಿಯು ಹಾರೋಹಳ್ಳಿಯಲ್ಲಿ ಯಶಸ್ವಿಯಾಗಿದ್ದು ಪ್ರಿಂಟ್ ಟೆಕ್ ಪಾರ್ಕ್ ಸ್ಥಾಪನೆಯಾಗಿದೆ ಎಂದರು.

ಅನುಮೋದನೆಗೊಂಡ ಕ್ಲಸ್ಟರ್- 11

ಅನುಷ್ಠಾನ ಹಂತದಲ್ಲಿರುವ ಕ್ಲಸ್ಟರ್-13

ತಾತ್ವಿಕ ಅನುಮೋದನೆಗೊಂಡ ಕ್ಲಸ್ಟರ್- 1

ಕೇಂದ್ರದ ಅನುಮೋದನೆಗೆ ಪ್ರಸ್ತಾವನೆ-1