ಹ್ಯಾಂಡ್ಲೋವಾ: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡಿನ ದಾಳಿಯಾಗಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇಲ್ಲಿನ ಸರ್ಕಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.
ರಾಜಧಾನಿ ಬ್ರಾಟಿಸ್ಲಾವಾದ ಈಶಾನ್ಯದಲ್ಲಿರುವ ಹ್ಯಾಂಡ್ಲೋವಾದಲ್ಲಿ ನಡೆದ ಕ್ಯಾಬಿನೆಟ್ ಸಭೆಯೊಂದರ ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಪ್ರಧಾನಿ ರಾಬರ್ಟ್ ಫಿಕೊ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣ ಕಾರ್ಯೋನ್ಮುಖರಾದ ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ರಷ್ಯಾದ ಪರ ಪ್ರಧಾನಿ ಅವರು ಕ್ಯಾಬಿನೆಟ್ ಸಭೆ ನಡೆಸುತ್ತಿದ್ದ ಹೌಸ್ ಆಫ್ ಕಲ್ಚರ್ ಹೊರಗೆ 4 ನಾಲ್ಕು ಗುಂಡುಗಳನ್ನು ಹಾರಿಸಲಾಗಿದೆ. ಬುಲೆಟ್ 59 ವರ್ಷದ ಫಿಕೊ ಅವರ ಹೊಟ್ಟೆಗೆ ತಗುಲಿದೆ. ಪಿಎಂ ಫಿಕೋ ಹೌಸ್‌ನ ಹೊರಗೆ ಜನರೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಗುಂಡಿನ ದಾಳಿ ನಡೆದಿದ್ದು ಇದರ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಸ್ಲೋವಾಕಿಯಾ ಸಂಸತ್ತಿನ ಉಪ ಸ್ಪೀಕರ್ ಲುಬೊಸ್ ಬ್ಲಾಹಾ ಅವರು ಅಧಿವೇಶನದಲ್ಲಿ ಪ್ರಧಾನಿ ಮೇಲೆ ದಾಳಿ ನಡೆದಿರುವುದನ್ನು ದೃಢಪಡಿಸಿದರು. ನಾವು ಹಿಂಸಾಚಾರವನ್ನು ಸಂಪೂರ್ಣವಾಗಿ ಮತ್ತು ಬಲವಾಗಿ ಖಂಡಿಸುತ್ತೇವೆ. ರಾಬರ್ಟ್ ಫಿಕೊ ಮೇಲಿನ ದಾಳಿ ಅನ್ನು ನಾವು ಖಂಡಿಸುತ್ತೇವೆ ಎಂದು ಪ್ರಗತಿಪರ ಸ್ಲೋವಾಕಿಯಾ ನಾಯಕ ಮೈಕಲ್ ಸಿಮೆಕಾ ಹೇಳಿದ್ದಾರೆ.
ಸಾರ್ವಜನಿಕ ರೇಡಿಯೋ ಮತ್ತು ದೂರದರ್ಶನದ ಸಂಪೂರ್ಣ ನಿಯಂತ್ರಣವನ್ನು ಸರ್ಕಾರ ಪಡೆಯುವ ಸರ್ಕಾರದ ಯೋಜನೆ ವಿವಾದಕ್ಕೆ ಒಳಗಾಗಿತ್ತು. ಇದನ್ನು ವಿರೋಧಿಸಿ ಸ್ಲೋವಾಕಿಯಾದ ಪ್ರಮುಖ ವಿರೋಧ ಪಕ್ಷಗಳಾದ ಪ್ರೋಗ್ರೆಸ್ಸಿವ್ ಸ್ಲೋವಾಕಿಯಾ ಮತ್ತು ಫ್ರೀಡಮ್ ಅಂಡ್ ಸಾಲಿಡಾರಿಟಿ ಪ್ರತಿಭಟನೆಗೆ ಮುಂದಾಗಿದ್ದವು. ಆದರೆ ಪ್ರಧಾನಿ ಮೇಲಿನ ದಾಳಿ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ರದ್ದುಗೊಳಿಸಿದವು.