ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್ ಅವರು ಎಎಪಿ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರಿಗೆ ಹಲವು ಬಾರಿ ಕಪಾಳಕ್ಕೆ ಹೊಡೆದು, ಕಾಲಿನಿಂದ ಒದ್ದಿದ್ದಾರೆ. ಆಕೆ ಸಹಾಯಕ್ಕೆ ಜೋರಾಗಿ ಕೂಗಿದರು ಯಾರು ಬರಲಿಲ್ಲ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಸ್ವಾತಿ ಮಲಿವಾಲ್ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ. ಮೇ 13 ರಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ದೌರ್ಜನ್ಯದ ಬಗ್ಗೆ ಎಳೆ ಎಳೆಯಾಗಿ ದೂರಿನಲ್ಲಿ ವಿವರಿಸಲಾಗಿದೆ.
ಮೇ 13 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಕೇಜ್ರಿವಾಲ್ ಅವರ ಮನೆಯ ಡ್ರಾಯಿಂಗ್ ರೂಮ್‍ನಲ್ಲಿ ಈ ಘಟನೆ ನಡೆದಿದೆ. ಘಟನೆಯ ಸಮಯದಲ್ಲಿ ಕೇಜ್ರಿವಾಲ್ ನಿವಾಸದಲ್ಲಿ ಇದ್ದರು ಎಂದು ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯು) ಮಾಜಿ ಮುಖ್ಯಸ್ಥೆ ಸ್ವಾತಿ ಆರೋಪಿಸಿದ್ದಾರೆ. ಎಫ್ಐಆರ್ನಲ್ಲಿ ಕೇಜ್ರಿವಾಲ್ ಹೆಸರನ್ನು ಉಲ್ಲೇಖಿಸಿಲ್ಲ.
ಷಕೇಜ್ರಿವಾಲ್ ಅವರ ವೈಯಕ್ತಿಕ ಸಹಾಯಕ ಬಿಭವ್ ಕುಮಾರ್ ನನಗೆ ಏಳೆಂಟು ಬಾರಿ ಕಪಾಳಮೋಕ್ಷ ಮಾಡಿದ್ದಾನೆ. ನಾನು ಎಷ್ಟೇ ಮನವಿ ಮಾಡಿಕೊಂಡರೂ ನನ್ನ ಎದೆ, ಹೊಟ್ಟೆ ಮತ್ತು ದೇಹದ ಕೆಳಭಾಗಕ್ಕೆ ಒದ್ದಿದ್ದಾನೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ತೆರಳಿದ್ದ ವಾಲಿವಾಲ್ ಕೇಜ್ರಿವಾಲ್ ಅವರ ಮನೆಯಲ್ಲಿ ಅವರ ಆಪ್ತ ಸಿಬ್ಬಂದಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದರು.