Delhi Police Sandeep Lamba
- ಪ್ರತಿಭಟನೆ ವೇಳೆ ಯುವತಿ ಕಪಾಳಕ್ಕೆ ಒಡೆದ ಪೊಲೀಸ್ ಅಧಿಕಾರಿ, ವಿಡಿಯೋ ವೈರಲ್.
- ಜಂತರ್ ಮಂತರ್ ಕರ್ತವ್ಯದಿಂದ ದೆಹಲಿಯ ಹಿರಿಯ ಪೋಲಿಸ್ ಅಧಿಕಾರಿ ತಕ್ಷಣವೇ ಜಾಗದಿಂದ ವಜಾ!.
- ಕೇಂದ್ರ, ದೆಹಲಿ ಪೊಲೀಸರು ಹಾಗೂ ಮಾನವ ಹಕ್ಕು ಆಯೋಗಕ್ಕೆ ನೋಟಿಸ್ ಜಾರಿ.
Delhi Police Sandeep Lamba: ಸೋಮವಾರ ಸಿಜೆಪಿ ಹಮ್ಮಿಕೊಂಡಿದ್ದ ಸಂಸತ್ ಚಲೋ ಯಾತ್ರೆ ವೇಳೆ ಯುವತಿಯೊಬ್ಬರಿಗೆ ಹಿರಿಯ ಪೊಲೀಸ್ ಅಧಿಕಾರಿ ಕಪಾಳಕ್ಕೆ ಹೊಡೆದ ವಿಡಿಯೋ ವೈರಲ್ ಆಗಿತ್ತು. ಸರ್ಕಾರದ ವಿರುದ್ಧ ಹಾಗೂ ಖಾಕಿ ನಡೆ ವಿರುದ್ಧ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆ ಬೆನ್ನಲ್ಲೇ ಈಶಾನ್ಯ ಜಿಲ್ಲೆಯ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ಸಂದೀಪ್ ಲಂಬಾ ಅವರನ್ನು ಜಂತರ್ ಮಂತರ್ ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪರೀಕ್ಷಾ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಬೆಂಬಲಿಗರು ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದರು. ಈ ವೇಲೆ ಪ್ರತಿಭಟನಾಕಾರರ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿದ್ದರು. ಬೇಕಂತಲೇ ಪ್ರತಿಭಟನಾಕಾರರು ಬೀಳುವಂತೆ ಹಾಗೂ ಕಾರಿನ ಗಾಜು ಹೊಡೆದು ಅವರ ಮೇಲೆ ತಪ್ಪೊರಸಿದ ಘಟನೆಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಯುವತಿಗೆ ಕಪಾಳ ಮೋಕ್ಷ ಮಾಡಿದ ಸಂಬಂಧ ಕಾಂಗ್ರೆಸ್‌ನ ಮಾಜಿ ಸಂಸದ ಸಾಕೇತ್ ಗೋಖಲೆ ಪೊಲೀಸ್ ವಿರುದ್ಧ ದೂರು ದಾಖಲಿಸಿದರು. ಪೊಲೀಸರ ದೌರ್ಜನ್ಯದ ಬಗ್ಗೆ ದೂರು ಸ್ವೀಕರಿಸಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಸರ್ಕಾರ ತಿಳಿಸಿತ್ತು. ಹಾಗಾಗಿ ನಾನು ಸ್ವತಃ ದೂರು ಸಲ್ಲಿಸಿದ್ದೇನೆ ಎಂದು ಎಕ್ಸ್ನಲ್ಲಿ ಸಾಕೇತ್ ಗೋಖಲೆ ಬರೆದುಕೊಂಡಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಡಿಸಿಪಿ ಸಂದೀಪ್ ಲಂಬಾ ಅವರು ಶಾಂತಿಯುತವಾಗಿ ಪ್ರೊಟೆಸ್ಟ್ ಮಾಡುತ್ತಿದ್ದ ಯುವತಿಗೆ ಹೊಡೆದಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಜನರನ್ನು ಚದುರಿಸಲು ನೀರು ಹಾಯಿಸುವ ವಾಹನಗಳನ್ನು ಬಳಸುವ ಬದಲು ಕೊನೆಯ ಆಯ್ಕೆಯಾದ ಅಶ್ರುವಾಯುವನ್ನು ನೇರವಾಗಿ ಪ್ರತಿಭಟನಾಕಾರರ ಮೇಲೆಯೇ ಪ್ರಯೋಗಿಸಲಾಗಿದೆ ಎಂದು ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠಕ್ಕೆ ಮಾಹಿತಿ ನೀಡಿದರು.
ಹಲವರಿಗೆ ನೋಟಿಸ್ ಜಾರಿ
ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ದೆಹಲಿ ಪೊಲೀಸರು ಮತ್ತು ಕೇಂದ್ರ ಸರ್ಕಾರದ ಜೊತೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ನೀಡಿದೆ. 4 ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿಡಲು ಆದೇಶಿಸಿದೆ.
ದೆಹಲಿಯಲ್ಲಿ ಮುಂದುವರೆದದ ಪ್ರತಿಭಟನೆ
ಜುಲೈ 20 ರಂದು ಮಳೆಗಾಲದ ಅಧಿವೇಶನದ ಮೊದಲ ದಿನವೇ ಸಿಜೆಪಿ ಸಂಸತ್ ಚಲೋ ಪಾದಯಾತ್ರೆ ಯೋಜಿಸಿತ್ತು. ಪೋಲಿಸರು ಅನುಮತಿ ನೀಡದಿದ್ದರೂ ಪ್ರತಿಭಟನಾಕಾರರು ಸಂಸತ್ತಿನತ್ತ ಸಾಗಲು ಯತ್ನಿಸಿದರು. ಆ ಕಾರಣದಿಂದಾಗಿ ಆಶ್ರುವಾಯು ಸಿಡಿಸಿದರು. ಲಾಠಿಚಾರ್ಜ್ ನಡೆಸಿದರು. ಮಧ್ಯಾಹ್ನದ ವೇಳೆ CJP ವಕ್ತಾರರು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು. ಆದರೆ, ಈ ಮಾತುಕತೆ ವ್ಯರ್ಥವಾಯಿತು ಎಂದು ಸಿಜೆಪಿ ಹೇಳಿದೆ, (ಏಜೆನ್ಸೀಸ್).