ನ್ಯೂಸ್

ಸರ್ಕಾರಿ ಶಾಲೆ, ಕಾಲೇಜುಗಳ 7,500 ವಿದ್ಯಾರ್ಥಿಗಳಿಗೆ ಸ್ಕಿಲ್ ಟ್ರೈನಿಂಗ್

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳ 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಐಟಿಐಗಳಲ್ಲಿ ಕೌಶಲ ತರಬೇತಿ ನೀಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಆದೇಶ ಹೊರಡಿಸಿದೆ.

ಪ್ರೌಢಶಾಲಾ ಮತ್ತು ಪಿಯು ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲು ‘ಸ್ಕಿಲ್ ಅಟ್ ಸ್ಕೂಲ್’ ಎಂಬ ಕಾರ್ಯಕ್ರಮವನ್ನು 2025-26ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ೋಷಿಸಲಾಗಿತ್ತು. ಅದರಂತೆ, ಆಯ್ದ 200 ಪ್ರೌಢಶಾಲೆ ಮತ್ತು 50 ಪಿಯು ಕಾಲೇಜುಗಳ 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲು ಆದೇಶ ಹೊರಡಿಸಿದೆ.

ಕಾರ್ಯಕ್ರಮ ಅನುಷ್ಠಾನಕ್ಕೆ ತಗಲುವ 5.25 ಕೋಟಿ ರೂ.ಗಳ ವೆಚ್ಚವನ್ನು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿಯಲ್ಲಿ ಭರಿಸುವಂತೆ ಸೂಚಿಸಲಾಗಿದೆ. ಐಟಿಐಗಳಲ್ಲಿ ತರಬೇತಿ ಪಡೆದಿರುವ ತರಬೇತುದಾರರ ಮುಖಾಂತರ ತರಬೇತಿ ಕೊಡಿಸಲಾಗುತ್ತದೆ.

300 ಗಂಟೆಗಳ ತರಬೇತಿ:

ಐಟಿಐನಿಂದ 10 ಕಿಮೀ ವ್ಯಾಪ್ತಿಯಲ್ಲಿರುವ ಪ್ರೌಢಶಾಲೆ, ಪಿಯು ಕಾಲೇಜುಗಳ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಾರದ ಮೂರು ದಿನ ಎರಡು ಗಂಟೆಗಳ ಕಾಲ ಆಯಾ ಶಾಲೆಯೊಂದಿಗೆ ಮ್ಯಾಪಿಂಗ್ ಮಾಡಲಾದ ಸಂಸ್ಥೆಗಳ ತರಬೇತುದಾರರು ಶಾಲೆಗಳಿಗೆ ತೆರಳಿ ತರಬೇತಿ ನೀಡಲಿದ್ದಾರೆ. ಪ್ರತಿ ಶನಿವಾರ 4 ಗಂಟೆಗಳ ಐಟಿಐನಲ್ಲಿಯೇ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಒಟ್ಟು 300 ಗಂಟೆಗಳ ಬೊಧನಾ ಅವಧಿ ನಿಗದಿ ಮಾಡಲಾಗಿದೆ.

ಕಾರ್ಯಕ್ರಮದ ಉದ್ದೇಶ

- ವಿದ್ಯಾರ್ಥಿಗಳಿಗೆ ಅನುಭವಾತ್ಮಕ ಕಲಿಕೆಯ ಮೂಲಕ ಕೌಶಲಾಧಾರಿತ ಶಿಕ್ಷಣ ಒದಗಿಸುವುದು

- ವಿದ್ಯಾರ್ಥಿಗಳಲ್ಲಿ ಔದ್ಯೋಗಿಕ ಕೌಶಲ ವೃದ್ಧಿಸುವ ಮೂಲಕ ಉತ್ತಮ ಉದ್ಯೋಗ ಅವಕಾಶ ಕಲ್ಪಿಸುವುದು

- ಎಲ್ಲ ವಿದ್ಯಾರ್ಥಿಗಳಿಗೂ ಇಂಟರ್ನ್‌ಶಿಪ್ ಒದಗಿಸುವುದು ಮತ್ತು ಮುಂದಿನ ವೃತ್ತಿ ಆಯ್ಕೆಗೆ ಸಹಕರಿಸುವುದು