ಬಹು ಕೌಶಲ ಹೊಂದಿದವನೇ ಮಾರ್ಕೆಟ್ನಲ್ಲಿ ಮಹಾಶೂರ ಎಂಬುದು ಈಗಿನ ಟ್ರೆಂಡ್. ಯಾವುದೋ ಒಂದು ಕ್ಷೇತ್ರದಲ್ಲಿ ಪರಿಣಿತರಾಗಿರುವ ಜತೆಗೆ ಪೂರಕ ಕೌಶಲಗಳನ್ನು ಕಲಿತುಕೊಳ್ಳುವ ಅನಿವಾರ್ಯತೆ ಇದೆ. ಹಾಗೆಯೇ, ಇಂಟರ್ನೆಟ್ ಬಳಕೆ ಹೆಚ್ಚಾದಂತೆ ಜ್ಞಾನದ ಹರಿವು ವೇಗವಾಗಿ ಲಭ್ಯವಾಗುತ್ತಿದ್ದು, ಯಾರ ಹಂಗಿಲ್ಲದೆ ಕಲಿತುಕೊಳ್ಳುವ ಅವಕಾಶವಿದೆ. ಒತ್ತಡದ ಬದುಕಿನ ನಡುವೆ ಸಮಯ ಹೊಂದಿಸಿಕೊಂಡು ಕೌಶಲ ಕಲಿತುಕೊಳ್ಳಲು ಎಲ್ಲರಿಗೂ ಮುಕ್ತ ಅವಕಾಶಗಳು ಒದಗಿಬಂದಿವೆ. ಸರ್ಕಾರ ಹಾಗೂ ಸರ್ಕಾರೇತರ ಅಸಂಖ್ಯಾತ ವೆಬ್ಸೈಟ್ಗಳು ಕೌಶಲ ಕಲಿಕೆಗೆ ಅವಕಾಶ ಒದಗಿಸುತ್ತಿವೆ. ಯೂಟ್ಯೂಬ್ ಗುರುಗಳ ಸಂಖ್ಯೆಗೆ ಕಡಿಮೆ ಇಲ್ಲ.
ಭಾರತ ಸರ್ಕಾರದ ಸ್ಕಿಲ್ ಇಂಡಿಯಾ ರೂಪಿಸಿದ ವೆಬ್ಸೈಟ್ ಮೂಲಕ ಇಂದು ಲಕ್ಷಾಂತರ ಮಂದಿ ಕೋರ್ಸ್ಗಳನ್ನು ಮಾಡಿಕೊಂಡು ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿದ್ದಾರೆ. ಈ ವೆಬ್ಸೈಟ್ ಪ್ರತಿಯೊಬ್ಬ ನಾಗರಿಕರಿಗೆ ಉಚಿತ ಆನ್ಲೈನ್ ಕೋರ್ಸ್ ಮೂಲಕ ತಾಂತ್ರಿಕ ಕೌಶಲಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೋರ್ಸ್ಗಳು 14 ವರ್ಷದಿಂದ 80 ಪ್ಲಸ್ವರೆಗಿನ ಪ್ರತಿಯೊಂದು ವಯೋಮಾನದ ವರ್ಗಕ್ಕೆ ಉಪಯುಕ್ತವಾಗಿವೆ.
ಈ ವೇದಿಕೆ ಮೂಲಕ ತರಬೇತಿ ಪಡೆದವರಿಗೆ ಸ್ಕಿಲ್ ಇಂಡಿಯಾ ಪ್ರಮಾಣೀಕರಿಸುತ್ತದೆ. ಇದು ರ್ನಿದಿಷ್ಟ ವ್ಯಾಪಾರ ಅಥವಾ ಕೌಶಲದಲ್ಲಿ ಕೌಶಲ ಮತ್ತು ಜ್ಞಾನವನ್ನು ಮೌಲ್ಯೀಕರಿಸುವ ಸರ್ಕಾರದ -ಮಾನ್ಯತೆ ಪಡೆದ ಪ್ರಮಾಣೀಕರಣವಾಗಿದೆ. ಇದು ಉದ್ಯೋಗ ಪಡೆಯಲು, ಸ್ವಂತ ವ್ಯವಹಾರ ಪ್ರಾರಂಭಿಸಲು ಸಹಾಯ ಮಾಡುತ್ತದೆ. 18 ವಿಭಿನ್ನ ಪ್ರಬೇಧದ ಅವಕಾಶಗಳು ಇಲ್ಲಿವೆ. ಆಸಕ್ತಿ ಇರುವ ವಿಷಯದಲ್ಲಿ ತರಬೇತಿ ಪಡೆದುಕೊಳ್ಳಬಹುದು.
ಮುಂದೊಂದು ದಿನ ಇದೊಂದು ರೀತಿ ಕಡ್ಡಾಯವಾದರೂ ಅಚ್ಚರಿ ಪಡಬೇಕಿಲ್ಲ. ಕೌಶಲ ಕಲಿಕೆಯಿಂದ ನೈಪುಣ್ಯ ಹೆಚ್ಚುತ್ತದೆ. ಇದು ವ್ಯಕ್ತಿಯನ್ನು ಆ ಕ್ಷೇತ್ರದಲ್ಲಿ ಬಲಗೊಳಿಸುತ್ತದೆ.
ಶಾಲೆ, ಕಾಲೇಜಿನಲ್ಲಿ ಕಲಿಕೆ ಒಂದು ಹಂತದವರೆಗೆ ಇರುತ್ತದೆ ಅಥವಾ ಅದು ಆಯಾ ಕ್ಷೇತ್ರದಲ್ಲಿ ಉಪಯೋಗಕ್ಕೆ ಬಾರದೇ ಇರಬಹುದು. ಹೀಗಾಗಿ ಸಾಂಪ್ರದಾಯಿಕ ಶಿಕ್ಷಣದ ಹೊರತಾಗಿ ಕೌಶಲ ಕಲಿಕೆ ಅನಿವಾರ್ಯ. ಈ ರೀತಿ ಕಲಿತುಕೊಂಡಾಗ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ, ಆದ್ಯತೆ ಸಿಗುತ್ತದೆ ಅಥವಾ ಸ್ವಂತ ಉದ್ಯೋಗಕ್ಕೂ ಲಾಭಕರ. ರಾಜ್ಯದಲ್ಲಿ ಸ್ಕಿಲ್ ಡೆವಲಪ್ಮೆಂಟ್ ಕಾರ್ಪೊರೇಷನ್ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ವಿವಿಧ ಯೋಜನೆಗಳನ್ನು ಹೊಂದಿದೆ. ಇಲ್ಲಿ ಹೆಸರು ನೋಂದಾಯಿಸಿದವರಿಗೆ ತರಬೇತಿ ಕೊಡಿಸುವ ಕೆಲಸ ಮಾಡುತ್ತದೆ. ಆಸಕ್ತರು ಇದರ ಲಾಭವನ್ನೂ ಪಡೆದುಕೊಳ್ಳಬಹುದು.
ಭಾರತದಲ್ಲಿ ಮಾರುಕಟ್ಟೆ ಅಥವಾ ಕೈಗಾರಿಕೆಗಳಿಗೆ ಅಗತ್ಯವಾದ ಕೌಶಲ ಶೈಕ್ಷಣಿವಾಗಿ ಕಲಿಸಲಾಗುತ್ತಿಲ್ಲ. ಹೀಗಾಗಿ ಉದ್ಯೋಗಿಯಾಗಲು ಅಥವಾ ಹೆಚ್ಚಿನ ಅರಿವಿಗಾಗಿ ಅಗತ್ಯವಾದ ಸ್ಕಿಲ್ ಪ್ರತ್ಯೇಕವಾಗಿ ಕಲಿತುಕೊಳ್ಳಬೇಕಾಗುತ್ತದೆ. ಇದರಿಂದ ಅವರ ಅರಿವಿನ ಮಟ್ಟ ಹೆಚ್ಚಾಗಿ, ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ.
- ಡಾ.ಮುರಳೀಧರ್ ಬಿ.ಎಲ್. ಹಿರಿಯ ಪ್ರಾಧ್ಯಾಪಕ, ಗಣಕಶಾಸ್ತ್ರ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ